ಸಿಇಟಿ: ನಿಷೇಧಾಜ್ಞೆ
ಚಿಕ್ಕಮಗಳೂರು: ಸಾಮಾನ್ಯ ಪ್ರವೇಶ ಪರೀಕ್ಷೆ ಹಿನ್ನೆಲೆಯಲ್ಲಿ ನಗರದ ಸರ್ಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜು, ಬಸವನಹಳ್ಳಿ, ಬೇಲೂರು ರಸ್ತೆಯಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜು, ಎಂಇಎಸ್ ಪದವಿ ಪೂರ್ವ ಬಾಲಕಿಯರ ಕಾಲೇಜು ಪರೀಕ್ಷಾ ಕೇಂದ್ರಗಳ 200 ಮೀಟರ್ ವ್ಯಾಪ್ತಿ ಪ್ರದೇಶವನ್ನು ಮೇ 1 ಹಾಗೂ 2 ರಂದು ನಿಷೇಧಿತ ಪ್ರದೇಶವೆಂದು ಘೋಷಿಸಲಾಗಿದೆ ಹಾಗೂ ಪರೀಕ್ಷಾ ಕೇಂದ್ರದ ಸಮೀಪವಿರುವ ಎಲ್ಲಾ ಜೆರಾಕ್ಸ್ ಕೇಂದ್ರಗಳನ್ನು ಬೆಳಗ್ಗೆ 8 ರಿಂದ ಸಂಜೆ 6 ರವರೆಗೆ ಕಡ್ಡಾಯವಾಗಿ ಮುಚ್ಚುವಂತೆ ತಹಸೀಲ್ದಾರ್ ಹಾಗೂ ಕಾರ್ಯಾಂಗ ನ್ಯಾಯಾಧೀಶರಾದ ಶಿವಣ್ಣ ಆದೇಶಿಸಿದ್ದಾರೆ.
ಪಡಿತರ ಬಿಡುಗಡೆ
ಮೇ ಮಾಹೆಗೆ ಜಿಲ್ಲೆಯ ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶದ ಎಎವೈ ಪಡಿತರ ಚೀಟಿದಾರರಿಗೆ 29 ಕೆ.ಜಿ. ಅಕ್ಕಿ, 6 ಕೆ.ಜಿ. ಗೋಧಿ, 1 ಕೆ.ಜಿ ಸಕ್ಕರೆ ಹಾಗೂ ಬಿಪಿಎಲ್ ಪಡಿತರ ಚೀಟಿದಾರರಿಗೆ 10 ರಿಂದ 30 ಕೆ.ಜಿ. ಅಕ್ಕಿ, 1 ಕೆ.ಜಿ. ಸಕ್ಕರೆ ಹಾಗೂ ಕಾರಾಗೃಹ ಸಿಬ್ಬಂದಿಗೆ 15 ಕೆ.ಜಿ. ಅಕ್ಕಿ, 3 ಕೆ.ಜಿ. ಗೋಧಿ ಹಾಗೂ ಪೊಲೀಸ್ ಸಿಬ್ಬಂದಿ, ಕರ್ನಾಟಕ ಅಗ್ನಿಶಾಮಕ ಮತ್ತು ತರ್ತು ಸೇವೆಗಳ ಇಲಾಖೆ ಹಾಗೂ ಗೃಹ ರಕ್ಷಕ ಸಿಬ್ಬಂದಿಗಳಿಗೆ 15 ಕೆ.ಜಿ. ಅಕ್ಕಿ, 3 ಕೆ.ಜಿ. ಗೋಧಿ ಬಿಡುಗಡೆ ಮಾಡಲಾಗಿದೆ. ಸಂಬಂಧಿಸಿದ ನ್ಯಾಯಬೆಲೆ ಅಂಗಡಿಯಿಂದ ಪಡೆಯಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಬಾಲ ಭವನದಲ್ಲಿ ಬೇಸಿಗೆ ಶಿಬಿರ
ಚಿಕ್ಕಮಗಳೂರು ತಾಲೂಕು ಬಾಲಭವನ ಸಮಿತಿ ವತಿಯಿಂದ 10 ದಿನಗಳ ಬೇಸಿಗೆ ಶಿಬಿರವನ್ನು ಮೇ 6 ರಿಂದ 15 ರವರೆಗೆ ನಗರದ ನಗರಸಭಾ ಆವರಣದಲ್ಲಿರುವ ಜಿಲ್ಲಾ ಬಾಲಭವನದಲ್ಲಿ ಹಮ್ಮಿಕೊಳ್ಳಲಾಗಿದೆ. 8 ರಿಂದ 16 ವರ್ಷದೊಳಗಿನ 25 ರಿಂದ 30 ಮಕ್ಕಳು ಶಿಬಿರದಲ್ಲಿ ಪಾಲ್ಗೊಳ್ಳಲು ಅವಕಾಶವಿದ್ದು, ಮೊದಲು ನೋಂದಾಯಿಸಿದ ಮಕ್ಕಳು ಮಾತ್ರ ಬೇಸಿಗೆ ಶಿಬಿರದಲ್ಲಿ ಪಾಲ್ಗೊಳ್ಳಬಹುದಾಗಿದೆ. ಬೇಸಿಗೆ ಶಿಬಿರದಲ್ಲಿ ಚಿತ್ರಕಲೆ, ಕರಕುಶಲ ಕಲೆ, ಯೋಗ, ಸಮೂಹ ಗೀತೆ, ಸಮೂಹ ನೃತ್ಯ, ಹೂ ತಯಾರಿಕೆ ಬಗ್ಗೆ ತರಬೇತಿ ನೀಡಲಾಗುವುದು. ಮಾಹಿತಿಗಾಗಿ ಎಸ್.ಆರ್. ವೆಂಕಟೇಶ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ದೂ-08262-235793 ಇವರನ್ನು ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದೆ.