ಬ್ಲಾಕ್ ಮೇಲ್ ಕಾರ್ಯಕ್ರಮ
ಚಿಕ್ಕಮಗಳೂರು: ಒತ್ತುವರಿ ತೆರವು ಸಂಬಂಧ ಕಾಫಿ ಬೆಳೆಗಾರರ ಹಿತರಕ್ಷಣಾ ವೇದಿಕೆ ಸಂಸದರೊಂದಿಗೆ ಹಮ್ಮಿಕೊಂಡಿದ್ದ ಸಂವಾದದಲ್ಲಿ ಚರ್ಚೆಯಾದ ವಿಷಯಗಳು ಕೇವಲ ಭಾರಿ ಭೂ ಮಾಲೀಕರ ಮತ್ತು ರಾಜಕೀಯ ಪಕ್ಷಗಳ ಮುಖಂಡರ ಒತ್ತುವರಿ ಭೂಮಿಯ ಉಳುವಿಗಾಗಿ ನಡೆಸಿರುವ ಕುತಂತ್ರ ಮತ್ತು ಬ್ಲಾಕ್ ಮೇಲ್ ಕಾರ್ಯಕ್ರಮ ಎಂದು ಸಿಪಿಐ (ಎಂ.ಎಲ್.) ರಾಜ್ಯ ಕಾರ್ಯದರ್ಶಿ ಬಿ. ರುದ್ರಯ್ಯ ಆರೋಪಿಸಿದ್ದಾರೆ.
ಪ್ರತಿ ಚುನಾವಣೆ ಸಂದರ್ಭದಲ್ಲಿ ಜನ ಸಾಮಾನ್ಯರ ಪರ ಪ್ರಣಾಳಿಕೆ ಬಿಡುಗಡೆ ಮಾಡಿ ಜನರಿಗೆ ದ್ರೋಹ ಮಾಡುತ್ತಾ, ತಮ್ಮ ಆಸ್ತಿ ಅಂತಸ್ತುಗಳನ್ನು ದುಪ್ಪಟ್ಟುಗೊಳಿಸುತ್ತಿರುವ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ನಾಯಕರುಗಳು ಬಹಿರಂಗವಾಗಿ ಆಸ್ತಿ ಘೋಷಣೆ ಮಾಡಲಿ ಮತ್ತು ಈಗಾಗಲೇ 1961ರ ಭೂ ಸುಧಾರಣೆ ಕಾಯ್ದೆ ಸಂದರ್ಭದಲ್ಲಿ ತಮ್ಮ ಪೂರ್ವಜರು ಘೋಷಿಸಿರುವ ಆಸ್ತಿ ಘೋಷಣೆ ಪತ್ರವನ್ನು ಜಿಲ್ಲೆಯ ಜನರ ಮುಂದಿಟ್ಟು ತಾವು ವಂಚಕರಲ್ಲ ಎಂಬುದನ್ನು ಸಾಭೀತುಪಡಿಸಲಿ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಂಪ್ಯೂಟರೀಕರಣಕ್ಕೆ ಸೂಚನೆ
ಚಿಕ್ಕಮಗಳೂರು: ಪ್ರಾದೇಶಿಕ ಸಾರಿಗೆ ಕಚೇರಿ (ಆರ್ಟಿಒ)ಯಲ್ಲಿ ದೈನಂದಿನ ಕೆಲಸ ಕಾರ್ಯಗಳು ನಿಯಮಾನುಸಾರವಾಗಿ ನಡೆಯಬೇಕೆಂದು ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಜಿಲ್ಲಾಧಿಕಾರಿ ಬಿ.ಎಸ್. ಶೇಖರಪ್ಪ ಸೂಚನೆ ನೀಡಿದ್ದಾರೆ. ನಗರದ ಪ್ರಾದೇಶಿಕ ಸಾರಿಗೆ ಕಚೇರಿಗೆ ಶನಿವಾರ ಭೇಟಿ ನೀಡಿ ಸಾರ್ವಜನಿಕರ ಕುಂದುಕೊರತೆ ಆಲಿಸಿ ಕಚೇರಿಯ ದೈನಂದಿನ ಕಾರ್ಯಚಟುವಟಿಕೆಗಳನ್ನು ಪರಿಶೀಲನೆ ಮಾಡಿದರು. ಪ್ರತಿದಿನದ ಹಣಕಾಸಿನ ವ್ಯವಹಾರಗಳನ್ನು ತಪ್ಪದೇ ಹಣಕಾಸು ಪುಸ್ತಕದಲ್ಲಿ ನಮೂದು ಮಾಡಬೇಕೆಂದ ಅವರು, ಹಾಲಿ ನಿರ್ವಹಿಸುತ್ತಿರುವ ವ್ಯವಹಾರದ ದಾಖಲಾತಿಗಳ ಬಗ್ಗೆ ಅಸಮದಾನ ವ್ಯಕ್ತಪಡಿಸಿ, ಹಳೇ ದಾಖಲಾತಿಯ ನಿರ್ವಹಣೆಯನ್ನು ಕಂಪ್ಯೂಟರೀಕರಣಗೊಳಿಸಬೇಕೆಂದು ಸಲಹೆ ನೀಡಿದರು. ವಾಹನ ಪರವಾನಿಗೆ, ವಾಹನ ವರ್ಗಾವಣೆ, ನೋಂದಣಿ, ತೆರಿಗೆ ಸಂಗ್ರಹ ಸೇರಿದಂತೆ ಮತ್ತಿತರೆ ಪ್ರಸ್ತುತ ದಿನದಲ್ಲಿ ಬಂದಂತಹ ಅರ್ಜಿಗಳ ವಿವರ ಪಡೆದ ಅವರು, ಹಣಕಾಸು ಶಾಖೆಯ ಷರ ಪಡೆಯುವುದರೊಂದಿಗೆ ಅರ್ಜಿಗಳನ್ನು ಸಕಾಲ ಕಾರ್ಯಕ್ರಮದಡಿ ನಿಗಧಿತ ಅವಧಿಯಲ್ಲಿ ವಿಲೇವಾರಿ ಮಾಡುವಂತೆ ಸೂಚನೆ ನೀಡಿದರು.
