ಸಂಭ್ರಮದ ಹೂವಿನ ಕರಗ
ಚಿಕ್ಕಬಳ್ಳಾಪುರ: ಜಾಲಾರಿ ಗಂಗಮಾಂಭ ದೇವಾಲಯದ ಶ್ರೀ ಧರ್ಮರಾಯಸ್ವಾಮಿ ಹೂವಿನ ಕರಗ ಮಹೋತ್ಸವವು ಅದ್ದೂರಿಯಾಗಿ ನೆರವೇರಿತು. ಪೂಜಾರಿ ಬೇತಮಂಗಲ ನಾಗರಾಜ್ ಹೂವಿನ ಕರಗವನ್ನು ಹೊತ್ತು ಭಕ್ತರ ಗಮನವನ್ನು ಸೆಳೆದರು.
ಬೆಂಗಳೂರಿನ ಕರಗದಂತೆ ಜಾಲಾರಿ ಗಂಗಮಾಂಭ ದೇವಾಲಯದ ಹೂವಿನ ಕರಗ ಮಹೋತ್ಸವವು ಖ್ಯಾತಿಯನ್ನು ಪಡೆದುಕೊಂಡಿದೆ. ಅರ್ಧ ಶತಮಾನಕ್ಕೂ ಹೆಚ್ಚಿನ ಇತಿಹಾಸವನ್ನು ಹೊಂದಿರುವ ಹಿನ್ನೆಲೆಯಲ್ಲಿ ಭಕ್ತರ ನಿರೀಕ್ಷೆಯನ್ನು ಮೀರಿಸುವಂತೆ ದೇವಾಲಯದ ಸಮಿತಿಯೂ ನಾಲ್ಕೈದು ದಿನಗಳ ಕಾಲ ಆಕರ್ಷಕ ಕಾರ್ಯಕ್ರಮಗಳನ್ನು ಕೈಗೊಳ್ಳುವ ಮೂಲಕ ಮಹೋತ್ಸವವಕ್ಕೆ ವಿಶೇಷ ಮೆರಗು ತರಲು ಶ್ರಮಿಸುತ್ತದೆ. ಶನಿವಾರ ನಡೆದ ಈ ಕಾರ್ಯಕ್ರಮದ ಪ್ರಯುಕ್ತ ನಗರದಲ್ಲಿರುವ ಜಾಲಾರಿ ಗಂಗಮಾಂಭ ದೇವಾಲಯದಲ್ಲಿ ದೇವರಿಗೆ ವಿಶೇಷ ಅಭಿಷೇಕ, ಅಲಂಕಾರವನ್ನು ಕೈಗೊಳ್ಳಲಾಗಿತ್ತು.
ರಾತ್ರಿ 10.30 ಕ್ಕೆ ಸರಿಯಾಗಿ ನಾಗರಾಜ್ ಆಲಯದ ಬಾಗಿಲಿನಿಂದ ಹೂವಿನ ಕರಗವನ್ನು ಹೊತ್ತು ಕುಳಿತುಕೊಂಡು ಹೊರ ಬರುತ್ತಿದ್ದಂತೆ ಭಕ್ತರ ಘೋಷಣೆಗಳು ಮುಗಿಲು ಮುಟ್ಟಿದವು. ಆಲಯಕ್ಕೆ ಮೂರು ಪ್ರದಕ್ಷಿಣೆ ಹಾಕಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಕರಗದ ನೃತ್ಯವನ್ನು ಕಂಡು ಭಕ್ತಾದಿಗಳು ಪುಳುಕಿತರಾದರು. ಕರಗವನ್ನು ನೋಡುವ ಆಸೆಯಲ್ಲಿ ರಾತ್ರಿ 9 ಗಂಟೆಗೆಲ್ಲಾ ನಗರಸಭೆ ಕಚೇರಿಯ ಮುಂಭಾಗದ ರಸ್ತೆಯಿಂದ ಹಿಡಿದು ಗಂಗಮ್ಮನಗುಡಿ ರಸ್ತೆಯವರೆಗೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ತುಂಬಿದ್ದರು. ಕರಗ ನೆರೆದಿದ್ದ ಭಕ್ತಾದಿಗಳಿಗೆ ಆಶೀರ್ವಾದ ಮಾಡಿ, ನಂತರ ಕಾರ್ಖಾನೆ ಪೇಟೆ, ಬಜಾರ್ ರಸ್ತೆ, ಬಿ.ಬಿ.ರಸ್ತೆ, ಎಂ.ಜಿ.ರಸ್ತೆ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು.
ಕರಗ ಪ್ರಮುಖ ದೇವಾಲಯಗಳಲ್ಲಿ ವಿಶೇಷ ಪೂಜೆಯನ್ನು ಸ್ವೀಕರಿಸಿತು. ಇನ್ನೂ ಕರಗ ತಮ್ಮ ಮನೆಗಳ ಬಳಿಗೆ ಬರುತ್ತಿದೆ ಎನ್ನುವುದನ್ನು ತಿಳಿದುಕೊಂಡ ಭಕ್ತಾದಿಗಳು ರಸ್ತೆಗಳಲ್ಲಿ ನೀರನ್ನು ಹಾಕಿ, ರಂಗೋಲೆ ಬಿಡಿಸಿ ಪೂಜೆಯನ್ನು ಸಲ್ಲಿಸಿದರು. ಪೂಜಾರಿಗೆ ಕಾಣಿಕೆಗಳನ್ನು ನೀಡಿ ಹರಕೆಗಳನ್ನು ಹೊತ್ತರು. ಭಾನುವಾರ ಮಧ್ಯಾಹ್ನದ ಅವಧಿ ಮುಗಿಯುತ್ತಿದೆ ಎನ್ನುವಷ್ಟರಲ್ಲಿ ನಗರದ ವಿವಿಧೆಡೆ ಸಂಚರಿಸಿದ ಕರಗ ಮತ್ತೆ ಗಂಗಮಾಂಭ ದೇವಾಲಯಕ್ಕೆ ಆಗಮಿಸಿತು. ಆಲಯದ ಮುಂಭಾಗದಲ್ಲಿ ಅಗ್ನಿಗುಂಡವನ್ನು ತುಳಿದ ನಂತರ ಕರಗವನ್ನು ಕೆಳಗಿಳಿಸಲಾಯಿತು. ಕಾರ್ಯಕ್ರಮಕ್ಕೆ ಆಗಮಿಸಿದವರಿಗಾಗಿ ದಾನಿಗಳು ಹಲವೆಡೆ ಅನ್ನಸಂತರ್ಪಣೆ ಕೈಗೊಳ್ಳುವುದರ ಜೊತೆಗೆ ಮಜ್ಜಿಗೆ ಪಾನಕ ವಿತರಿಸಿದರು. ಅಲ್ಲಲ್ಲಿ ದೇವರ ಭಜನೆ, ವಾದ್ಯಗೋಷ್ಠಿ ಕಾರ್ಯಕ್ರಮಗಳು ನಡೆದವು.