ಮನೆ, ನೀರಿನ ಕಂದಾಯ ಹೆಚ್ಚಳಕ್ಕೆ ವಿರೋಧ
ನರಸಿಂಹರಾಜಪುರ: ಕಡಹಿನಬೈಲು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಮನೆ ಹಾಗೂ ನೀರಿನ ತೆರಿಗೆ ಹೆಚ್ಚಿಸಿರುವುದಕ್ಕೆ ಗ್ರಾಮಸಭೆಯಲ್ಲಿ ಗ್ರಾಮಸ್ಥರಿಂದ ತೀವ್ರ ವಿರೋಧ ವ್ಯಕ್ತವಾಯಿತು.
ಶೆಟ್ಟಿಕೊಪ್ಪದ ದ್ವಾಕ್ರಾ ಕಟ್ಟಡದಲ್ಲಿ ಸೋಮವಾರ ಕಡಹಿನಬೈಲು ಗ್ರಾಮ ಪಂಚಾಯ್ತಿಯ 2013-14ನೇ ಸಾಲಿನ ಎರಡನೇ ಸುತ್ತಿನ ಗ್ರಾಮ ಸಭೆಯಲ್ಲಿ ವಿಷಯ ಪ್ರಸ್ತಾಪ ಮಾಡಿದ ತಾಲೂಕು ಕೃಷಿಕ ಸಮಾಜದ ಮಾಜಿ ಅಧ್ಯಕ್ಷ ಬಿ.ಕೆ. ಜಾನಕೀರಾಂ, ಗ್ರಾಮ ಪಂಚಾಯ್ತಿಯು ಮನೆ ಮತ್ತು ನೀರಿನ ತೆರಿಗೆಯನ್ನು ಹಾಲಿ ಇದ್ದ ತೆರಿಗೆಯ 4 ರಿಂದ 8 ಪಟ್ಟು ಜಾಸ್ತಿ ಮಾಡಿ ಬಡವರನ್ನು ತೀವ್ರ ಸಂಕಷ್ಟಕ್ಕೆ ದೂಕಿದೆ ಎಂದು ಹೇಳಿದರು.
ಅವೈಜ್ಞಾನಿಕ ಕ್ರಮ: 100 ರುಪಾಯಿ ಮನೆ ಕಂದಾಯ ಕಟ್ಟುತ್ತಿದ್ದವರಿಗೆ ಗರಿಷ್ಠ 400 ರಿಂದ 500ಕ್ಕೆ ಏರಿಸಲಾಗಿದೆ. ಕೆಲವು ಮನೆಗಳಿಗೆ 800ರಿಂದ 900 ವರೆಗೂ ಏರಿಸಲಾಗಿದೆ. ಈ ಕಂದಾಯ ಪರಿಷ್ಕರಣೆ ಅವೈಜ್ಞಾನಿಕವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಡಹಿನಬೈಲು ಗ್ರಾಪಂ ಮಾಜಿ ಅಧ್ಯಕ್ಷ ಎ.ಬಿ. ಮಂಜುನಾಥ್, ಮಾಜಿ ಉಪಾಧ್ಯಕ್ಷ ಪಿ.ಜಿ. ಸತೀಶ್, ಮಾಜಿ ಸದಸ್ಯ ಎಂ. ಮಹೇಶ್, ಗ್ರಾಮದ ಮುಖಂಡ ಎಲ್. ನಾಗರಾಜ್ ಮುಂತಾದವರು ಬೇಕಾ ಬಿಟ್ಟಿಯಾಗಿ ಏರಿಸಿರುವ ತೆರಿಗೆಯನ್ನು ಖಂಡಿಸಿದರು.