ಯುವಕರಿಗೆ ಮಾರ್ಗದರ್ಶನ ಕೊರತೆ
ಚಿಕ್ಕಮಗಳೂರು: ಏಷ್ಯಾಡ್ ಮತ್ತು ಒಲಂಪಿಕ್ ಆಟೋಟ ಸ್ಪರ್ಧೆಗಳಲ್ಲಿ ನಮ್ಮ ಯುವಕರು ಕಳಪೆ ಪ್ರದರ್ಶನ ನೀಡುತ್ತಿದ್ದಾರೆ. ಇದು, ಆಟಗಾರರ ತಪ್ಪೇನೂ ಅಲ್ಲ, ಸರ್ಕಾರ ಯುವಕರಿಗೆ ಸರಿಯಾದ ಮಾರ್ಗದರ್ಶನ ಹಾಗೂ ಮೂಲಭೂತ ಸೌಕರ್ಯ ಒದಗಿಸುವುದರಲ್ಲಿ ವಿಫಲವಾಗಿರುವುದೇ ಕಾರಣ ಎಂದು ಶಾಸಕ ಸಿ.ಟಿ. ರವಿ ಹೇಳಿದ್ದಾರೆ. ನಗರದ ಜಿಲ್ಲಾ ಆಟದ ಮೈದಾನದಲ್ಲಿ ಶನಿವಾರ ಆರಂಭಗೊಂಡ ದಕ್ಷಿಣ ಭಾರತ ರಾಷ್ಟ್ರೀಯ ಮಟ್ಟದ ಬ್ಯಾಸ್ಕೆಟ್ ಬಾಲ್ ಚಾಂಪಿಯನ್ ಶಿಫ್ ಟೂರ್ನಿಮೆಂಟ್ ವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಅಥ್ಲೆಟಿಕ್ ಗಳಿಗೆ ಸರಿಯಾದ ಉತ್ತೇಜನ ನೀಡುವ ಕೆಲಸ ಆಗುತ್ತಿಲ್ಲ.
ಉದಾಹರಣೆ ನೀಡುವಾದರೆ ದೆಹಲಿಯಲ್ಲಿ ನಡೆದ ಕಾಮನ್ ವೆಲ್ತ್ ಪಂದ್ಯಾವಳಿಯಲ್ಲಿ ನಡೆದ ಹಗರಣವೇ ಸಾಕ್ಷಿ ಎಂದರು. ಭ್ರಷ್ಟಚಾರ, ಸ್ವಜನಪಕ್ಷಪಾತಗಳಿಂದಾಗಿ ಎಲ್ಲಾ ವ್ಯವಸ್ಥೆ ಹದಗೆಟ್ಟು ಹೋಗಿದೆ. ಇದನ್ನು ಸರಿಪಡಿಸುವ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ಸರ್ಕಾರ ಇಚ್ಛಾಸಕ್ತಿ ಪ್ರದರ್ಶಿಸಬೇಕು ಎಂದು ಹೇಳಿದರು.
ಕೊಲೆ: ಅಪರಾಧಿಗೆ ಜೀವಾವಧಿ ಶಿಕ್ಷೆ
ಚಿಕ್ಕಮಗಳೂರು: ಹಣದ ಆಸೆಗಾಗಿ ಸ್ವಂತ ದೊಡ್ಡಪ್ಪನನ್ನೇ ಕೊಲೆ ಮಾಡಿದ ಆರೋಪಿಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಕಠಿಣ ಜೀವಾವಧಿ ಶಿಕ್ಷೆ ಹಾಗೂ 5 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.
2012ರ ಜುಲೈ 8 ರಂದು ಕಡೂರು ಪಟ್ಟಣದಲ್ಲಿ ಮಂಜುನಾಥ ಎಂಬುವವರನ್ನು ತಿಲಕ್ ಕೊಲೆ ಮಾಡಿದ್ದನು. ತಿಲಕ್ ತನ್ನ ದೊಡ್ಡಪ್ಪ ಮಂಜುನಾಥ ಅವರಿಂದ 40 ಸಾವಿರ ಸಾಲ ಪಡೆದುಕೊಂಡಿದ್ದ. ಮಂಜುನಾಥ ಮದುವೆಯಾಗದೇ ಇದ್ದುದರಿಂದ ಆತನನ್ನು ಕೊಲೆ ಮಾಡಿದರೆ ತಾನು ಕೊಡಬೇಕಾದ ಸಾಲ ತೀರುತ್ತದೆ ಹಾಗೂ ಅವರ ಆಸ್ತಿ ಮತ್ತು ಹಣ ತನಗೇ ಸಿಗುತ್ತದೆ ಎಂದು ಆಸೆ ಪಟ್ಟು ಕೊಲೆ ಮಾಡಿದ್ದನು. ಈ ಸಂಬಂಧ ಕಡೂರು ಠಾಣಾ ಪೊಲೀಸರು ಆರೋಪಿಯ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಹೆಚ್.ಎಸ್. ಕಮಲ ಅವರು ಪ್ರಕರಣ ಸಾಬಿತಾದ ಹಿನ್ನೆಲೆಯಲ್ಲಿ ಆರೋಪಿ ತಿಲಕ್ ನಿಗೆ ಕಠಿಣ ಜೀವಾವಧಿ ಶಿಕ್ಷೆ ಹಾಗೂ 5 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಸರ್ಕಾರಗಳಿಂದಲೇ ಶೋಷಣೆ
ಶೃಂಗೇರಿ: ವಿವಿಧ ಭೇಡಿಕೆ ಮುಂದಿಟ್ಟುಕೊಂಡು ಕಳೆದ 6 ದಿನಗಳಿಂದ ನಿರಂತರ ಧರಣಿ ನಡೆಸುತ್ತಿದ್ದರೂ, ರಾಜ್ಯ, ಕೇಂದ್ರ ಸರ್ಕಾರಗಳು ಯಾವುದೇ ರೀತಿಯಲ್ಲಿ ಸ್ಪಂದಿಸದೇ ರೈತರನ್ನು ಕಡೆಗಣಿಸುತ್ತಿದ್ದು, ಸರ್ಕಾರಗಳೇ ರೈತರನ್ನು ಶೋಷಣೆ ಮಾಡುತ್ತಿವೆ ಎಂದು ತಾಲೂಕು ರೈತ ಸಂಘದ ಅಧ್ಯಕ್ಷ ಟಿ.ಕೆ. ಗೋಪಾಲ ನಾಯಕ್ ಆರೋಪಿಸಿದರು.
