ನರಸಿಂಹರಾಜಪುರ ತಾಲೂಕಿನಲ್ಲಿ ಬತ್ತದ ನಾಟಿ ಕಾರ್ಯ ಬಿರುಸು
ನರಸಿಂಹರಾಜಪುರ: ತಾಲೂಕಿನಾದ್ಯಂತ ಬತ್ತದ ನಾಟಿ ಕಾರ್ಯ ಬಿರುಸು ಗೊಂಡಿದ್ದು ಈಗಾಗಲೇ ಶೇ. 50 ರಷ್ಟು ನಾಟಿ ಕಾರ್ಯ ಮುಕ್ತಾಯಗೊಂಡಿದೆ.
ತಾಲೂಕಿನಲ್ಲಿ 6 ಸಾವಿರ ಹೆಕ್ಟೇರ್ ಬತ್ತದ ಗದ್ದೆಗಳಿದ್ದು, ಇದರಲ್ಲಿ 2800 ಹೆಕ್ಚೇರ್ ಪ್ರದೇಶದಲ್ಲಿ ನಾಟಿ ಕಾರ್ಯ ಮುಕ್ತಾಯಗೊಂಡಿದೆ. ಕೃಷಿ ಇಲಾಖೆ ಶಿಫಾರಸು ಮಾಡಿರುವ ಹೈಬ್ರಿಡ್ ಬತ್ತದ ತಳಿಗಳಾದ ಎಂ.ಟಿ.ಯು 1001, ಜಯ, ತುಂಗಾ, ಜಯ, ಜೆ.ಜಿ.ಎಲ್ 1798 ಬತ್ತದ ತಳಿಗಳನ್ನು ರೈತರು ಹೆಚ್ಚಾಗಿ ಬೆಳೆದಿದ್ದಾರೆ.
ಅತಿಯಾಗಿ ಮಳೆ ಬೀಳುತ್ತಿರುವುದರಿಂದ ನಾಟೀ ಮಾಡುವ ಸಮಯದಲ್ಲಿ ರಸ ಗೊಬ್ಬರ ನೀಡುವ ಬದಲು ನಾಟೀ ಮಾಡಿದ 15 ದಿನದ ನಂತರ ರಸಗೊಬ್ಬರ ನೀಡುವುದು ಒಳ್ಳೆಯದು ಎಂದು ಸಹಾಯಕ ಕೃಷಿ ನಿರ್ದೇಶಕ ಸೊಣ್ಣಪ್ಪರೆಡ್ಡಿ ಸಲಹೆ ನೀಡಿದ್ದಾರೆ. 150 ಎಕರೆ ಜೋಳ: ಕಡಿಮೆ ಮಳೆ ಬೀಳುವ ಪ್ರದೇಶವಾದ ಮುತ್ತಿನಕೊಪ್ಪ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಆಲ್ದರ, ಬೈರಾಪುರ ಗ್ರಾಮದಲ್ಲಿ ರೈತರು 150 ಎಕರೆ ಪ್ರದೇಶದಲ್ಲಿ ಮೆಕ್ಕೆ ಜೋಳವನ್ನು ಬಿತ್ತನೆ ಮಾಡಿದ್ದಾರೆ.
1115 ಮಿ.ಮೀ.ಮಳೆ: ತಾಲೂಕಿನಲ್ಲಿ ವರ್ಷಕ್ಕೆ 1724 ಮಿ.ಮೀ.ವಾಡಿಕೆಯ ಮಳೆಯಾಗಬೇಕಾಗಿದ್ದು ಇಲ್ಲಿಯವರೆಗೆ 1115 ಮಿ.ಮೀ.ಮಳೆಯಾಗಿದೆ. ಈ ವರ್ಷ ಜುಲೈ ತಿಂಗಳಲ್ಲೇ 721 ಮ.ಮೀ.ಮಳೆ ಬಿದ್ದಿದೆ. ಕಳೆದ ವರ್ಷ ಜುಲೈ ತಿಂಗಳಲ್ಲಿ 991 ಮಿ.ಮೀ.ಮಳೆ ಬಿದ್ದಿತ್ತು.