'ವೈಚಾರಿಕತೆಯಿಂದ ಆತ್ಮವಿಶ್ವಾಸ ವೃದ್ಧಿ'
ನರಸಿಂಹರಾಜಪುರ: ವೈಚಾರಿಕ ಮನೋಭಾವ ಬೆಳಿಸಿಕೊಂಡರೆ ಆತ್ಮವಿಶ್ವಾಸ ಹೆಚ್ಚುತ್ತದೆ. ಆದರೆ, ಮೌಢ್ಯವನ್ನು ಬೆಳೆಸಿಕೊಂಡರೆ ಆತ್ಮವಿಶ್ವಾಸ ಕುಂದುತ್ತದೆ ಎಂದು ಪಟ್ಟಣದ ಶಾರದಾ ವಿದ್ಯಾಮಂದಿರ ಸಂಯುಕ್ತ ಪ್ರೌಢಶಾಲೆ ಕಾರ್ಯದರ್ಶಿ ಎಚ್.ಟಿ. ರಾಜೇಂದ್ರ ತಿಳಿಸಿದರು.
ಅವರು ಸೋಮವಾರ ಸ.ಪ್ರ.ದ. ಕಾಲೇಜಿನಲ್ಲಿ ಅರ್ಥಶಾಸ್ತ್ರ ವಿಭಾಗದ ಆಶ್ರಯದಲ್ಲಿ ನಡೆದ ವಿದ್ಯಾರ್ಥಿ ವೇತನದ ಸಂಶೋಧನಾ ವರದಿ ಬಿಡುಗಡೆ ಸಮಾರಂಭದಲ್ಲಿ ವರದಿ ಬಿಡುಗಡೆ ಮಾಡಿ ಮಾತನಾಡಿದರು.
ಪ್ರಶ್ನಾ ಮನೋಭಾವ: ಕಾಲೇಜು ಹಂತದಲ್ಲೇ ವಿದ್ಯಾರ್ಥಿಗಳು ಪ್ರಶ್ನೆ ಮಾಡುವ ಮನೋಭಾವ ಬೆಳಸಿಕೊಳ್ಳಬೇಕು ಹಾಗೂ ಅಧ್ಯಯನಶೀಲರಾಗಬೇಕು. ಶಿಕ್ಷಣ ಎಂದರೆ ಕೇವಲ ಎಂಜಿನಿಯರ್, ವೈದ್ಯರಾಗುವುದು ಮಾತ್ರವಲ್ಲ. ವಿಜ್ಞಾನಕ್ಕೆ ಸಂಬಂಧಿಸಿದ ವಿಷಯವನ್ನು ಅಧ್ಯಯನ ಮಾಡುವುದು ಸಹಾ ಒಂದು ರೀತಿಯ ಶಿಕ್ಷಣವೇ ಆಗಿದೆ ಎಂದರು.
ಕೇವಲ ಹಣ ಸಂಪಾದನೆಯಿಂದ ಮಾತ್ರ ಜೀವನದಲ್ಲಿ ನೆಮ್ಮದಿ ಸಿಕ್ಕುವುದಿಲ್ಲ. ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವ ಬೆಳೆವಣಿಗೆ ಹೊಂದಬೇಕಾದರೆ ಅರ್ಥಶಾಸ್ತ್ರ, ಇತಿಹಾಸ, ಭಾಷಾಶಾಸ್ತ್ರವನ್ನೂ ಸಹ ಅಧ್ಯಯನ ಮಾಡಬೇಕು ಎಂದು ಸಲಹೆ ನೀಡಿದರು.
ಸಂಶೋಧನಾ ಜ್ಞಾನ: ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಸೈಯದ್ ನಿಜಾಮುದ್ದೀನ್ ಪ್ರಾಸ್ತಾವಿಕವಾಗಿ ಮಾತನಾಡಿ, ದೇಶದ ಬೇರೆ ವಿಶ್ವವಿದ್ಯಾಲಯಗಳಲ್ಲಿ ಅರ್ಥಶಾಸ್ತ್ರ ವಿಷಯದಲ್ಲಿ ಪ್ರಚಲಿತ ವಿದ್ಯಾಮಾನಗಳ ಪಠ್ಯಕ್ರಮವಿದೆ. ಅರ್ಥಶಾಸ್ತ್ರದಲ್ಲಿ ಪರಿಮಾಣಾತ್ಮಕ ವಿಧಾನ, ಸಂಶೋಧನಾ ವಿಭಾಗಗಳ ಬಗ್ಗೆ ಅಧ್ಯಯನ ಮಾಡಲಾಗುತ್ತದೆ. ಆದರೆ, ಹಲವು ಕಡೆ ಕಲಾ ವಿಭಾಗದಲ್ಲಿ ಪುರಾತನ ಪಠ್ಯಕ್ರಮ ಇದೆ. ಆದ್ದರಿಂದ ಕಲಾ ವಿದ್ಯಾರ್ಥಿಗಳಲ್ಲೂ ಸಂಶೋಧನಾ ಜ್ಞಾನ ಬೆಳೆಸಿ ಕೀಳರಿಮೆ ಹೋಗಲಾಡಿಸಿ ಸ್ಫೋರ್ತಿ ತುಂಬುವ ಉದ್ದೇಶದಿಂದ ೊಹಸ ಪ್ರಯೋಗ ಮಾಡಲಾಗುತ್ತಿದೆ ಎಂದರು.
ಅಧ್ಯಕ್ಷತೆಯನ್ನು ಕಾಲೇಜು ಪ್ರಾಂಶುಪಾಲ ಕೆ. ಪೂರ್ಣೇಶ್ ವಹಿಸಿದ್ದರು. ಅತಿಥಿಗಳಾಗಿ ವಾಣಿಜ್ಯ ವಿಭಾಗದ ಮುಖ್ಯಸ್ಥ ಮುಜೀಬ್ ಖಾನ್, ಸಮಾಜಕಾರ್ಯ ವಿಭಾಗದ ಮುಖ್ಯಸ್ಥ ಡಾ.ಕೆ. ಉಮೇಶ್ ಉಪಸ್ಥಿತರಿದ್ದರು.
ಶ್ರೀನಾಥ ಸ್ವಾಗತಿಸಿದರು. ವೈ.ಸಿ. ರಮ್ಯ ಹಾಗೂ ಸುನೀಲ್ ನಿರೂಪಿಸಿದರು. ತಿರುಮಲೇಶ್ ವಂದಿಸಿದರು.