ಅವರು ರೈತಪರ ಸಂಘಟನೆಗಳು ವಿವಿಧ ಬೇಡಿಕೆ ಈಡೇರಿಸುವಂತೆ ತಾಲೂಕು ಕಚೇರಿ ಎದುರು ನಡೆಸುತ್ತಿರುವ ನಿರಂತರ ಧರಣಿ ಸತ್ಯಾಗ್ರಹದಲ್ಲಿ ಮಾತನಾಡಿದರು. ಹಳದಿ ಎಲೆ, ಕೊಳೆ ರೋಗದಿಂದ ಶೇ.85 ಅಡಕೆ ಬೆಳೆ ನಾಶವಾಗಿದೆ. ಕೇಂದ್ರ ಸರ್ಕಾರ ನಿಯೋಗ ಕಳುಹಿಸಿ ಸಮೀಕ್ಷೆ ನಡೆಸಿತು. ಆದರೆ ಯಾವುದೇ ರೀತಿಯ ಪರಿಹಾರ ಸಿಕ್ಕಿಲ್ಲ. ಗೋರಕ್ ಸಿಂಗ್ ವರದಿ ಅನುಷ್ಠಾನಗೊಳಿಸಿಲ್ಲ. ಸಾಲದ ಹೊರೆಯಿಂದ ತತ್ತರಿಸಿರುವ ರೈತ ದಿಕ್ಕು ಕಾಣದೇ ಆತ್ಮಹತ್ಯೆ ಹಾದಿ ಹಿಡಿದಿದ್ದಾನೆ ಎಂದರು. ಕಳೆದ 2 ವರ್ಷಗಳ ಹಿಂದೆ ನಿರಂತರ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾಗ, ಕೇಂದ್ರ ಸಚಿವ ವೀರಪ್ಪ ಮೊಯ್ಲಿ, ಆಸ್ಕರ್ ಫರ್ನಾಂಡಿಸ್, ವಿನಯ ಕುಮಾರ್ ಸೊರಕೆ ಭೇಟಿ ನೀಡಿ ಭರವಸೆ ನೀಡಿದ್ದರು.ಆದರೆ, ಇದುವರೆಗೂ ಸಮಸ್ಯೆ ಪರಿಹರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
23ಕ್ಕೆ ರಾಜ್ಯಮಟ್ಟದ ಸಮಾವೇಶ
ಕಡೂರು: ಇದೇ ತಿಂಗಳ 23ರಂದು ತುಮಕೂರಿನಲ್ಲಿ ನಡೆಯಲಿರುವ ಹಿಂದುಳಿದ ವರ್ಗ ಹಾಗೂ ಪರಿಶಿಷ್ಟ ಜಾತಿ, ಪಂಗಡಗಳ ರಾಜ್ಯಮಟ್ಟದ ಸಮಾವೇಶಕ್ಕೆ ಅತ್ಯಧಿಕ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿ ಯಶಸ್ವಿಗೊಳಿಸುವಂತೆ ಬಿಜೆಪಿ ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಕನಕರಾಜ್ ಅರಸ್ ಮನವಿ ಮಾಡಿದರು. ಅವರು ಕಡೂರು ಪಟ್ಟಣ ಕೋಟೆಯ ಶಂಕರಮಠದಲ್ಲಿ ನಡೆದ ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಹಾಗೂ ವರ್ಗದ ರಾಜ್ಯಮಟ್ಟದ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಜಿಲ್ಲೆಯಲ್ಲಿ ಹಿಂದುಳಿದ ವರ್ಗ, ಎಸ್.ಸಿ., ಎಸ್.ಟಿ. ಜನಾಂಗ ಹೆಚ್ಚಿನ ಸಂಖ್ಯೆಯಲ್ಲಿದೆ. ಈ ವರ್ಗಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಬಿಜೆಪಿ ಬದ್ಧವಾಗಿದೆ ಎಂದರು. ತಾಲೂಕು ಬಿಜೆಪಿ ಅಧ್ಯಕ್ಷ ಕೆ.ಎಚ್. ಶಂಕರ್ ಮಾತನಾಡಿ, ಕಾರ್ಯಕರ್ತರು ಸಂಘಟನೆ ಕಡೆ ಹೆಚ್ಚಿನ ಗಮನ ನೀಡಬೇಕು. ಪಕ್ಷ ಜನರ ವಿಶ್ವಾಸ ಗಳಿಸಲು ಇದು ಪೂರಕ ಕ್ರಮ. ದೇಶದೆಲ್ಲೆಡೆ ಬಿಜೆಪಿಯತ್ತ ಮತದಾರರು ಹೆಚ್ಚಿನ ನಿರೀಕ್ಷೆ ಇಟ್ಟಿದ್ದಾರೆ. ಮೋದಿ ಈ ದೇಶದ ಪ್ರಧಾನಿಯಾಗಬೇಕು ಎಂಬ ಕೂಗು ಎಲ್ಲೆಡೆ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ಪಕ್ಷವನ್ನು ಸದೃಢವಾಗಿ ಕಟ್ಟಬೇಕಾದ ಅನಿವಾರ್ಯತೆ ಎಂದರು.
