ಮನಸೂರೆಗೊಂಡ ಸಂಗೀತ ಸುಧೆ
ತರೀಕೆರೆ: ಪಟ್ಟಣದ ಎಸ್ಜೆಎಂ ಕಾಲೇಜು ವತಿಯಿಂದ ಕಾಲೇಜು ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಪಂ.ಡಾ. ಪುಟ್ಟರಾಜ ಗವಾಯಿಗಳ ಶಿಷ್ಯರಾದ ಶಿವಮೊಗ್ಗ ಗಾಯಕ ಹುಮಾಯೂನ್ ಹರ್ಲಾಪುರ ಅವರು ಒಂದು ಗಂಟೆ ಕಾಲ ಪ್ರಸ್ತುತ ಪಡಿಸಿದ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಹಾಡುಗಾರಿಕೆ ಸಂಗೀತ ಸುಧೆ ಎಲ್ಲರ ಮನಸೂರೆಗೊಂಡಿತು. ಮಾಯೆ ಸರಸ್ವತಿ ಶಾರದಾ ವೀಣಾಪಾಣಿ, ಉಳ್ಳವರು ಶಿವಾಲಯವ ಮಾಡುವರು, ಎಲ್ಲಿಗೆ ಬಂತೋ ಸಂಗಯ್ಯ, ಎದೆ ತುಂಬಿ ಹಾಡಿದೆನು ಇತ್ಯಾದಿ ಗೀತೆಗಳನ್ನು ಮತ್ತೆ ಮತ್ತೆ ಕೇಳಬೇಕೆನಿಸುವಷ್ಟು ಸುಶ್ರಾವ್ಯವಾಗಿ ಮೂಡಿಬಂತು. ಕಲಾವಿದರಾದ ಶ್ಯಾಂ ನಿರಂಜನ್, ರವೀಂದ್ರ ಮೊಳಗಿ ಪಕ್ಕವಾದ್ಯ ನುಡಿಸಿದರು.
ಪ್ರಾಚಾರ್ಯ ಪ್ರೊ. ಪಿ. ಲಿಂಗಪ್ಪ, ಬಿಇಒ ಹರಿಪ್ರಸಾದ್, ಪ್ರೊ. ಬಿ.ಅರ್. ಡಮ್ಮಳ್ಳಿ, ಪ್ರೊ. ಕೆ.ಆರ್. ವೀರೇಶ್, ಪ್ರೊ. ಆರ್.ವಿ. ಹೆಗಡಾಳ್, ಪ್ರೊ. ಬಸವರಾಜಪ್ಪ, ಟಿ.ಎಂ. ಶ್ರುತಿ ಮತ್ತಿತರರುಭಾಗವಹಿಸಿದ್ದರು.
ಅನಿಯಮಿತ ವಿದ್ಯುತ್ ಕಡಿತಕ್ಕೆ ಖಂಡನೆ
ಶೃಂಗೇರಿ: ತಾಲೂಕಿನಾದ್ಯಂತ ಕಳೆದ ಕೆಲದಿನಗಳಿಂದ ಅಸಮರ್ಪಕ
ವಿದ್ಯುತ್ ಸರಬರಾಜು, ಅನಿಯಮಿತ ವಿದ್ಯುತ್ ಕಡಿತ ಉಂಟಾಗುತ್ತಿರುವುದರಿಂದ ಗ್ರಾಹಕರಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ತಾಲೂಕು ದಲಿತ ಸಂಘರ್ಷ ಸಮೀತಿ (ಪ್ರೂ.ಬಿ.ಕೃಷ್ಣಪ್ಪ ಬಣ) ತಾಲೂಕು ಸಂಚಾಲಕ ಸಾಲ್ಮರ ರವಿ,ಹಾಗೂ ಜಿಲ್ಲಾ ಸಹ ಸಂಚಾಲಕ ಕರಡಯ್ಯ ಆರೋಪಿಸಿದ್ದಾರೆ.
ಅವರು ಈ ಕುರಿತು ಹೇಳಿಕೆ ನೀಡಿ ಕಳೆದ ಕೆಲ ತಿಂಗಳುಗಳಿಂದ ಪದೇ ಪದೇ ವಿದ್ಯುತ್ ಕಡಿತ ನಡೆಸಲಾಗುತ್ತಿತ್ತು. ಕೆಲದಿನಗಳಿಂದ ಹಗಲು ರಾತ್ರಿ ವಿದ್ಯುತ್ ಸಂಪರ್ಕವೇ ಇಲ್ಲದಂತಾಗಿದೆ. ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ರಾತ್ರಿ ಸ್ಥಗಿತಗೊಂಡು ವಿದ್ಯುತ್ ಸಂಪರ್ಕ ಮಾರನೇ ದಿನ ಮದ್ಯಾಹ್ನದವರೆಗೂ ಇರುವುದಿಲ್ಲ. ಬೇಸಿಗೆಯ ದಿನಗಳಲ್ಲಿ ದಿನದಲ್ಲಿ, ರಾತ್ರಿಯ ವೇಳೆಯಲ್ಲಿ ಕೆಲವು ಹೊತ್ತಾದರೂ ಸಮರ್ಪಕ ವಿದ್ಯುತ್ ನೀಡದೇ ಗ್ರಾಹಕರನ್ನು ವಂಚಿಸಲಾಗುತ್ತಿದೆ. ಇನ್ನು ಮಳೆಗಾಲದಲ್ಲಿ ಇವರು ವಿದ್ಯುತ್ ಸೌಲಭ್ಯ ನೀಡುವ ಭರವಸೆಯಾದರೂ ಏನು. ಸರ್ಕಾರ,ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಗ್ರಾಮೀಣ ಪ್ರದೇಶಗಳಲ್ಲಿ ಈ ರೀತಿ ಕಾರಣವಿಲ್ಲದೇ ಹಗಲು ರಾತ್ರಿ ವಿದ್ಯುತ್ ಕಡಿತಗೊಳಿಸುತ್ತಿರುವದರ ಬಗ್ಗೆ ಗಮನ ಹರಿಸಿ ಗ್ರಾಹಕರಿಗಾಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ತಮ್ಮ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.