ಪ್ರತಿಭಟನಕಾರರಿಗೆ ನ್ಯಾಯಾಂಗ ಬಂಧನ
ತರೀಕೆರೆ/ ಕಡೂರು: ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದಿಂದ ತರೀಕೆರೆ, ಬೆಟ್ಟದಾವರೆಕೆರೆ ಮತ್ತು ಅಜ್ಜಂಪುರ ಬಳಿ ಭದ್ರಾ ಕಾಮಗಾರಿ ಕಾರ್ಯ ಪ್ರಾರಂಭಿಸಿದ್ದನ್ನು ಪ್ರತಿಭಟಿಸಿದ ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷ ಡಿ.ಸಿ. ಸುರೇಶ್, ಸಂಘದ ಪದಾಧಿಕಾರಿಗಳನ್ನು ಮತ್ತು ಮಾಜಿ ಶಾಸಕ ಬಿ.ಆರ್. ನೀಲಕಂಠಪ್ಪ ಸೇರಿದಂತೆ 15 ಮಂದಿಯನ್ನು ಶನಿವಾರ ಪೋಲಿಸರು ಬಂಧಿಸಿದಿಸಿದ್ದು, ಎಲ್ಲರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಶನಿವಾರ ಮಧ್ಯಾಹ್ನ ಅಜ್ಜಂಪುರದಲ್ಲಿ ಅಮರಣಾಂತ ಉಪವಾಸ ಕುಳಿತಿದ್ದ ನೀಲಕಂಠಪ್ಪ ಮತ್ತು ಇತರೆ 14 ಸಹಚರರನ್ನು ಬಂಧಿಸಿ ಕಡೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಪ್ರಮಾಣ ಪತ್ರ ಪಡೆದ ಬಳಿಕ ಕಡೂರು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ನ್ಯಾಯಾಲಯಕ್ಕೆ ಕರೆದೊಯ್ಯುತ್ತಿರುವಾಗ ಪತ್ರಿಕೆಯೊಂದಿಗೆ ಮಾತನಾಡಿದ ನೀಲಕಂಠಪ್ಪ, ಇದು ಸರ್ವಾಧಿಕಾರಿ ಧೋರಣೆ. ನ್ಯಾಯ ಪರಿಪಾಲನೆಯಂತೆ ಅಜ್ಜಂಪುರರದಲ್ಲಿ ಪ್ರತಿಭಟಿಸುತ್ತಿದ್ದ ನಮ್ಮನ್ನು ತರೀಕೆರೆ ನ್ಯಾಯಾಲಯಕ್ಕೆ ಹಾಜರು ಪಡಿಸಬೇಕಾಗಿತ್ತು. ಆದರೆ ಏಕಾ ಏಕಿ ಕಾನೂನನ್ನೇ ತಿರುಚಲು ಸರ್ಕಾರ ಮುಂದಾಗಿ ಧರಣಿಯನ್ನು ಹತ್ತಿಕ್ಕುತ್ತಿದೆ ಎಂದು ಆರೋಪಿಸಿದರು.
ಇದಕ್ಕೆಲ್ಲಿ ತಾವು ಜಗ್ಗುವುದಿಲ್ಲ ಬದಲಾಗಿ ನಮ್ಮ ಹೋರಾಟ ಮುಂದುವರಿಯುತ್ತದೆ. ತಾವು ತರೀಕೆರೆ ನ್ಯಾಯಾಲಯದಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸದೇ ಇದ್ದುದ್ದರಿಂದ ಇಂದು ಧರಣಿ ಕುಳಿತಿದ್ದ ಅಜ್ಜಂಪುರದಿಂದ ತರೀಕೆರೆ ನ್ಯಾಯಾಲಯಕ್ಕೆ ಕರೆದೊಯ್ಯದೆ ಉದ್ದೇಶಪೂರ್ವಕವಾಗಿ ತಮ್ಮನ್ನು ಹಾಗು ಹಾಗು ತಮ್ಮ ಬೆಂಬಲಿಗರನ್ನು ಪೋಲೀಸರು ಅಧಿಕಾರ ದುರ್ಬಳಕೆ ಮಾಡಿಕೊಂಡು ತಮ್ಮನ್ನು ಬಂಧಿಸಿ ಕಡೂರಿಗೆ ಕರೆತಂದಿದ್ದಾರೆ ಎಂದರು.
ತಾಲೂಕು ಘಟಕದ ಅಧ್ಯಕ್ಷ ಡಿ.ಸಿ. ಸುರೇಶ್ ಮಾತನಾಡಿ, ಅಜ್ಜಂಪುರ ಭದ್ರಾ ಯೋಜನಾ ಕಾಮಗಾರಿ ಸ್ಥಳದ ಬಳಿ ಆಗಮಿಸಿದ ನೀರಾವರಿ ನಿಗಮದ ಅಧಿಕಾರಿಗಳನ್ನು, ತರೀಕೆರೆ ತಾಲೂಕಿಗೆ ಎಷ್ಟು ಟಿಎಂಸಿ ನೀರನ್ನು ಪಡೆಯಲು ಪ್ರಸ್ತಾವನೆ ಕಳಿಸಲಾಗಿದೆ, ಡಿಪಿಆರ್ ವಿವರ ಕೊಡಿ ಎಂದು ಕೇಳಿದ್ದಕ್ಕೆ ಶಾಂತಿಯುತವಾಗಿ ಚಳವಳಿ ನಡೆಸುತ್ತಿರುವ ರೈತರ ಮತ್ತು ಮಹಿಳೆಯರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಎಲ್ಲಿಯವರೆಗೆ ಕಾಮಗಾರಿ ಕಾರ್ಯ ನಿಲ್ಲಿಸುವುದಿಲ್ಲವೋ ಅಲ್ಲಿಯವರೆಗೂ ಉಪವಾಸ ಸತ್ಯಾಗ್ರಹ ಮಾಡುತ್ತೇವೆ ಮತ್ತು ಬೇಲ್ ಕೂಡ ಪಡೆಯುವುದಿಲ್ಲ ಎಂದು ಹೇಳಿದರು.
ಪುಟ್ಟಸ್ವಾಮಿ, ಲಕ್ಷ್ಮಣ್, ರಾಜ್ಕುಮಾರ್, ರೈತ ಸಂಘದ ಸದಸ್ಯರು ಭಾಗವಹಿಸಿದ್ದರು.