ಭಗವಾಧ್ವಜ ಕಟ್ಟೆ ತೆರವು ಬೇಡ
ಚಿಕ್ಕಮಗಳೂರು: ಆಲ್ದೂರಿನಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ವೃತ್ತ ಹಾಗೂ ಭಗವಧ್ವಜ ಕಟ್ಟೆ ತೆರವುಗೊಳಿಸಬಾರದೆಂದು ಆಲ್ದೂರಿನ ಡಾ. ಬಿ.ಆರ್. ಅಂಬೇಡ್ಕರ್ ಸ್ವಾಭಿಮಾನಿ ವೇದಿಕೆ ಜಿಲ್ಲಾಡಳಿತವನ್ನು ಆಗ್ರಹಿಸಿದೆ. ಈ ಸಂಬಂಧ ವೇದಿಕೆ ಮುಖಂಡರು, ಜಿಲ್ಲಾಧಿಕಾರಿ ಕಚೇರಿಯ ಪ್ರಭಾರಿ ಸಹಾಯಕ ನಂದಕುಮಾರ್ ಅವರಿಗೆ ಶನಿವಾರ ಮನವಿ ಸಲ್ಲಿಸಿದರು. ಆಲ್ದೂರು ಗ್ರಾಪಂ ಸುಮಾರು ಒಂದೂವರೆ ಲಕ್ಷ ರುಪಾಯಿ ಅನುದಾನದಲ್ಲಿ ಅಂಬೇಡ್ಕರ್ ವೃತ್ತ ನಿರ್ಮಿಸಲಾಗಿದೆ. ಇದು ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಸಂದ ಗೌರವ. ಅದೇ ರೀತಿ ಹಿಂದೂ ಸಮಾಜದ ಎಲ್ಲಾ ಜಾತಿಯ, ಎಲ್ಲಾ ವರ್ಗದ ಅಭಿಪ್ರಾಯದ ಮೇರೆಗೆ ಇಲ್ಲಿ ಭಗವದ್ವಜ ಕಟ್ಟೆ ನಿರ್ಮಿಸಲಾಗಿದೆ. ಇದು ಸ್ವಾಭಿಮಾನ ಮತ್ತು ಸಂಸ್ಕಾರದ ಪ್ರತೀಕ ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಲಾಭ ಪಡೆಯುವ ಉದ್ದೇಶ ಹೊಂದಿರುವ ರಾಜಕೀಯ ಪಕ್ಷವೊಂದು ಈ ವಿಷಯದಲ್ಲಿ ವೋಟ್ ಬ್ಯಾಂಕ್ ರಾಜಕಾರಣ ಮಾಡಲು ಹೊರಟಿದೆ. ಇಲ್ಲಿರುವ ಅಂಬೇಡ್ಕರ್ ವೃತ್ತ ಹಾಗೂ ಭಗವದ್ವಜ ಕಟ್ಟೆ ತೆರವುಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.
ರಾಜ್ಯ ಸರ್ಕಾರದ್ದು ಶೂನ್ಯ ಸಾಧನೆ
ಚಿಕ್ಕಮಗಳೂರು: ಕಳೆದ 8 ತಿಂಗಳಲ್ಲಿ ರಾಜ್ಯ ಸರ್ಕಾರ ದಲಿತರಿಗೆ, ಹಿಂದುಳಿದವರಿಗೆ ಯಾವುದೇ ಕೊಡುಗೆ ನೀಡಿಲ್ಲ. ಇದೊಂದು ಶೂನ್ಯ ಸಾಧನೆಯ ಸರ್ಕಾರ ಎಂದು ಮಾಜಿ ಶಾಸಕ ನಂಜುಂಡಸ್ವಾಮಿ ಆರೋಪಿಸಿದ್ದಾರೆ.
ಸಂವಿಧಾನ ಬದ್ಧವಾಗಿ ದಲಿತರಿಗೆ ಹಾಗೂ ಹಿಂದುಳಿದವರಿಗೆ ಕೊಡಬೇಕಾದ ಸವಲತ್ತುಗಳನ್ನು ಈ ಸರ್ಕಾರ ನೀಡಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಶನಿವಾರ ಹೇಳಿದರು. ಹಿಂದಿನ ಬಿಜೆಪಿ ಸರ್ಕಾರ ದಲಿತರಿಗೆ, ಹಿಂದುಳಿದ ವರ್ಗದವರಿಗೆ ಹಲವು ಕಾರ್ಯಕ್ರಮಗಳನ್ನು ರೂಪಿಸಿ, ಬಜೆಟ್ನಲ್ಲೂ ಅಪಾರ ಪ್ರಮಾಣದಲ್ಲಿ ಹಣ ಮೀಸಲಿಟ್ಟಿತ್ತು. ದಲಿತರ ಕಾಲೋನಿಗಳಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಾಣ, ಸಮುದಾಯ ಭವನಗಳಿಗೆ ನೆರವು ನೀಡಲಾಗಿತ್ತು. ಎಲ್ಲಾ ಸಮುದಾಯದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಿತ್ತು ಎಂದ ಅವರು, ಈಗಿನ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 8 ತಿಂಗಳು ಕಳೆದಿದೆ. ದಲಿತರಿಗೆ, ಹಿಂದುಳಿದ ವರ್ಗದವರಿಗೆ ಯಾವುದೇ ಹೊಸ ಯೋಜನೆ ನೀಡಿಲ್ಲ ಎಂದು ಆರೋಪಿಸಿದರು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯವರ ಕೈಯನ್ನು ಬಲ ಪಡಿಸಲು ತುಮಕೂರಿನಲ್ಲಿ ಫೆ. 23 ರಂದು ಸ್ವಾಭಿಮಾನಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.
