ಗ್ರಾಮ ಅಭಿವೃದ್ಧಿಗೆ ಜನಸ್ಪಂದನ ಪೂರಕ: ಗ್ರಾಪಂ ಅಧ್ಯಕ್ಷ ಭರತ್
ಮೂಡಿಗೆರೆ: ಜನರ ಮತ್ತು ಅಧಿಕಾರಿಗಳ ನಡುವೆ ಉತ್ತಮ ಬಾಂಧವ್ಯ ಬೆಳೆಸಲು ಮತ್ತು ಗ್ರಾಮದ ಅಭಿವೃದ್ಧಿಗೆ ಜನಸ್ಪಂದನ ಕಾರ್ಯಕ್ರಮ ಪೂರಕವಾಗಿದೆ ಎಂದು ತರುವೆ ಗ್ರಾಪಂ ಅಧ್ಯಕ್ಷ ಬಿ.ಎಂ.ಭರತ್ ತಿಳಿಸಿದರು.
ತಾಲೂಕಿನ ಬಣಕಲ್ ಹೋಬಳಿಯ ತರುವೆ ಗ್ರಾಪಂ ಸಮುದಾಯ ಭವನದಲ್ಲಿ ಶನಿವಾರ ತಾಲೂಕು ಆಡಳಿತ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಜನಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗ್ರಾಮದ ಘನತ್ಯಾಜ್ಯ ವಸ್ತು ಸಂಗ್ರಹಣೆಗೆ ಸರ್ವೇ ನಂ 106 ರಲ್ಲಿ 19 ಗುಂಟೆ ಜಾಗವನ್ನು ಕಂದಾಯ ಅಧಿಕಾರಿಗಳು ಮಂಜೂರಾತಿಗೆ ಶಿಫಾರಸು ಮಾಡಿದ್ದು, ಜಿಲ್ಲಾಧಿಕಾರಿಯಿಂದ ಆದೇಶ ಬರಲು ಬಾಕಿ ಇದೆ ಎಂದರು.
ತಹಶೀಲ್ದಾರ್ ಶಾರದಾಂಬಾ ಮಾತನಾಡಿ, ಅತಿವೃಷ್ಟಿಯಿಂದ ಕಾಫಿ ಬೆಳೆ ಸಂಪೂರ್ಣ ನಾಶವಾಗಿದ್ದು, ಕಂದಾಯ ಮತ್ತು ಕೃಷಿ ಇಲಾಖೆ ಜಂಟಿ ಸರ್ವೇ ನಡೆಸಿ ಕಾಫಿ ಮಂಡಲಿಗೆ ವರದಿ ಸಲ್ಲಿಸುವ ಭರವಸೆ ನೀಡಿದರು.
ಕೃಷಿ ಇಲಾಖೆ ಅಧಿಕಾರಿ ಮಾತನಾಡಿ ತರಿ ಜಮೀನು ಎಕರೆಗೆ 1 ಸಾವಿರದಂತೆ 5 ಎಕರೆವರೆಗೆ ಸರ್ಕಾರದಿಂದ ಸಬ್ಸಿಡಿ ಹಣ ಬಂದಿದ್ದು ರೈತರು ದಾಖಲಾತಿ ಹಾಜರುಪಡಿಸಿ ಸಬ್ಸಿಡಿ ಪಡೆಯುವಂತೆ ಮನವಿ ಮಾಡಿದರು.
ಪಟ್ಟಣದಲ್ಲಿ ಕಳೆದ 15 ದಿನಗಳಿಂದ ವಿದ್ಯುತ್ ಇಲ್ಲದೆ ಕತ್ತಲೆಯಲ್ಲಿ ಮುಳುಗಿದೆ ಎಂದು ಸಾರ್ವಜನಿಕರು ಮೆಸ್ಕಾಂ ಅಧಿಖಾರಿಗಳನ್ನು ತರಾಟೆಗೆ ತೆಗೆದುಕೊಂಡಾಗ, ಮೆಸ್ಕಾಂ ಅಧಿಕಾರಿಗಳು ಸಿಬ್ಬಂದಿ ಕೊರತೆಯಿದ್ದು, ಮತ್ತು ತಂತಿಗಳು ತೋಟಗಳ ಮಧ್ಯ ಹಾದು ಹೋಗಿದ್ದು ಈ ಸಮಸ್ಯೆ ನಿವಾರಿಸಲು ಕಷ್ಟವಾಗುತ್ತಿದೆ ಎಂದರು. ಬಣಕಲ್ ಹೋಬಳಿಯಲ್ಲಿ ವಿದ್ಯುತ್ ಬಳಕೆದಾರರಿಂದ ರು. 34 ಲಕ್ಷ ಬಾಕಿ ಇದ್ದು, ನಿಗದಿತ ಸಮಯದಲ್ಲಿ ಹಣ ಸಂದಾಯ ಮಾಡಿದಲ್ಲಿ ಗುತ್ತಿಗೆ ಆಧಾರದಲ್ಲಿ ಒಬ್ಬ ವ್ಯಕ್ತಿಯನ್ನು ನೇಮಿಸಿ ವಿದ್ಯುತ್ ದುರಸ್ತಿ ಬಗ್ಗೆ ಗಮನಹರಿಸುವುದಾಗಿ ಸಭೆಗೆ ತಿಳಿಸಿದರು.
ರಾಜಸ್ವ ನಿರೀಕ್ಷಕ ಎಂ.ಗಂಗಾಧರ್ ಮಾತನಾಡಿ, ವೃದ್ಧಾಪ್ಯ, ಅಂಗವಿಕಲ ವೇತನ ಸೇರಿದಂತೆ ಸರ್ಕಾರದಿಂದ ಬರುವ ಸವಲತ್ತುಗಳ ಬಗ್ಗೆ ವಿವರಣೆ ನೀಡಿದರು. ಅತಿವೃಷ್ಟಿಯಿಂದ ಮನೆ ಹಾನಿ ಸಂಭವಿಸಿದಲ್ಲಿ ತಕ್ಷಣವೇ ಕಂದಾಯ ಇಲಾಖೆ ಗಮನಕ್ಕೆ ತಂದರೆ 24 ಗಂಟೆಯೊಳಗೆ ಪರಿಹಾರ ನೀಡುವುದಾಗಿ ತಿಳಿಸಿದರು. ಈ ಜನಸಂಪರ್ಕ ಸಭೆಯಲ್ಲಿ ತಾಲೂಕಿನ ಎಲ್ಲಾ ಇಲಾಖೆ ಅಧಿಕಾರಿಗಳು ಆಗಮಿಸಿದ್ದರು.