ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಭದ್ರಾ ನೀರೋ, ಸುಭದ್ರ ರಸ್ತೆಯೋ?

Rashmi Kasaragodu
Updated On : 30 Apr 2014, 11:35 am

 ಕಡೂರು ಕೃಷ್ಣಮೂರ್ತಿ
ಕ.ಪ್ರ. ವಾರ್ತೆ, ಕಡೂರು, ಏ.29
ಕೆಲವೇ ದಿನದಲ್ಲಿ ಸಮಸ್ಯೆ ನೀಗುವ ಮೂಲಕ ನಿರಾಂತಕವಾಗಿ ಭದ್ರಾ ಡ್ಯಾಂನಿಂದ ಶಾಶ್ವತ ಕುಡಿಯುವ ನೀರು ಸಿಗಲಿದೆ ಎಂದುಕೊಂಡಿದ್ದ ಕಡೂರು, ಬೀರೂರು ಪಟ್ಟಣದ ನಾಗರಿಕರಿಗೆ ರಾ.ಹೆ.  ವಿಭಾಗ  ಚತುಷ್ಪಥ ರಸ್ತೆಗಾಗಿ ವಿಸ್ತರಣೆಗೆ ಮುಂದಾಗಲಿದೆ ಎಂಬ ಸುದ್ದಿ ಜನತೆ ಮತ್ತು ವರ್ತಕರಲ್ಲಿ ಮತ್ತೆ ಗೊಂದಲ, ಆತಂಕ ಮೂಡಿಸಿದೆ.
ಶಾಸಕರಾಗಿದ್ದ ದಿ.ಕೆ.ಎಂ. ಕೃಷ್ಣಮೂರ್ತಿಯವರಿಂದ 2005ರಲ್ಲಿ ಚಾಲನೆಗೊಂಡ ಕಡೂರು ಬೀರೂರು ಹಾಗೂ ತರೀಕೆರೆ, ಕಡೂರು ತಾಲೂಕಿನ ಮಾರ್ಗದ 34 ಹಳ್ಳಿಗಳಿಗೆ ಶಾಶ್ವತ ನೀರೊದಗಿಸುವ ಭದ್ರಾ ಯೋಜನೆ  ಕೆ.ಎಂ.ಕೆ. ನಿಧನಾನಂತರ ಕುಂಟುತ್ತಾ ತೆವಳುತ್ತಾ ಸಾಗಿ ಈಗ ಅಂತಿಮ ಹಂತಕ್ಕೆ ಬಂದಿದೆ.
ರಸ್ತೆ ವಿಸ್ತರಣೆ ಭೂತ: ಕೆಲವೇ ದಿನಗಳಲ್ಲಿ ಭದ್ರಾ ಡ್ಯಾಂನಿಂದ ಪ್ರಾಯೋಗಿಕ ನೀರು ಹರಿಸಲಾಗುವುದು ಎಂಬ ಅಧಿಕಾರಿಗಳ ಹೇಳಿಕೆ ಜೊತೆ ಜೊತೆಯಲ್ಲೇ ಶಾಶ್ವತ ನೀರಿನ ನಿರೀಕ್ಷೆಯಲ್ಲಿದ್ದ ಜನರಿಗೆ ಮತ್ತೆ ರಸ್ತೆ ವಿಸ್ತರಣೆ ಭೂತ ಜನರ ನಿರೀಕ್ಷೆಗೆ ತಣ್ಣೀರೆರಚಿದೆ.