ಕಾಂಗ್ರೆಸ್ ಎಸ್ಟಿ ಕಾರ್ಯಕರ್ತರ ಸಭೆ
ತರೀಕೆರೆ: ಪಟ್ಟಣದ ಕಾಂಗ್ರೆಸ್ ಕಾರ್ಯಾಲಯದಲ್ಲಿ ತಾಲೂಕು ಕಾಂಗ್ರೆಸ್ ಎಸ್.ಟಿ. ಸೆಲ್ ಕಾರ್ಯಕರ್ತರ ಸಭೆ ಏರ್ಪಡಿಸಲಾಗಿತ್ತು. ಜಿಲ್ಲಾ ಎಸ್.ಟಿ.ಸೆಲ್ ಅಧ್ಯಕ್ಷ ರಾಮಪ್ಪ ಸಭೆಯಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ತರೀಕೆರೆ ಬ್ಲಾಕ್ ಪ್ರಧಾನ ಕಾರ್ಯದರ್ಶಿ ಪರಶುರಾಮ್ ಮಾತನಾಡಿ, ಮುಂಬರುವ ಲೋಕಸಭಾ ಚುನಾವಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪರಿಶಿಷ್ಟ ಪಂಗಡದವರು ಸಂಘಟನಾತ್ಮಕವಾಗಿ ಪಕ್ಷವನ್ನು ಬಲಪಡಿಸಿ, ನಮ್ಮ ಪಕ್ಷ ಗೆಲ್ಲುವಂತೆ ಹೋರಾಡಬೇಕಿದೆ ಎಂದರು.
ಗೃಹ ಮಂಡಳಿ ನಮ್ಮ ಪಂಗಡದವರ ಜಮೀನನ್ನು ಭೂಸ್ವಾಧೀನ ಮಾಡಿಕೊಂಡಿರುವವರಿಗೆ ಸೂಕ್ತ ಪುನರ್ವಸತಿ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತದೆ ಮತ್ತು ತಾಲೂಕಿನ ಪರಿಶಿಷ್ಟ ಪಂಗಡದವರ ಸಮಸ್ಯೆಗಳಿಗೆ ಹೆಚ್ಚಿನ ರೀತಿಯಲ್ಲಿ ಸರ್ಕಾರಿ ಸೌಲಭ್ಯ ಕೊಡಿಸುವಲ್ಲಿ ಶಾಸಕರು ತುಂಬಾ ಸಹಕಾರ ನೀಡಿದ್ದಾರೆ ಎಂದರು. ಪುರಸಭೆ ಸದಸ್ಯೆ ಅನ್ನಪೂರ್ಣ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.
ಅನ್ನಭಾಗ್ಯ ಯೋಜನೆಗೆ ಚಾಲನೆ
ಕೊಪ್ಪ; ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಒಂದಾದ ಅನ್ನಭಾಗ್ಯ ಯೋಜನೆಯನ್ನು ತಾಲೂಕಿನಲ್ಲಿ ತಹಸೀಲ್ದಾರ್ ಶ್ರೀಧರ್ ಮೂರ್ತಿ ಎಸ್. ಪಂಡಿತ್ ಅವರು ಬಾಳಗಡಿಯ ಲ್ಯಾಂಪ್ಸ್ ಸಹಕಾರ ಸಂಘದ ನ್ಯಾಯ ಬೆಲೆ ಅಂಗಡಿಯಲ್ಲಿ ಶನಿವಾರ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಸಾರ್ವಜನಿಕರು ಹಾಗೂ ಕೂಲಿ ಕಾರ್ಮಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ತಾಲೂಕಿನ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಸರ್ಕಾರಿ ರಜೆ ಹೊರತುಪಡಿಸಿ ಪ್ರತಿ ತಿಂಗಳ 1 ರಿಂದ 10 ನೇ ದಿನಾಂಕದ ವರೆಗೆ ಬೆಳಗ್ಗೆ 8 ರಿಂದ ರಾತ್ರಿ 8ರವರೆಗೆ ಪಡಿತರ ವಿತರಣೆ ಮಾಡಲಾಗುವುದು. ನಂತರದಿನ ಗಳಲ್ಲಿ ಹಿಂದಿನಂತೆ ಪಡಿತರ ವಿತರಣೆಯನ್ನು ಮಾಡಲಾಗುವುದು ಎಂದರು. ಪಡಿತರವನ್ನು ಬಯೋವುಟ್ರಿಕ್ ಯಂತ್ರದ ಮೂಲಕ ವಿತರಣೆ ಮಾಡಲಾಗುವುದು. ಪಡಿತರದಾರು ಉಚಿತ ದೂರವಾಣಿಯ ಸಂಖ್ಯೆ 1967 ರ ಮೂಲಕ ದೂರು ಸಲ್ಲಿಸಬಹುದಾಗಿದೆ ಎಂದು ತಿಳಿಸಿದರು. ಲ್ಯಾಂಪ್ಸ್ ಸಹಕಾರ ಸಂಘದ ವ್ಯವಸ್ಥಾಪಕ ಸೀತಾರಾಮ್ ರೈ, ನ್ಯಾಯಬೆಲೆ ಅಂಗಡಿ ವ್ಯವಸ್ಥಾಪಕ ಶೇಷಪ್ಪ ಮೊದಲಾದವರು ಇದ್ದರು.
ಮಾನಸಿಕ ಸ್ಥೈರ್ಯ ಅಗತ್ಯ
ಕಡೂರು: ಅಂಗವಿಕಲರಿಗೆ ಜನರ ಅನುಕಂಪದ ಕರುಣೆ ಬೇಕಾಗಿಲ್ಲ ಆದರೆ ಅವರಲ್ಲಿ ಮಾನಸಿಕ ಸ್ಥೈರ್ಯ ತುಂಬುವ ಮನಸ್ಸುಗಳ ಅಗತ್ಯವಿದೆ ಎಂದು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಕೆ.ಎ. ಗೋಪಾಲಕೃಷ್ಣ ಹೇಳಿದರು. ಅವರು ಕಡೂರಿನ ಎಂ.ಆರ್.ಎಂ. ರಂಗಮಂದಿರ ಆವರಣದಲ್ಲಿ ತಾಲೂಕು ಆಡಳಿತ ಮತ್ತು ತಾಪಂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಕಡೂರು ಬೀರೂರು ಪುರಸಭೆ ಮತ್ತು ವಿವಿಧ ಸಂಘಟನೆ ಸಂಯುಕ್ತ ಯದಲ್ಲಿ ನಡೆದ ವಿಶ್ವ ವಿಕಲಚೇತರ ದಿನಾಚರಣೆ ಹಾಗು ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು. ವಿಕಲ ಚೇತನರಿಗೆ ಹಲವು ಸೌಲಭ್ಯ ಕಲ್ಪಿಸಿದೆ. ಅವಿವಾಹಿತ ಅಂಗವಿಲಕರಿಗೆ ರು. 50,000 ಸಹಾಯಧನ, ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ವ್ಯವಸ್ಥೆ ವಿಕಲಚೇತನರ ಅಭಿವೃದ್ಧಿಗಾಗಿ ದುಡಿಯುತ್ತಿರುವ ಸ್ವಯಂ ಸೇವಾ ಸಂಸ್ಥೆಗಳಿಗೆ ವಾರ್ಷಿಕ ರು. 8 ಲಕ್ಷ ಸಹಾಯಧವನ್ನು ಸರ್ಕಾರ ನೀಡುತ್ತಿದ್ದು, ಇದು ಸರಿಯಾಗಿ ಸದುಪಯೋಗವಾಗಬೇಕಿದೆ ಎಂದರು.
