ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಜಿಪಂ ಸಭೆಗೆ ಕೀಟನಾಶಕ ತಂದ ಸದಸ್ಯ!

Rashmi Kasaragodu
Updated On : 5 Aug 2014, 1:17 am

ಚಿಕ್ಕಮಗಳೂರು: ಜಿಪಂ ಪಂಚಾಯ್ತಿ ಸಭಾಂಗಣದಲ್ಲಿ ಜಿಪಂ ಅಧ್ಯಕ್ಷೆ ಭಾಗ್ಯ ರಂಗನಾಥ್ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಗೆ ಸದಸ್ಯರೊಬ್ಬರು ಕೀಟ ನಾಶಕದ ಟಿನ್ ತಂದಿದ್ದರು. ಹಾಗೆ ಕೀಟ ನಾಶಕದ ಟಿನ್ ತಂದವರು ಜಿಪಂ ಸದಸ್ಯ ಶೃಂಗೇರಿ ಶಿವಣ್ಣ.
ತಮ್ಮ ಕ್ಷೇತ್ರದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು ತಮ್ಮ ಗಮನಕ್ಕೆ ತಾರದೆ ಬದಲಾವಣೆ ಮಾಡಿರುವ ವಿಷಯದ ಬಗ್ಗೆ ಶೃಂಗೇರಿ ಶಿವಣ್ಣ ವಿಷಯ ಪ್ರಸ್ತಾಪಿಸಿ, ಆಕ್ರೋಶ ಭರಿತರಾಗಿ ಮಾತನಾಡಿದರು.
ಜಿಪಂ ಉಪ ಕಾರ್ಯದರ್ಶಿ ಅವರನ್ನು ಉದ್ದೇಶಿಸಿ, ಏನ್ರೀ ನೀವು ಕೆಲಸ ಮಾಡಲು ಆಗದಿದ್ದರೆ, ವಿಷ ಕುಡಿಯಿರಿ ಎಂದು ಕ್ಷೇತ್ರದ ಜನತೆ ಹೇಳುತ್ತಿದ್ದಾರೆ. ಆದರಿಂದ ವಿಷದ ಬಾಟಲಿ ತಂದಿರುವುದಾಗಿ ಸಭೆಯಲ್ಲಿ ಕೀಟ ನಾಶಕದ ಟಿನ್ ತೋರಿಸಿ, ಇದನ್ನು ಕುಡಿಯುವುದಾಗಿ ಹೇಳಿದರು. ಆಗ ಸಭೆಯಲ್ಲಿದ್ದ ಇತರೆ ಸದಸ್ಯರು ವಿಷ ಕುಡಿಯಬೇಡಿ ಎಂದು ವ್ಯಂಗ್ಯವಾಗಿ ಹೇಳಿದರು.
ಕ್ಷೇತ್ರದಲ್ಲಿ ಮೂವರು ಪಿಡಿಒಗಳನ್ನು ತಮ್ಮ ಗಮನಕ್ಕೆ ತಾರದೆ ಜಿಪಂ ಸಿಇಒ ವರ್ಗಾವಣೆ  ಮಾಡಿದ್ದಾರೆ. ಇದರಿಂದಾಗಿ ಉದ್ಯೋಗ ಖಾತ್ರಿ ಯೋಜನೆ ಕೆಲಸ ಮಾಡಿಸಲು ಆಗುತ್ತಿಲ್ಲ. ಆದುದರಿಂದ ಕೂಡಲೇ ವರ್ಗಾವಣೆ ಆದೇಶ ರದ್ದುಪಡಿಸಬೇಕೆಂದು ಶೃಂಗೇರಿ ಶಿವಣ್ಣ ಹೇಳಿದರು.