ಶಿವಮೊಗ್ಗದ ರಾ.ಹೆ. ವಿಶೇಷ ಉಪವಿಭಾಗವು  ಏಪ್ರಿಲ್ 2014ರಂದು ಕಡೂರು, ಬೀರೂರು ಪುರಸಭೆಗಳಿಗೆ ಪತ್ರ ಬರೆದು ಕಡೂರು ಪಟ್ಟಣದಿಂದ ಬಿಳಿಕಿ ಕ್ರಾಸ್ ಭದ್ರಾವತಿ ಬೈಪಾಸ್ವರೆಗೆ ರಸ್ತೆ
ಬದಿಯಲ್ಲಿರುವ ಕುಡಿವ ನೀರಿನ ಪೈಪ್ ಲೈನ್ಗಳನ್ನು ಸ್ಥಳಾಂತರಿಸಲು ಅಂದಾಜು ಪಟ್ಟಿಯನ್ನು ಸೂಕ್ತ ನಕ್ಷೆಗಳೊಂದಿಗೆ ಶೀಘ್ರದಲ್ಲೇ ಸಲ್ಲಿಸಬೇಕು ಎಂದು ಎಇಇ ಸೂಚಿಸಿದ್ದಾರೆ.
ಅಂತಿಮ ಹಂತ: 9 ವರ್ಷದ ಬಳಿಕ ಪೂರ್ಣವಾಗುತ್ತಿರುವ ಭದ್ರಾ ಡ್ಯಾಂ ಯೋಜನೆಗೆ ವಿರೋಧಿಸಿದ್ದ ಲಕ್ಕವಳ್ಳಿ ಹಾಗೂ ತರೀಕೆರೆ ಭಾಗದಲ್ಲಿ ಕಡೂರು ಶಾಸಕ ವೈ.ಎಸ್.ವಿ. ದತ್ತರವರು ಸ್ಥಳೀಯ ಪುರಸಭಾ ಸದಸ್ಯರನ್ನು ಕರೆದೊಯ್ದು ಜನ ಪ್ರತಿನಿಧಿಗಳ ಸಭೆ ನಡೆಸಿ ನಾಗರಿಕರ ಮನವೊಲಿಸುವ ಮೂಲಕ ಯೋಜನೆ ಅಂತೂ ಇಂತೂ ಅಂತಿಮ ಹಂತ ತಲುಪಿತು.
ಆನಂತರ ತರೀಕೆರೆಯ ಹಳಿಯೂರಿನ ಜಲಸಂಗ್ರಹಗಾರ ಮತ್ತು ಫಿಲ್ಟರ್ ಘಟಕಕ್ಕೆ ವಿದ್ಯುತ್ ಸಂಪರ್ಕ ಸಿಕ್ಕಿದ್ದು ಕೆಲವೇ ದಿನಗಳಲ್ಲಿ ಪ್ರಾಯೋಗಿಕ ನೀರು ಹರಿಸಲಾಗುವುದು ಎಂದು ನೀರಾವರಿ ಕೊಳಚೆ ಪ್ರದೇಶ ನಿರ್ಮೂಲನಾ ಮಂಡಳಿ ಹಿರಿಯ ಅಧಿಕಾರಿ ವೈದೇಹಿ ಹೇಳಿದ್ದರು.
ಅಗಲೀಕರಣಕ್ಕೆ ಅನುಮೋದನೆ: ಈಗ ಶಿವಮೊಗ್ಗ ರಾ.ಹೆ. ಉಪವಿಭಾಗ ಚತುಷ್ಪಥ ರಸ್ತೆ ನಿರ್ಮಾಣಕ್ಕಾಗಿ ಕಡೂರಿನಿಂದ ಬಿಳಿಕಿ ಕ್ರಾಸ್ವರೆಗೆ (ಭದ್ರಾವತಿ ಬೈಪಾಸ್  ರಾ.ಹೆ.206ರ ಕಿ.ಮೀ 140ರಿಂದ ಕಿ.ಮೀ. 194.5 ವರೆಗೆ ಇಪಿಸಿ ಪದ್ಧತಿಯಲ್ಲಿ ಚತುಷ್ಪಥ ರಸ್ತೆಯನ್ನಾಗಿ ಅಗಲೀಕರಣ ಮಾಡಲು ಕೇಂದ್ರ ಭೂ ಸಾರಿಗೆ ಮಂತ್ರಾಲಯದಿಂದ ಅನುಮೋದನೆ ದೊರಕಿದೆ.