ಮಾನವ ಸಂಪನ್ಮೂಲ ಬಳಸಿ
ತರೀಕೆರೆ: ಮಾನವ ಸಂಪನ್ಮೂಲ ಸದ್ಬಳಕೆ ಆಗಬೇಕು ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ತಿಳಿಸಿದ್ದಾರೆ. ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಆವರಣದಲ್ಲಿ ಶುಕ್ರವಾರ ಅಗಸ್ತ್ಯ ಅಂತಾರಾಷ್ಟ್ರೀಯ ಪ್ರತಿಷ್ಠಾನ ವಿಜ್ಞಾನ ಮತ್ತು ತಂತ್ರಜ್ಞಾನ ದಾರ್ಶನಿಕ ಸಮೂಹ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಏರ್ಪಡಿಸಿದ್ದ ವಿಜ್ಞಾನ ಮಹಾಮೇಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಮಕ್ಕಳಿಗೆ ವಿಜ್ಞಾನದ ಅರಿವು ಬರಬೇಕು. ಮೂಢನಂಬಿಕೆ ಬಗ್ಗೆ ಜಾಗೃತಿ ಮೂಡಬೇಕು. ಸರ್ಕಾರ ಶಿಕ್ಷಣದ ಅಭಿವೃದ್ಧಿಗೆ, ಪಠ್ಯಪುಸ್ತಕ, ಸಮವಸ್ತ್ರ, ಕ್ಷೀರಭಾಗ್ಯ ಬಿಸಿಯೂಟ ಸೈಕಲ್ ವಿತರಣೆ ಇತ್ಯಾದಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದವರು ಅನೇಕ ಸಾಧನೆಗಳನ್ನು ನಿರ್ವಹಿಸಿದ್ದಾರೆ. ನಮ್ಮ ದೇಶದ ವಿಜ್ಞಾನಿಗಳು ಮಂಗಳಗ್ರಹಕ್ಕೆ ಯಶಸ್ವಿಯಾಗಿ ಉಪಗ್ರಹ ಕಳಿಸುವ ಸಾಹಸ ಮಾಡಿ ಕೀರ್ತಿ ಗಳಿಸಿದ್ದಾರೆ. ಸೌಲಭ್ಯಗಳನ್ನು ಉಪಯೋಗಿಸಿಕೊಂಡು ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆಯಬೇಕು ಎಂದ ತಿಳಿಸಿದರು.
ಕನ್ನಡಕ್ಕೆ ಡಬ್ಬಿಂಗ್ ಅಗತ್ಯವಿಲ್ಲ
ಬೀರೂರು: ಕನ್ನಡ ಚಿತ್ರರಂಗಕ್ಕೆ ಕನ್ನಡ ಸಂಸ್ಕೃತಿಗೆ ತನ್ನದೇ ಇತಿಹಾಸವಿದ್ದು, ಬೇರೆ ಭಾಷೆಯ ಚಿತ್ರಗಳನ್ನು ಕನ್ನಡಕ್ಕೆ ಡಬ್ ಮಾಡಿ ಚಿತ್ರ ರಸಿಕರಿಗೆ ಉಣಬಡಿಸುವ ಸ್ಥಿತಿ ಇನ್ನೂ ಬಂದಿಲ್ಲ ಎಂದು ನಿರ್ದೇಶಕ, ನಟ ಓಂ ಪ್ರಕಾಶ್ ರಾವ್ ತಿಳಿಸಿದರು. ಅವರು ಬೀರೂರಿನಲ್ಲಿ ಅಯ್ಯ 2 ಚಿತ್ರೀಕರಣದ ವೇಳೆ ಪತ್ರಿಕೆಯೊಂದಿಗೆ ಮಾತನಾಡಿದರು.