ಸರ್ಕಾರದ ಗಮನಕ್ಕೆ ತರಲಾಗಿದೆ:  ಇದಕ್ಕೆ ಉತ್ತರಿಸಿದ ಜಿಪಂ ಸಿಇಒ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಹಿಂದಿನ ಸಿಇಒ ಸಂದರ್ಭದಲ್ಲಿ ಈ ವರ್ಗಾವಣೆ ಆಗಿದೆ. ಈ ವಿಷಯವನ್ನು ಸರ್ಕಾರದ ಗಮನಕ್ಕೆ ತರಲಾಗಿದೆ ಎಂದು ಹೇಳಿದಾಗ, ಪಿಡಿಓಗಳ ವರ್ಗಾವಣೆ ಇದೇ ಮೊದಲಲ್ಲ, ಈ ಹಿಂದೆಯೂ ಸಂಬಂಧಪಟ್ಟ ಕ್ಷೇತ್ರಗಳ ಜಿಪಂ ಸದಸ್ಯರ ಗಮನಕ್ಕೆ ತಾರದೆ ಮಾಡಲಾಗಿದೆ ಎಂದು ಸವಿತಾ ರಮೇಶ್ ಹೇಳಿದಾಗ, ತಮ್ಮ ಕ್ಷೇತ್ರದಲ್ಲೂ ಹೀಗೆ ಆಗಿದೆ ಎಂದು ರಂಗನಾಥ್ ತಿಳಿಸಿದರು.
ನಿಯಮ ಪ್ರಕಾರ ವರ್ಗಾವಣೆಯಾಗಿದ್ದರೆ ಸರಿ. ಆದರೆ, ನಿಯಮ ಮೀರಿ ವರ್ಗಾವಣೆಯಾಗಿದ್ದರೆ, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಪತ್ರ ಬರೆಯಬೇಕೆಂದು ಶಾಸಕ ಸಿ.ಟಿ. ರವಿ ಸಲಹೆ ನೀಡಿದರು. ಜತೆಗೆ ವರ್ಗಾವಣೆಗೆ ಸಂಬಂಧಿಸಿದಂತೆ ಸರ್ಕಾರ ಜಾರಿಗೆ ತಂದಿರುವ ನಿಮಯ ಪಾಲನೆ ಮಾಡಲಾಗಿದಿಯಾ ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಜಿಪಂ ಉಪ ಕಾರ್ಯದರ್ಶಿ (2) ನಾಗರಾಜ್, ಸರ್ಕಾರ ನಿಯಮದ ಪ್ರಕಾರ 3 ವರ್ಷ ಮೇಲ್ಪಟ್ಟ ಪಿಡಿಓಗಳನ್ನು ಶೇ. 3 ರಷ್ಟು ಮಂದಿಯನ್ನು ವರ್ಗಾವಣೆ ಮಾಡಲು ಅವಕಾಶ ಇದೆ. ಅದರಂತೆ ವರ್ಗಾವಣೆ ಮಾಡಲಾಗಿದೆ ಎಂದಾಗ, ಹಾಗಾದರೆ ಎಷ್ಟು ಪಿಡಿಒರನ್ನು ವರ್ಗಾವಣೆ ಮಾಡಲಾಗಿದೆ ಎಂದು ಸಿ.ಟಿ. ರವಿ ಪ್ರಶ್ನಿಸಿದಾಗ, 8 ಪಿಡಿಓರನ್ನು ವರ್ಗಾವಣೆ ಮಾಡಲಾಗಿದೆ ಎಂದು ನಾಗರಾಜ್ ಹೇಳಿದರು.
ನಿಯಮ ಪ್ರಕಾರ 6 ಪಿಡಿಒರನ್ನು ವರ್ಗಾವಣೆ ಮಾಡುವಲ್ಲಿ 8 ಪಿಡಿಒರನ್ನು ವರ್ಗಾವಣೆ ಮಾಡುವ ಮೂಲಕ ನಿಯಮ ಉಲ್ಲಂಘನೆಯಾಗಿದೆ ಎಂದು ಸಿ.ಟಿ. ರವಿ ಹೇಳಿದಾಗ, ಕೊರತೆ ಇರುವ ಕಡೆಗಳಲ್ಲಿ ಪಿಡಿಓಗಳನ್ನು ಬೇರೆ ಪಂಚಾಯ್ತಿಗಳಿಂದ ನಿಯೋಜನೆ ಮಾಡಲಾಗುವುದು ಎಂದು ಹೇಳಿ ಚರ್ಚೆಗೆ ತೆರೆ ಎಳೆದರು.
