ನೀರಿನ ಸಮಸ್ಯೆಗೆ ಹೊಣೆ ಯಾರು?
ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಏ.30
ಜಿಲ್ಲೆಯಲ್ಲಿನ ಕುಡಿಯುವ ನೀರಿನ ಸಮಸ್ಯೆಗೆ ಯಾರು ಕಾರಣಕರ್ತರು.
- ಈ ಪ್ರಶ್ನೆಗೆ ಜನಪ್ರತಿನಿಧಿಗಳು ಅಧಿಕಾರಿಗಳತ್ತ ಬೆರಳು ಮಾಡಿ ತೋರಿಸುತ್ತಾರೆ.
ಜಿಲ್ಲಾ ಉಸ್ತುವಾರಿ ಸಚಿವ ಕೆ. ಅಭಯಚಂದ್ರ ಜೈನ್ ಅವರ ಅಧ್ಯಕ್ಷತೆಯಲ್ಲಿ ಜಿಪಂ ಸಭಾಂಗಣದಲ್ಲಿ ಬುಧವಾರ ಸುಮಾರು ಎರಡೂವರೆ ಗಂಟೆಗಳ ಕಾಲ ನಡೆದ ಜಿಲ್ಲೆಯ ಕುಡಿಯುವ ನೀರಿನ ಪರಿಸ್ಥಿತಿ ಪರಿಶೀಲನಾ ಸಭೆಯಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.
ಸರ್ಕಾರದ ಮಾನದಂಡ ಎಂಬ ಸೂತ್ರ ಮುಂದಿಟ್ಟು ಅಧಿಕಾರಿಗಳು ತುಂಬಾ ತೊಂದರೆ ನೀಡುತ್ತಿದ್ದಾರೆ. ವಿದ್ಯುತ್ ನೀಡುತ್ತಿಲ್ಲ, ಇದರಿಂದಾಗಿ ಕುಡಿಯುವ ನೀರು ಸರಬರಾಜು ಕಾಮಗಾರಿಗಳು ನೆನೆಗುದಿಗೆ ಬಿದ್ದಿವೆ. ಪಂಚಾಯತ್ರಾಜ್ ಎಂಜಿನಿಯರಿಂಗ್ ಹಾಗೂ ಮೆಸ್ಕಾಂ ಇಲಾಖೆಗಳ ನಡುವೆ ಹೊಂದಾಣಿಕೆ ಇಲ್ಲ ಎಂಬ ಆರೋಪಗಳು ಜನಪ್ರತಿನಿಧಿಗಳಿಂದ ಕೇಳಿ ಬಂದವು.
ಅಂತರ್ಜಲ ಕುಸಿತ: ಸಭೆ ಆರಂಭಗೊಳ್ಳುತ್ತಿದ್ದಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕರುಣಾಕರ್ ಅವರು ಜಿಲ್ಲೆಯ ಕುಡಿಯುವ ನೀರಿನ ಬಗ್ಗೆ ವರದಿ ಮುಂದಿಟ್ಟರು. ಬಳಿಕ ಮಾತನಾಡಿದ ಮೂಡಿಗೆರೆ ಶಾಸಕ ಬಿ.ಬಿ. ನಿಂಗಯ್ಯ, ಮೂಡಿಗೆರೆ ತಾಲೂಕಿನ ಬೆಟ್ಟಗೆರೆ ಸೇರಿದಂತೆ ಆಸುಪಾಸಿನ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಈ ಪ್ರದೇಶದಲ್ಲಿ ಕೊಳವೆ ಬಾವಿಗಳ ಹಾಗೂ ತೆರೆದ ಬಾವಿಗಳ ಅಂತರ್ಜಲ ಮಟ್ಟ ಕುಸಿದಿದೆ. ಇದಕ್ಕೆ ಮರಳು ದಂಧೆಯೇ ಕಾರಣ ಎಂದು ಹೇಳಿದಾಗ, ನಿಮ್ಮ ಕ್ಷೇತ್ರ ನೀವೇ ಹತೋಟಿಯಲ್ಲಿಡಬೇಕು ಎಂದು ಸಚಿವರು ಹೇಳಿದರು.
ಕಾರ್ಯರೂಪಕ್ಕೆ ಬಂದಿಲ್ಲ: ರಾಜ್ಯದಲ್ಲಿ ಹೊಸ ಮರಳು ನೀತಿ ಜಾರಿಗೆ ಬಂದರೂ ಕಾರ್ಯರೂಪಕ್ಕೆ ಬಂದಿಲ್ಲ. ಈ ಭಾಗದ ನೀರಿನ ಮೂಲ ಬತ್ತಿ ಹೋಗದಂತೆ ಎಚ್ಚರಿಕೆ ವಹಿಸಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.
ತರೀಕೆರೆ ಶಾಸಕ ಶ್ರೀನಿವಾಸ್ ಮಾತನಾಡಿ, ತಮ್ಮ ಕ್ಷೇತ್ರದಲ್ಲಿ ಸುಮಾರು 25ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಕುಡಿಯುವ ನೀರಿನ ತೊಂದರೆ ಇದೆ. ವಿದ್ಯುತ್ ಸಂಪರ್ಕ ಇಲ್ಲ, ಟ್ರಾನ್ಸ್ಫಾರ್ಮರ್ ಹಾಕಲು ಅಧಿಕಾರಿಗಳು ಕತೆ ಹೇಳುತ್ತಿದ್ದಾರೆ. ಬಹುಗ್ರಾಮ ಯೋಜನೆಯಡಿ ಲಕ್ಕವಳ್ಳಿ ಸೇರಿದಂತೆ ಸುತ್ತಮುತ್ತ ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಮಾಡಲು 8 ಕೋಟಿ ಖರ್ಚು ಮಾಡಲಾಗಿದೆ. ಆದರೆ, ಈವರೆಗೆ ಜನರಿಗೆ ನೀರು ಕೊಡಲು ಸಾಧ್ಯವಾಗಿಲ್ಲ. ಕಳೆದ ವರ್ಷದಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಿದವರಿಗೆ ಬಿಲ್ ಪಾವತಿ ಮಾಡಿಲ್ಲ, ಅದ್ದರಿಂದ ಅವರು ಈ ಬಾರಿ ನೀರು ಸರಬರಾಜು ಮಾಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಸಭೆಯ ಗಮನಕ್ಕೆ ತಂದರು.
ದುರಂತ: ಕಡೂರು ಬರಪೀಡಿತ ತಾಲೂಕೆಂದು ಸರ್ಕಾರ ಘೋಷಣೆ ಮಾಡಿದೆ. ಆದರೆ, ಈ ತಾಲೂಕಿಗೆ ಜಿಲ್ಲಾಡಳಿತದಿಂದ ಬಿಡುಗಡೆಯಾಗಿರುವ ಹಣ ಕೇವಲ 50 ಲಕ್ಷ ಮಾತ್ರ ಎಂದು ಕಡೂರು ಶಾಸಕ ವೈಎಸ್ವಿ ದತ್ತ ಹೇಳಿದರು. ಸ್ಥಳೀಯ ಪರಿಸ್ಥಿತಿ ಅರಿತು ಕಡೂರು ತಾಲೂಕಿನಲ್ಲಿ 129 ಬೋರ್ವೆಲ್ಗಳನ್ನು ಕೊರೆಸಲಾಗಿದೆ. ಇದಕ್ಕಾಗಿ ಸರ್ಕಾರದಿಂದ ಈವರೆಗೆ ಒಂದು ರುಪಾಯಿ ಬಿಡುಗಡೆಯಾಗಿಲ್ಲ ಎಂದರು.
ಕಡೂರು ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಸಮರ್ಪಕವಾಗಿ ವಿದ್ಯುತ್ ಸರಬರಾಜು ಆಗುತ್ತಿಲ್ಲ. ಹೊಸದಾಗಿ ಕೊರೆಸಿರುವ ಬೋರ್ವೆಲ್ಗಳಿಗೆ ಹಣ ಬಿಡುಗಡೆ ಮಾಡಬೇಕು ಎಂದು ದತ್ತ ಹೇಳಿದಾಗ, ಇದಕ್ಕೆ ಉತ್ತರಿಸಿದ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಜಿಲ್ಲೆಗೆ 3 ಕೋಟಿ ಬಿಡುಗಡೆಯಾಗಿದ್ದು, ಈ ಹಣದಲ್ಲಿ ಹೊಸದಾಗಿ ಕೊರೆಸಿರುವ ಬೋರ್ವೆಲ್ಗೂ ನೀಡಲಾಗುವುದು. ಕುಡಿಯುವ ನೀರಿನ ಸಮಸ್ಯೆ ಇದ್ದರೆ ಕೂಡಲೇ ಆ ಗ್ರಾಮದಲ್ಲಿ ಬೋರ್ವೆಲ್ ಕೊರೆಸಬೇಕು, ಮುಂದಿನ ದಿನಗಳಲ್ಲಿ ಕ್ರಿಯಾಯೋಜನೆಯಲ್ಲಿ ಇದಕ್ಕೆ ಹಣ ಮೀಸಲಿಡಲಾಗುವುದು ಎಂದು ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದಾಗ, ಇದರಲ್ಲಿ ಸಿಂಹಪಾಲು ಕಡೂರು ತಾಲೂಕಿಗೆ ನೀಡಬೇಕೆಂದು ದತ್ತ ಹೇಳುತ್ತಿದ್ದಂತೆ, ತರೀಕೆರೆ ತಾಲೂಕಿನಲ್ಲೂ ಪರಿಸ್ಥಿತಿ ಗಂಭೀರವಾಗಿದೆ, ನಮಗೂ ಹೆಚ್ಚಿನ ಹಣ ನೀಡಬೇಕೆಂದು ಶಾಸಕ ಶ್ರೀನಿವಾಸ್ ಹೇಳಿದರು.