ಕನ್ನಡದಲ್ಲಿ ಯಾವುದಕ್ಕೂ ಕೊರತೆ ಇಲ್ಲ. ಇಡೀ ಚಿತ್ರರಂಗವೇ ಮದರಾಸಿನ ಮೇಲೆ ಅವಲಂಬಿತವಾರಾಗಿದ್ದ ದಿನಗಳಲ್ಲೇ ಡಬ್ಬಿಂಗ್ ಚಿತ್ರಗಳು ಬರಲಿಲ್ಲ. ಇತಿಹಾಸ ಹೀಗಿರುವಾಗ ಅಗ್ಗದ ಡಬ್ಬಿಂಗ್ ಈಗೇಕೆ ಎಂದವರು ಪ್ರಶ್ನಿಸಿದರು. ಕನ್ನಡ ಚಿತ್ರಗಳ ವೈಫಲ್ಯಕ್ಕೆ ಕಿರುತೆರೆಯ ಧಾರವಾಹಿಗಳು ಕಾರಣವಾಗಿದ್ದು, ಜನ ಮನೆಯಿಂದ ಹೊರಗೆ ಬಂದು ಚಿತ್ರ ನೋಡಲು ಇಷ್ಟಪಡುತ್ತಿಲ್ಲ ಮತ್ತು ಚಿತ್ರಮಂದಿರಗಳೂ ಕೂಡ ಉತ್ತಮ ತಂತ್ರಜ್ಞಾನ ಅಳವಡಿಸಿಕೊಳ್ಳದೇ ಇರುವುದೂ ಕೂಡ ಹಿನ್ನಡೆಯಾಗಿದೆ. ಟಿವಿಗೆ ಮಾರು ಹೋಗಿದು,್ದ ನಾವು ನವರಸಗಳಿಂದ ಕೂಡಿದ ಮತ್ತು ಕುಟುಂಬದವರೆಲ್ಲ ಕುಳಿತು ನೋಡುವ ಚಿತ್ರ ತಯಾರಿಸಿದರೆ ಗೆಲುವು ಸಿಕ್ಕೇ ಸಿಗುತ್ತದೆ ಎಂದು ಅಭಿಪ್ರಾಯಪಟ್ಟರು. ಡಬ್ಬಿಗ್ಗ್ನಿಂದ ಚಿತ್ರರಂಗವನ್ನೇ ನಂಬಿರುವ ಸಾವಿರಾರು ಕುಟುಂಬಗಳು ಬೀದಿಪಾಲಾಗುವ ಆತಂಕವಿದೆ. ನಮ್ಮ ಒಳ ಜಗಳನ್ನು ಮರೆತು ಒಂದೇ ನಾಯಕತ್ವದಡಿ ಎಲ್ಲರೂ ಒಗ್ಗಟ್ಟಾಗಿ ಹೋರಾಡಿದರೆ ಡಬ್ಬಿಂಗ್ ಭೂತ ಹಿಮ್ಮೆಟ್ಟಿಸಲು ಸಾಧ್ಯ ಎಂದರು.
ಗೋವಿಂದಗೌಡರ ಮಾರ್ಗ ಅನುಕರಣೀಯ
ಕೊಪ್ಪ: ಗಾಂಧಿಯುಗ ಮಾಸಿಹೋಗುತ್ತಿರುವ ಸಮಯದಲ್ಲಿ ಗಾಂಧಿ ತತ್ವವನ್ನು ರಾಜಕೀಯ ಜೀವನದಲ್ಲಿ ಬೆಳೆಸಿಕೊಂಡು ಬಂದ ಮಾಜಿ ಶಿಕ್ಷಣ ಸಚಿವ ಎಚ್.ಜಿ. ಗೋವಿಂದಗೌಡರ ಮಾರ್ಗವನ್ನು ಇಂದು ವ್ಯಾಪಾರೀಕರಣ ಅನುಸರಿಸುತ್ತಿರುವ ರಾಜಕಾರಣಿಗಳು ಅನುಸರಿಸಿದರೆ ಭ್ರಷ್ಟಮುಕ್ತ ಸಮಾಜ ನಿರ್ಮಾಣವಾಗುತ್ತದೆ ಎಂದು ಪತ್ರಕರ್ತ ಚಂದ್ರಚೂಡ ಹೇಳಿದರು. ಶನಿವಾರ ಕೊಪ್ಪ ಪಟ್ಟಣ ಸಮೀಪದ ಗೋವಿಂದೇಗೌಡರ ಮಣಿಪುರ ಎಸ್ಟೇಟ್ ಮನೆಯಂಗಳದಲ್ಲಿ ಸಾಹಿತಿ ನಾಗತಿಹಳ್ಳಿ ರಮೇಶ್ ನಿರ್ದೇಶನ ಮತ್ತು ಪರಿಕಲ್ಪನೆ ಪದಪದ ಚರಿತ, ಬೇರುಗಳತ್ತ, ತಿಳಿ, ಸೇರಿದಂತೆ ವಿವಿಧ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಾಹಿತಿ ನಾಗತಿಹಳ್ಳಿ ರಮೇಶ್ ಮಾತನಾಡಿ ಭಾವನೆ ಇಲ್ಲದ ಮನುಷ್ಯ ಅಸ್ಥಿಪಂಜರದಂತೆ. ನನ್ನ ಜೀವನದಲ್ಲಿ ಸತ್ಯ, ಧರ್ಮ, ಸರಳತೆಯ ಪ್ರೇರಕ ಶಕ್ತಿಯಾಗಿ ಕಂಡವರು ಕೆಲವರು. ಅವರಲ್ಲಿ ಎಚ್.ಜಿ. ಗೋವಿಂದೇಗೌಡರು, ಎಚ್.ಜಿ. ರಂಗನಾಥ್ರವರು ಅಗಿದ್ದಾರೆ. ಅವರನ್ನು ಆದರ್ಶವಾಗಿಟ್ಟುಕೊಂಡು ಹಾಡಿನ ಸಾಹಿತ್ಯವನ್ನು ರಚಿಸಿ, ಧ್ವನಿಸುರುಳಿ ರೂಪದಲ್ಲಿ ಹೊರತಂದಿದ್ದೇನೆ ಎಂದರು.
ಒಂದೇ ನಾಣ್ಯದ ಎರಡು ಮುಖ
ನರಸಿಂಹರಾಜಪುರ: ಭಾಷೆ ಮತ್ತು ಸಾಹಿತ್ಯ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ನಿಕಟಪೂರ್ವ ಅಧ್ಯಕ್ಷ ಪಿ.ಕೆ. ಬಸವರಾಜ್ ತಿಳಿಸಿದರು. ಅವರು ಶನಿವಾರ ಮೂಡಬಾಗಿಲಿನ ಜ್ಞಾನ ಗಂಗೋತ್ರಿ ಪ್ರೌಢಶಾಲೆ ಆವರಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ ನಡೆದ ಸುಬ್ಬಣ್ಣ ನಾಡಿಗ್ ದತ್ತಿ ಉಪನ್ಯಾಸದಲ್ಲಿ ನಾಡು ನುಡಿಗೆ ಕವಿಗಳ ಕೊಡುಗೆ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ಕನ್ನಡ ಭಾಷೆಗೆ ಸಾವಿರಾರು ವರ್ಷದ ಇತಿಹಾಸ ಇದ್ದು, ಶಾಸನ ಮತ್ತು ಗ್ರಂಥಗಳನ್ನು ಅಧ್ಯಯನ ಮಾಡಿ ಭಾಷೆಯ ಇತಿಹಾಸವನ್ನು ನಿಖರವಾಗಿ ಪರಿಗಣಿಸುತ್ತಾರೆ. ವಿದ್ಯಾರ್ಥಿಗಳು ಸಾಹಿತ್ಯವನ್ನು ಓದುವ ಅಭ್ಯಾಸ ಮಾಡಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು. ಸಮಾರಂಭ ಉದ್ಘಾಟಸಿದ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಎಚ್.ಜಿ. ಕೃಷ್ಣಮೂರ್ತಿ ಮಾತನಾಡಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ನಾಡು, ನುಡಿ ಬಗ್ಗೆ ಎಲ್ಲಡೆ ಜಾಗೃತಿ ಮೂಡಿಸಲಾಗಿದೆ ಎಂದರು.
