ಜಿಲ್ಲಾಡಳಿತ ವಶಕ್ಕೆ ಕೇಂದ್ರೀಯ ಶಾಲೆ
ಕ.ಪ್ರ.ವಾರ್ತೆ ಟಿ ಮೂಡಿಗೆರೆ ಟಿ ಏ.30
ತಾಲೂಕಿನ ಕಳಸ ಹೋಬಳಿಯ ಕುದುರೆಮುಖದ ಕೇಂದ್ರೀಯ ವಿದ್ಯಾಲಯದಲ್ಲಿ ವ್ಯಾಸಾಂಗ ಮಾಡುತ್ತಿದ್ದ ವಿದ್ಯಾರ್ಥಿಗಳು ಗೊಂದಲದಲ್ಲಿ ಸಿಲುಕಿದ್ದಾರೆ. ಇಂದು ಜಿಲ್ಲಾಧಿಕಾರಿ ಆಗಮಿಸಿ ತಮ್ಮ ವಶಕ್ಕೆ ತೆಗೆದುಕೊಳ್ಳುವುದರ ಮೂಲಕ ಗೊಂದಲಕ್ಕೆ ತೆರೆ ಎಳೆದಿದ್ದಾರೆ.
ಕುದುರೆಮುಖ ಕೇಂದ್ರೀಯ ವಿದ್ಯಾಲಯಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಶೇಖರಪ್ಪ, ವಿದ್ಯಾರ್ಥಿಗಳ ಪೋಷಕರೊಂದಿಗೆ ಮಾತನಾಡಿ. ಈ ಶಾಲೆಯಲ್ಲಿದ್ದ 15 ಮಂದಿ ಶಿಕ್ಷಕರನ್ನು ಮಂಗಳೂರು ಮತ್ತು ತುಮಕೂರಿನ ವಿದ್ಯಾಲಯಗಳಿಗೆ ನಿಯೋಜನೆ ಮಾಡಲಾಗಿದೆ. ನೀಯೋಜನೆ ಮಾಡಿರುವ ಶಿಕ್ಷಕರನ್ನು ಶಾಲೆಗೆ ವಾಪಸ್ ಕರೆಸಿಕೊಳ್ಳುವಂತೆ ಕೇಂದ್ರೀಯ ವಿದ್ಯಾಲಯದ ಸಂಘಟನಾ ಮುಖ್ಯಸ್ಥರಿಗೆ ಪತ್ರ ಮೂಲಕ ತಿಳಿಸಲಾಗಿದೆ. ಮೇ 5 ರಿಂದ 15 ರವರೆಗೆ ಈ ವಿದ್ಯಾಲಯಕ್ಕೆ ರಜೆ ಇದ್ದು. ಈ ಅವಧಿಯೊಳಗೆ ಶಿಕ್ಷಕರನ್ನು ವಾಪಸ್ ಕರೆಸಿಕೊಳ್ಳುವ ಪ್ರಯತ್ನ ಸರ್ಕಾರದಿಂದ ನಡೆಯುತ್ತಿದೆ ಎಂದರು.
ಯಾವುದೇ ಕಾರಣಕ್ಕೂ ಯಾವುದೇ ರೀತಿಯ ಲೋಪವಾಗದಂತೆ ಈ ಹಿಂದೆ ಕೇಂದ್ರೀಯ ವಿದ್ಯಾಲಯ ಸಂಘಟನೆ ನಡೆಸಿಕೊಂಡು ಹೋಗುತ್ತಿತ್ತು. ಮುಂದೆ ಸಹ ಅದೇ ಸಂಘಟನೆ ಮುಂದುವರಿಸಿಕೊಂಡು ಹೋಗುವುದರೊಂದಿಗೆ ಕಾನೂನಾತ್ಮಕವಾಗಿ ನಡೆಸಿಕೊಂಡು ಹೋಗುವಂತೆ ತಿಳಿಸಿದರು.
ಇಷ್ಟು ದಿನ ಶಾಲೆಗೆ ಆಗಮಿಸುತ್ತಿದ್ದ ವಿದ್ಯಾರ್ಥಿಗಳು ಮರದ ಕೆಳಗೆ ಕುಳಿತು ಹಿಂದಿರುಗುತ್ತಿದ್ದರು. ಇಂದು ಜಿಲ್ಲಾಧಿಕಾರಿ ಆಗಮನದಿಂದ ಶಾಲೆಗೆ ಆಗಮಿಸಿ ಹಾಜರಾತಿ ಪಡೆಯುವ ಮೂಲಕ ಸಂತಸ ವ್ಯಕ್ತಪಡಿಸಿದ ವಿದ್ಯಾರ್ಥಿಗಳು ಸಿಹಿ ಹಂಚಿ ಸಂಭ್ರಮಿಸಿದರು.
ಕೇಂದ್ರೀಯ ವಿದ್ಯಾಲಯ ಸಂಘಟನೆಗೆ ಶುಲ್ಕ ಪಾವತಿಸಲು ಬುಧವಾರ ಕಡೆಯ ದಿನ. ಬ್ಯಾಂಕ್ ಮಧ್ಯಾಹ್ನದವರೆಗೆ ಮಾತ್ರ ಇದ್ದುದರ ಕಾರಣ ಜಿಲ್ಲಾಧಿಕಾರಿ, ಕುದುರೆಮುಖದ ಬ್ಯಾಂಕಿನ ಅಧಿಕಾರಿಗಳಿಗೆ ಸಂಜೆವರೆಗೂ ವಿದ್ಯಾರ್ಥಿಗಳಿಂದ ಶುಲ್ಕ ಪಾವತಿಸಿಕೊಳ್ಳಲು ಆದೇಶಿಸಿದ್ದರು. ಈ ಹಿನ್ನೆಲೆಯಲ್ಲಿ 172 ವಿದ್ಯಾರ್ಥಿಗಳು ಮತ್ತು ಪೋಷಕರು ಬ್ಯಾಂಕಿಗೆ ಆಗಮಿಸಿ ಶುಲ್ಕ ಪಾವತಿಸಿದರು.
ತಹಸೀಲ್ದಾರ್ ಶಾರದಾಂಬಾ, ಕಂದಾಯ ಇಲಾಖೆ ಸಿಬ್ಬಂದಿ, ಸಂಘಟನೆ ಮುಖ್ಯಸ್ಥರು, ಶಿಕ್ಷಣ ಇಲಾಖೇಯ ಅಧಿಕಾರಿಗಳು ಆಗಮಿಸಿದ್ದರು.