ಹೊಂದಾಣಿಕೆ ಕೊರತೆ: ವಿಧಾನಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಮಾತನಾಡಿ, ಕುಡಿಯುವ ನೀರಿನ ಸಮಸ್ಯೆಗೆ ಕೆಲವೆಡೆ ಮೆಸ್ಕಾಂ ಇಲಾಖೆಯೇ ಕಾರಣ, ಕೆಲವು ಅಧಿಕಾರಿಗಳಿಗೆ ಎಷ್ಟೇ ಹೇಳಿದರೂ ಅರ್ಥವಾಗುತ್ತಿಲ್ಲ, ಎಮ್ಮೆ ತರಹ ಕೆಲಸ ಮಾಡುತ್ತಿದ್ದಾರೆ ಎಂದರು.
ಸಭೆಯ ಕೊನೆಯಲ್ಲಿ ಮಾತನಾಡಿದ ಸಚಿವ ಅಭಯಚಂದ್ರ ಜೈನ್, ಇದು ನಿಮ್ಮ ಮನೆ ಕೆಲಸ ಅಲ್ಲ. ಜನರಿಗೆ ನೀರು ಕೊಡಬೇಕಾಗಿರುವ ಕೆಲಸ. ಮೆಸ್ಕಾಂ ಹಾಗೂ ಜಿಪಂ ಎಂಜಿನಿಯರ್ ಇಲಾಖೆ, ಅಧಿಕಾರಿಗಳು ಜನರಿಗೆ ಸ್ಪಂದಿಸಬೇಕು. ಆದ್ಯತೆಯ ಮೇಲೆ ಕುಡಿಯುವ ನೀರಿಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಉದಾಸೀನ ಸರಿಯಲ್ಲ ಎಂದು ಅಧಿಕಾರಿಗಳಿಗೆ ಕಿವಿ ಮಾತು ಹೇಳಿದರು.
ಸಚಿವರು ಗರಂ
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಕುಡಿಯುವ ನೀರಿನ ಸಮಸ್ಯೆ ಕುರಿತ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಶಾಸಕ ದತ್ತ ಅವರ ಮಾತಿನಿಂದಾಗಿ ಗರಂ ಆದಂತೆ ಕಂಡು ಬಂದರು. ಜಿಲ್ಲಾಧಿಕಾರಿಗಳು ಸಭೆಗೆ ಬರದೆ ಇರುವ ಬಗ್ಗೆ ದತ್ತ ಅವರು ಪ್ರಸ್ತಾಪಿಸಿದಾಗ, ವಿರೋಧಕ್ಕಾಗಿ ವಿರೋಧ ಮಾಡುವುದಲ್ಲ ಎಂದು ಸಚಿವರು ಹೇಳಿದರು. ಮತ್ತೆ ದತ್ತ ಮಾತು ಮುಂದುವರಿಸಿದಾಗ, ನಿಮ್ಮ ವಾದ ಕೇಳಲು ಬಂದಿಲ್ಲ, ಚರ್ಚೆ ಮಾಡಲು ಬಂದಿದ್ದೇವೆ ಎಂದು ಸಚಿವರು ಹೇಳಿದರು. ಸಚಿವರೇ ನಾವು ಜವಾಬ್ದಾರಿ ಸ್ಥಾನದಲ್ಲಿದ್ದೇವೆ. ಜನರಿಗೆ ಉತ್ತರ ಕೊಡಬೇಕಾದವರು ನಾವು. ನಮ್ಮ ಗೋಳು ಕೇಳಿ ಎಂದು ದತ್ತ ಹೇಳಿದಾಗ, ನಿಮ್ಮ ಗೋಳೇ ಕೇಳಲು ಬಂದಿದ್ದೇನೆ, ಸಮಸ್ಯೆ ಬಗೆಹರಿಸಲು ಬಂದಿದ್ದೇನೆ ಎಂದು ಸಚಿವರು ಹೇಳಿದರು.