ಸಮ್ಮೇಳನ ಮುಂದೂಡಿಕೆ
ಮೂಡಿಗೆರೆ: ತಾಲೂಕಿನ ಕಳಸದಲ್ಲಿ ನಡೆಯಬೇಕಾಗಿದ್ದ ನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮುಂದೂಡಲು ತೀರ್ಮಾನಿಸಲಾಗಿದೆ ಎಂದು ಕಸಪಾ ತಾಲೂಕು ಅಧ್ಯಕ್ಷರಾದ ಎಂ.ಎಸ್. ಅಶೋಕ್ ತಿಳಿಸಿದ್ದಾರೆ.
ಗುರುವಾರ ಕಳಸ ಪಟ್ಟಣದ ರೋಟರಿ ಬಾಲ ಭವನದಲ್ಲಿ ನಡೆದ ಸ್ವಾಗತ ಸಮಿತಿಯ ಸಭೆಯಲ್ಲಿ ಈ ತೀರ್ಮಾನವನ್ನು ಕೈಗೊಳ್ಳಲಾಗಿದೆ.
ಫೆಬ್ರುವರಿ 13,14ರಂದು ಕಳಸದಲ್ಲಿ ಸಾಹಿತ್ಯ ಸಮ್ಮೇಳನವನ್ನು ಅದ್ಧೂರಿಯಾಗಿ ಮಾಡುವ ಬಗ್ಗೆ ತೀರ್ಮಾನಿಸಲಾಗಿತ್ತು. ಅದರಂತೆ ಸಮ್ಮೇಳನಕ್ಕೆ ಬೇಕಾದ ಪೂರ್ವ ತಯಾರಿ ಮಾಡಿಕೊಳ್ಳಲಾಗಿತ್ತು. ಆದರೆ, ಕಳಸ ಹೋಬಳಿಯ ನೂರಾರು ರೈತಾಪಿ ವರ್ಗ ಇನಾಂ ಭೂಮಿ ಸಮಸ್ಯೆಯಿಂದ ತೊಂದರೆಯಲ್ಲಿದ್ದಾರೆ. ಜನವರಿ 28 ರಂದು ನ್ಯಾಯಾಲಯದಲ್ಲಿಯೂ ರೈತರಿಗೆ ಅನುಕೂಲಕರ ವಾತಾವರಣ ಸೃಷ್ಠಿಯಾಗಲಿಲ್ಲ.
ಆದ್ದರಿಂದ ಇನಾಂ ಭೂಮಿ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದೆ. ಈ ಸಂದರ್ಭದಲ್ಲಿ ಸಾಹಿತ್ಯ ಸಮ್ಮೇಳನವನ್ನು ಮಾಡುವುದು ಸರಿಯಲ್ಲ ಆದ್ದರಿಂದ ಸಮ್ಮೇಳನವನ್ನು ಮುಂದೂಡುವ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ ಎಂದರು.
ವಿದ್ಯಾವಂತರು ಸ್ವಾವಲಂಬಿಗಳಾಗಿ
ಕಡೂರು: ವಿದ್ಯಾವಂತರು ಸರ್ಕಾರಿ ಉದ್ಯೋಗಕ್ಕಾಗಿಯೇ ಕಾಯದೇ ಸ್ವಾವಲಂಬಿಗಳಾಗಿ ದುಡಿದು ಸಮಾಜದಲ್ಲಿ ಮೇಲ್ಮುಖಿಯಾಗಿ ಬದುಕಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿವಿಧ ಯೋಜನೆ ಜಾರಿಗೆ ತರುವ ಮೂಲಕ ವಿದ್ಯಾವಂತರ ಜೀವನ ಹಸನುಗೊಳಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿವೆ ಎಂದು ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಮಹೇಶ್ವರಪ್ಪ ಹೇಳಿದರು. ಅವರು ಪಟ್ಟಣದ ಸ.ಪ.ಪೂ. ಕಾಲೇಜು ಸಭಾಂಗಣದಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ಜಿಪಂ ಮತ್ತು ಗ್ರಾಮೀಣ ಕೈಗಾರಿಕೆಗಳ ವಿಭಾಗದ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಉದ್ಯಮ ಶೀಲತಾ ಪ್ರೇರಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ಸರ್ಕಾರದ ಜೊತೆ ಬ್ಯಾಂಕುಗಳು ಸಾಲ ಸೌಲಭ್ಯ ವ್ಯವಸ್ಥೆ ಕಲ್ಪಿಸಿದ್ದು, ಸ್ವ ಉದ್ಯೋಗ ಪ್ರಾರಂಭಿಸುವ ಉದ್ಯಮಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರುತಾಪಂ ಅಧ್ಯಕ್ಷ ಕೆ.ಎಂ. ಬಸವರಾಜಪ್ಪ ಮಾತನಾಡಿ, ವಿದ್ಯಾವಂತರು ಕೇವಲ ಸರ್ಕಾರಿ ನೌಕರಿ ಮೇಲೆಯೇ ಅವಲಂಬಿತರಾಗದೇ ಸ್ವ ಉದ್ಯೋಗ ಪ್ರಾರಂಭಿಸಿ ನಿರುದ್ಯೋಗಿಗಳಿಗೆ ಉದ್ಯೋಗ ನೀಡಬೇಕು ಎಂದರು.