ತಂಡ ರಚನೆ: ಜಿಲ್ಲೆಯ ಮೊರಾರ್ಜಿ ದೇಸಾಯಿ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಕಟ್ಟಡಗಳ ಸ್ಥಿತಿಗತಿಯ ಬಗ್ಗೆ ಚರ್ಚೆ ನಡೆಯಿತು. ಈ ಕಟ್ಟಡಗಳನ್ನು ಕರ್ನಾಟಕ ವಸತಿ ಶಾಲೆಗಳ ಶೈಕ್ಷಣಿಕ ಸಂಸ್ಥೆ (ಕ್ರೈಸ್)ಗಳನ್ನು ನಿರ್ಮಾಣ ಮಾಡಲಾಗುತ್ತಿದೆ.
ನಗರದ ಸಮೀಪದ ತೇಗೂರು ಬಳಿ ಇರುವ ಹಿಂದುಳಿದ ವರ್ಗಗಳ ವಸತಿ ನಿಲಯದಲ್ಲಿ ನೀರಿನ ಸಮಸ್ಯೆ ಇದೆ ಎಂದು ಸವಿತಾ ರಮೇಶ್ ಸಭೆಯ ಗಮನಕ್ಕೆ ತಂದಾಗ ಇನ್ನೊಂದು ತಿಂಗಳೊಳಗೆ ಅಲ್ಲಿ ಕೊಳವೆ ಬಾವಿ ನಿರ್ಮಾಣ ಮಾಡಿ ನೀರಿನ  ಸಂಪರ್ಕ ಕಲ್ಪಿಸಲಾಗುವುದು ಎಂದು ಕ್ರೈಸ್ ಸಂಸ್ಥೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ನಾಗರಾಜ್ ಹೇಳಿದರು.
ತರೀಕೆರೆ ತಾ. ನಂದಿಬಟ್ಟಲು ಮೊರಾರ್ಜಿ ದೇಸಾಯಿ ವಸತಿ ಶಾಲೆ ಸೋರುತ್ತಿದೆ. ಆ ಶಾಲೆಗೆ ಕಾಂಪೌಂಡ್ ಇಲ್ಲ. ಆದುದರಿಂದಾಗಿ ಸಮೀಪದ ಕಾಡಿನಿಂದ ಅಲ್ಲಿಗೆ ಆನೆಗಳು, ಹುಲಿ ಹಾಗೂ ಕಾಡು ಪ್ರಾಣಿಗಳು ಬಂದು ಹೋಗುತ್ತಿವೆ. ಇದರಿಂದ ಅಲ್ಲಿನ ಮಕ್ಕಳು ಭಯದಲ್ಲೇ ಶಿಕ್ಷಣ ಪಡೆಯುತ್ತಿದ್ದಾರೆ ಎಂದು ಹೇಮಾವತಿ ಕೃಷ್ಣಪ್ಪ ಹೇಳಿದರು.
ಜಿಪಂ ಸದಸ್ಯರು ಪ್ರಸ್ತಾಪಿಸಿದಂತೆ ಅಂತಹ ಕಟ್ಟಡಗಳ ಪಟ್ಟಿ ಮಾಡಿ ಪರಿಶೀಲನೆ ನಡೆಸಬೇಕು. ಇದಕ್ಕಾಗಿ  ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ತಂಡ ರಚನೆ ಮಾಡಿ, ಈ ವರದಿಯನ್ನು ಆಯಾಯ ಕ್ಷೇತ್ರದ ಜಿಪಂ ಸದಸ್ಯರಿಗೆ ನೀಡಬೇಕು. ಇಲ್ಲದೆ ಹೋದರೆ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಇಲಾಖೆಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಿಇಓ ಎಚ್ಚರಿಕೆ ನೀಡಿದರು.
 


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement