ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

11ನೇ ವಾರ್ಡ್‌ಗೆ ಮೂಲ ಸೌಕರ್ಯ ಒದಗಿಸಿ

Lingaraj Badiger
Updated On : 4 Feb 2014, 12:51 pm

ಕ.ಪ್ರ. ವಾರ್ತೆ, ಚಿಕ್ಕಮಗಳೂರು, ಫೆ.3
ನಗರದ 11ನೇ ವಾರ್ಡ್‌ನ ವ್ಯಾಪ್ತಿಯಲ್ಲಿರುವ ಪಂಪ ನಗರ ಬಡಾವಣೆಯಲ್ಲಿ ರಸ್ತೆ, ಕುಡಿಯುವ ನೀರು, ಚರಂಡಿ ಸೇರಿದಂತೆ ಇತರೆ ಮೂಲ ಸೌಕರ್ಯ ಅಭಿವೃದ್ಧಿಪಡಿಸುವಂತೆ ಒತ್ತಾಯಿಸಿ ಬಡಾವಣೆ ನಿವಾಸಿಗಳು ಶಾಸಕ ಸಿ.ಟಿ. ರವಿ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
ಬಡಾವಣೆಯ ಪ್ರಮುಖ ಮೂರು ರಸ್ತೆಗಳು ಡಾಂಬರ್ ಕಂಡು ಹತ್ತು ವರ್ಷಗಳಾಗಿವೆ. ಇತ್ತೀಚೆಗೆ ಯುಜಿಡಿ ಕಾರ್ಯಕ್ಕೆಂದು ಇದ್ದ ರಸ್ತೆಯನ್ನೂ ಅಗೆದಿರುವ ಕಾರಣ ಕಳೆದ ಮಳೆಗಾಲದಲ್ಲಿ ಬಡಾವಣೆ ಜನರು ನರಕಯಾತನೆ ಅನುಭವಿಸಿದ್ದಾರೆ.
ಮೂರೂ ರಸ್ತೆಗಳು ಕೆಸರುಗದ್ದೆಯಂತಾಗಿ ಶಾಲಾ ಮಕ್ಕಳು, ವಯೋವೃದ್ಧರು ಬಿದ್ದು ಗಾಯಗೊಂಡಿರುವ ನಿದರ್ಶನಗಳಿವೆ. ಈ ವರ್ಷದ ಮಳೆಗಾಲದಲ್ಲಿ ಅದು ಮತ್ತೆ ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು. ಈ ಹಿನ್ನೆಲೆಯಲ್ಲಿ ಕೂಡಲೇ ರಸ್ತೆ ಡಾಂಬರೀಕರಣ ಕಾಮಗಾರಿ ಆರಂಭಿಸಬೇಕು ಎಂದು ಒತ್ತಾಯಿಸಿದ್ದಾರೆ.
ಶಿಥಿಲಾವಸ್ಥೆ: ಬಡಾವಣೆಯ ಚರಂಡಿಗಳು ಸಹ ಹಲವು ವರ್ಷಗಳ ಹಿಂದೆ ನಿರ್ಮಾಣಗೊಂಡಿದ್ದು ಎಲ್ಲವೂ ಶಿಥಿಲಾವಸ್ಥೆಯಲ್ಲಿದೆ. ಇದರಿಂದ ಕೊಳಚೆ ನೀರು ಮುಂದೆ ಹರಿಯದ ಪರಿಣಾಮ ದುರ್ವಾಸನೆ ಬೀರಲಾರಂಭಿಸಿದೆ. ಈ ಬಡಾವಣೆ ತಗ್ಗು ಪ್ರದೇಶದಲ್ಲಿರುವ ಕಾರಣ ಎಂ.ಜಿ. ರಸ್ತೆ ಹಾಗೂ ಮಾರ್ಕೆಟ್ ರಸ್ತೆಯಿಂದ ಹರಿಯುವ ಚರಂಡಿ ನೀರು ಈ ಬಡಾವಣೆಯಲ್ಲಿ ಹಾದು ಹೋಗಿರುವ ದೊಡ್ಡ ಚರಂಡಿಗೆ ಬರುತ್ತದೆ.