ಆದ್ದರಿಂದ ಈ ಭಾಗದ ರಸ್ತೆಯನ್ನು ಅಗಲೀಕರಣಗೊಳಿಸಲು ರಸ್ತೆಯ ಎರಡೂ ಬದಿಗಳಲ್ಲಿ ರಸ್ತೆ ಮಧ್ಯಭಾಗದಿಂದ 16 ಮೀಟರ್ ವರೆಗೆ ವಿಸ್ತರಣೆ ಅವಶ್ಯಕತೆಯಿದೆ ಎಂದು ಉಪವಿಭಾಗ ಹೇಳಿದೆ.
ಕಡೂರು, ಬೀರೂರು ಪುರಸಭೆಗೆ ಬರೆದಿರುವ ಪತ್ರದಲ್ಲಿ ತಮ್ಮ ಕಚೇರಿ ವ್ಯಾಪ್ತಿಯಲ್ಲಿ ಬರುವ 16 ಮೀಟರ್ ಒಳಗಿರುವ ಕುಡಿಯುವ ನೀರಿನ ಪೈಪ್ ಲೈನ್ಗಳನ್ನು ಸ್ಥಳಾಂತರಿಸಲು ಅಂದಾಜು ಪಟ್ಟಿ ಕಳುಹಿಸಿ, ರಸ್ತೆ ಅಗಲೀಕರಣ ಕಾರ್ಯಕ್ಕೆ ಸಹಕರಿಸಬೇಕು ಎಂದು ಕೋರಿದೆ.
ಅನುಮಾನ: ಹೀಗಾಗಿ ಪೈಪುಗಳ ಸ್ಥಳಾಂತರ ಆಗುವುದೇ...? ಯೋಜನೆ ಸದ್ಯಕ್ಕೆ ಜಾರಿಯಾಗುವುದಿಲ್ಲವೇ ಎಂಬ ಅನುಮಾನ ಜನರದ್ದಾಗಿದೆ. ಪದೇಪದೇ ಬೆಂಗಳೂರು ಶಿವಮೊಗ್ಗ ರಾ.ಹೆ. 206ರ ಕಡೂರು, ಬೀರೂರು ಪಟ್ಟಣಗಳು ರಸ್ತೆ ಅಗಲೀಕರಣದ ಭೂತ ಎರಡೂ ಪಟ್ಟಣದ ಜನರನ್ನು ಹೆದರಿಸುತ್ತಿದೆ.
ಕಳೆದ 3 ವರ್ಷದ ಹಿಂದಷ್ಟೇ  40 ಅಡಿ ವಿಸ್ತರಣೆಯಾಗಿದ್ದ ಈ ಎರಡು ಪಟ್ಟಣಗಳ ಕಟ್ಟಡಗಳು ವಿಸ್ತರಣೆ ಹೊಡೆತಕ್ಕೆ ಸಿಲುಕಿ ಜನ ಸಂಕಷ್ಟ ಅನುಭವಿಸುತ್ತಿದ್ದಾರೆ.
ಜನರು ಗೊಂದಲಪಡಬೇಕಿಲ್ಲ ರಾ.ಹೆ. ವಿಭಾಗ ತನ್ನ ಕೆಲಸ ಮಾಡುತ್ತಿದೆ. ಇದು ಸದ್ಯಕ್ಕೆ ಕಾರ್ಯರೂಪಕ್ಕೆ ಬರುವುದಿಲ್ಲ ಹಂತಹಂತವಾಗಿ ಬರಲಿದೆ ಎನ್ನುತ್ತಾರೆ ಇಲಾಖೆಯ ಅಧಿಕಾರಿಗಳು. ಒಟ್ಟಿನಲ್ಲಿ ಪಟ್ಟಣದ ನಾಗರಿಕರಿಗೆ ಸದ್ಯಕ್ಕೆ ಭದ್ರಾ ನೀರು ಹುಳಿ ದ್ರಾಕ್ಷಿ ಹಣ್ಣಿನಂತಾಗಿದ್ದರೆ, ವರ್ತಕರಿಗೆ ರಸ್ತೆ ಮರು ವಿಸ್ತರಣೆ ಶಾಕ್ ನೀಡಿರುವುದು ಸುಳ್ಳಲ್ಲ.




Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement