ಕುದುರೆಗುಂಡಿ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಉರುಸ್
ನರಸಿಂಹರಾಜಪುರ: ಕುದುರೆಗುಂಡಿಯ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಸೈಯದ್ ಸಾದತ್ ಷರೀಪುಲ್ ಔಲಿಯಾ ಅವರ 84ನೇ ವಾರ್ಷಿಕ ಉರೂಸ್ ಕಾರ್ಯಕ್ರಮವು ಭಾನುವಾರ ವಿಜೃಂಭಣೆಯಿಂದ ನಡೆಯಿತು.
ಭಾನುವಾರ ಬೆಳಗ್ಗೆಯಿಂದಲೇ ಕುದುರೆಗುಂಡಿಯ ದರ್ಗಾ ಹಾಲ್ನಲ್ಲಿ ಪ್ರಾರ್ಥನೆ, ಧಾರ್ಮಿಕ ಕಾರ್ಯಕ್ರಮ ನಡೆಯಿತು. ಸಂಜೆ 6 ಗಂಟೆಗೆ ಮಲೆನಾಡಿನ ಸುಪ್ರಸಿದ್ಧ ದಫ್ ಕಲಾವಿದರಿಂದ ಪವಿತ್ರ ಸಂದಲ್ ಮೆರವಣಿಗೆ ನಡೆಯಿತು. ರಾತ್ರಿ 8 ಗಂಟೆಗೆ ಪ್ರವಚನ ಮತ್ತು ಸರ್ವಧರ್ಮ ಸಮ್ಮೇಳನ ನಡೆಯಿತು.
ಮಸೀದಿ ಅಧ್ಯಕ್ಷ ಎಂ.ಎಂ.ಅಹಮದ್ ಅಧ್ಯಕ್ಷತೆ ವಹಿಸಿದ್ದರು. ಖತೀಬಾದ ಮಹಮ್ಮದ್ ಷರೀಪ್ ಸಖಾಫಿ ಉದ್ಘಾಟಿಸಿದರು. ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಧರ್ಮ ಗುರು ಅಪೀಲ್ ನಹಿಮುದ್ದೀನ್ ನೂರಿ ಮಾತನಾಡಿ, ಎಲ್ಲಾ ಧರ್ಮಗಳು ಶಾಂತಿಯನ್ನೇ ಬಯುಸುತ್ತದೆ. ಬೇರೆ ಧರ್ಮವನ್ನು ಸಹ ಗೌರವಿಸಬೇಕು ಎಂದು ಕರೆ ನೀಡಿದರು.
ಮುಖ್ಯ ಅತಿಥಿಯಾಗಿದ್ದ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಟಿ. ರಾಜೇಂದ್ರ ಮಾತನಾಡಿದರು. ವಿಶೇಷ ಆಹ್ವಾನಿತರಾಗಿ ಇಸ್ಹಾಕ್ ಸಖಾಫಿ ನಂದಾವರ, ಕೊಪ್ಪದ ನಿತ್ಯಾದಾರ ಮಾತೆಯ ದೇವಾಲಯದ ಧರ್ಮಗುರು ಫಾದರ್ ಜೋಸೆಫ್, ಕೊಪ್ಪದ ಅರವಿಂದ ಸೋಮಯಾಜಿ ಇತರರಿದ್ದರು.