ಅದೂ ವ್ಯವಸ್ಥಿತವಾಗಿಲ್ಲದ ಕಾರಣ ನೀರೆಲ್ಲವೂ ಬಡಾವಣೆಯ ರಸ್ತೆಯ ಚರಂಡಿಗಳಿಗೆ ಹರಿಯುತ್ತದೆ. ಮಳೆಗಾಲದಲ್ಲಿ ಹಲವು ಮನೆಗಳಿಗೆ ಕೊಳಚೆ ನೀರು ನುಗ್ಗುತ್ತದೆ. ಇದು ಪ್ರತಿ ವರ್ಷದ ಗೋಳಾದರೂ ಇತ್ತ ಯಾರೊಬ್ಬರೂ ಗಮನ ಹರಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನೀರಿನ ಸಮಸ್ಯೆ: ಬಡಾವಣೆಯಲ್ಲಿ ವರ್ಷಪೂರ್ತಿ ಕುಡಿಯುವ ನೀರಿಗೆ ಸಮಸ್ಯೆ ಇರುತ್ತದೆ. ಸಾಕಷ್ಟು ನೀರು ಲಭ್ಯವಿದ್ದರೂ ಪೂರೈಕೆ ವ್ಯವಸ್ಥೆ ಸರಿಯಿಲ್ಲ. ಈ ಭಾಗದ ನೀರುಗಂಟಿಗಳು ತಮಗಿಷ್ಟಬಂದಂತೆ ವರ್ತಿಸುತ್ತಾರೆ. ಈ ಬಗ್ಗೆ ಪ್ರಶ್ನಿಸಿದರೆ ಉಡಾಫೆ ಉತ್ತರ ನೀಡುತ್ತಾರೆ ಎಂದು ದೂರಲಾಗಿದೆ. ಈ ಬಡಾವಣೆಗೆಂದು ಪ್ರತ್ಯೇಕವಾಗಿ ಮಿನಿ ವಾಟರ್ ಟ್ಯಾಂಕ್ ನಿರ್ಮಿಸಬೇಕು. ಈ ಬೇಡಿಕೆ ಹಲವು ವರ್ಷಗಳದ್ದಾಗಿರುವ ಕಾರಣ ಇತ್ತ ಗಮನಹರಿಸಿ ಬೇಸಿಗೆ ಆರಂಭಕ್ಕೆ ಮುನ್ನ ನೀರಿನ ಟ್ಯಾಂಕ್ ನಿರ್ಮಿಕೊಡಬೇಕು ಎಂದು ಮನವಿ ಮಾಡಿದ್ದಾರೆ.
ನಿವಾಸಿಗಳಿಗೆ ಅನ್ಯಾಯ: ನಗರದ ಎಲ್ಲಾ ಬಡಾವಣೆಗಳಲ್ಲೂ ನಗರೋತ್ಥಾನ ಹಾಗೂ ಕೆಎಂಆರ್‌ಪಿ ಯೋಜನೆಯಡಿ ರಸ್ತೆ, ಚರಂಡಿ, ಕುಡಿಯುವ ನೀರಿನ ಕಾಮಗಾರಿ ನಡೆಯುತ್ತಿದೆ. ಪ್ರತಿದಿನ ಈ ಬಗ್ಗೆ ಪತ್ರಿಕೆಗಳಲ್ಲಿ ಸುದ್ದಿ ಬರುತ್ತಿದೆ. ಆದರೆ, ಪಂಪ ನಗರ ಬಡಾವಣೆಗೆ ಮಾತ್ರ ಯಾವುದೇ ಕಾಮಗಾರಿ ಮಂಜೂರಾಗಿಲ್ಲ ಎಂದು ತಿಳಿದು ಬಂದಿದೆ. ಇದರಿಂದ ಇಲ್ಲಿನ ನಿವಾಸಿಗಳಿಗೆ ಅನ್ಯಾಯವಾಗಿದೆ. ಈ ತಾರತಮ್ಯ ಸರಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕನಿಷ್ಠ ಸೌಲಭ್ಯಗಳಾದ ರಸ್ತೆ, ಕುಡಿಯುವ ನೀರು, ಚರಂಡಿ ವ್ಯವಸ್ಥೆಯನ್ನು ತುರ್ತಾಗಿ ಅಭಿವೃದ್ಧಿ ಪಡಿಸಬೇಕು ಎಂದು ಮನವಿ ಮಾಡಿದ್ದಾರೆ.
ಅಭಿವೃದ್ಧಿಗೆ ಕ್ರಮ: ಮನವಿಗೆ ಪ್ರತಿಕ್ರಿಯಿಸಿರುವ ಶಾಸಕರು, ಬೇಡಿಕೆಗಳ ಬಗ್ಗೆ ಪರಿಶೀಲಿಸಲಾಗುವುದು. ನಿವಾಸಿಗಳ ಬೇಡಿಕೆಯಂತೆ ಮೂಲ ಸೌಕರ್ಯ ಅಭಿವೃದ್ಧಿಗೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement