ಸೂಕ್ತ ತನಿಖೆಯಾಗಲಿ
ಚಿಕ್ಕಮಗಳೂರು: ತನಿಕೋಡು ಶೂಟೌಟ್ ಪ್ರಕರಣದ ಬಗ್ಗೆ ನ್ಯಾಯಯುತ ತನಿಖೆ ನಡೆಸಬೇಕು ಹಾಗೂ ಪೊಲೀಸರಲ್ಲಿ ನೈತಿಕ ಆತ್ಮಸ್ಥೈರ್ಯ ತುಂಬುವಂತೆ ಆಗ್ರಹಿಸಿ ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳು ನಗರದಲ್ಲಿ ಸೋಮವಾರ ಮೌನ ಪ್ರತಿಭಟನೆ ನಡೆಸಿದರು.
ಇಲ್ಲಿನ ಹಳೇ ತಾಲೂಕು ಕಚೇರಿಯಿಂದ ಮೆರವಣಿಗೆಯಲ್ಲಿ ಹೊರಟ ನಿವೃತ್ತ ಪೊಲೀಸ್ ಅಧಿಕಾರಿಗಳು, ಜಿಲ್ಲಾ ರಕ್ಷಣಾಧಿಕಾರಿಗಳ ಕಚೇರಿಗೆ ತೆರಳಿ ಜಿಲ್ಲಾ ರಕ್ಷಣಾಧಿಕಾರಿ ಚೇತನ್ ಅವರಿಗೆ ಮನವಿ ಸಲ್ಲಿಸಿದ ಬಳಿಕ ಅಪರ ಜಿಲ್ಲಾಧಿಕಾರಿ ಅರ್ಚನಾ ಅವರಿಗೆ ಮನವಿ ಸಲ್ಲಿಸಿದರು.
ತನಿಕೋಡು ಚೆಕ್‌ಪೋಸ್ಟ್ ಬಳಿ ನಡೆದ ಶೂಟೌಟ್ ಪ್ರಕರಣದ ಬಗ್ಗೆ ಹಲವು ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದು, ಸರ್ಕಾರ ಇವುಗಳಿಗೆ ಮಣಿದು ಪೊಲೀಸರ ವಿರುದ್ಧ ಕ್ರಮ ಕೈಗೊಂಡರೆ ನ್ಯಾಯಯುತ ತನಿಖೆಗೆ ಹಿನ್ನಡೆಯಾಗಲಿದೆ. ಸತ್ಯಾಸತ್ಯತೆಯನ್ನು ಮರೆ ಮಾಚುವುದರಿಂದ ಪೊಲೀಸರಲ್ಲಿ ಆತ್ಮಸ್ಥೈರ್ಯ ಕುಗ್ಗಿ, ಸಾರ್ವಜನಿಕರ ಶಾಂತಿ ಹಾಗೂ ನೆಮ್ಮದಿಗೆ ಭಂಗ ಉಂಟಾಗುವ ಸಂಭವ ಇದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಆದುದರಿಂದ ನ್ಯಾಯಯುತವಾಗಿ ತನಿಖೆ ನಡೆಸಬೇಕು ಹಾಗೂ ಪೊಲೀಸರಿಗೆ ಆತ್ಮಸ್ಥೈರ್ಯ ತುಂಬಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಎಸ್. ಚಂದ್ರಾನಾಯ್ಕ, ಕಾರ್ಯಾಧ್ಯಕ್ಷ ಎಚ್.ಎಂ. ಜವರಯ್ಯ, ಅಧ್ಯಕ್ಷ ಎಚ್.ಎನ್. ಪಂಚಾಕ್ಷರಪ್ಪ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿಗಳು ಪಾಲ್ಗೊಂಡಿದ್ದರು.