ಮತ್ತೊಮ್ಮೆ ಪರಿಷ್ಕರಣೆ ಮಾಡಿ: ಕಂದಾಯ ಪರಿಷ್ಕರಣೆ ಸಹಜವಾದರೂ ಒಂದೇ ಬಾರಿಗೆ 4 ರಿಂದ 10 ಪಟ್ಟು ಹೆಚ್ಚಿಗೆ ಮಾಡಿರುವುದು ಸರಿ ಅಲ್ಲ. ಮತ್ತೊಮ್ಮೆ ಕಂದಾಯ ಪರಿಷ್ಕರಣೆ ಮಾಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕಡಹಿನಬೈಲು ಗ್ರಾಮ ಪಂಚಾಯ್ತಿಯ ಪಿಡಿಒ ರಾಜು ವಿಜಯನ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಗ್ರಾಮ ಪಂಚಾಯ್ತಿಯ ಸಿಬ್ಬಂದಿ ಹೆಚ್ಚಳವಾಗಿದ್ದಾರೆ. ಮೆಸ್ಕಾಂ ಬಿಲ್ ಸಹ ದುಬಾರಿಯಾಗಿದೆ. ಕುಡಿಯುವ ನೀರಿನ ಮೋಟಾರ್ ರಿಪೇರಿ, ಸಿಬ್ಬಂದಿ ವೇತನ, ಸದಸ್ಯರಿಗೆ ನೀಡುವ ಗೌರವ ಧನ ಮುಂತಾದ ವೆಚ್ಚಗಳಿಗೆ ಗ್ರಾಮ ಪಂಚಾಯ್ತಿಯು ತನ್ನ ಸ್ವಂತ ನಿಧಿಯಿಂದ ನೀಡಬೇಕಾಗಿದೆ. ಆದ್ದರಿಂದ ಕಂದಾಯ ಪರಿಷ್ಕರಣೆಗೆ ಮಾಡುವಾಗ ಹುಲ್ಲಿನ ಗುಡಿಸಲು, ಹೆಂಚಿನ ಮನೆ, ಆರ್.ಸಿ.ಸಿ. ಮನೆಗಳಿಗೆ ಕೆಲವು ಮಾನದಂಡ ಅನುಸರಿಸಿ ಕಂದಾಯ ನಿಗದಿ ಮಾಡಿದ್ದು, ಗ್ರಾಮದ ಅಭಿವೃದ್ಧಿಗೆ ಗ್ರಾಮಸ್ಥರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಗ್ರಾಮಸ್ಥರ ಒತ್ತಾಯದಂತೆ ಮತ್ತೊಮ್ಮೆ ಕಂದಾಯ ಪರಿಷ್ಕರಣೆ ಮಾಡಲು ಸಭೆ ನಿರ್ಣಯ ತೆಗೆದುಕೊಂಡು ಪ್ರತಿ ಗ್ರಾಮದ ಇಬ್ಬರು ಗ್ರಾಮಸ್ಥರನ್ನು ಸೇರಿಸಿ ಕಂದಾಯ ಪರಿಷ್ಕರಣೆ ಸಮಿತಿ ರಚಿಸಲು ಸಭೆ ತೀರ್ಮಾನಿಸಿತು.
ಅರಣ್ಯ ಇಲಾಖೆ ವಿರುದ್ಧ ಅಸಮಾಧಾನ: ಅರಣ್ಯ ಇಲಾಖೆಯ ಸಿಬ್ಬಂದಿ ಅರಣ್ಯದಿಂದ ಸೊಪ್ಪು, ಮಣ್ಣು ತರಲು ಅಡ್ಡಿಪಡಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಅರಣ್ಯ ಇಲಾಖೆ ಮೇಲೆ ಅಸಮಾಧಾನ ವ್ಯಕ್ತಪಡಿಸಿದರು.
ಆದರೆ, ಅರಣ್ಯ ಇಲಾಖೆಯ ಅಧಿಕಾರಿಗಳು ಗ್ರಾಮ ಸಭೆಯಲ್ಲಿ ಹಾಜರಿರಲಿಲ್ಲ. ಈ ಸಂದರ್ಭದಲ್ಲಿ ತೀವ್ರ ಚರ್ಚೆ ನಡೆದು ಅರಣ್ಯ ಇಲಾಖೆಯ ಸಿಬ್ಬಂದಿ ಗ್ರಾಮಸ್ಥರಿಗೆ ತೊಂದರೆ ನೀಡಬಾರದು ಎಂದು ಗ್ರಾಮ ಸಭೆ ನಿರ್ಣಯ ತೆಗೆದುಕೊಂಡಿತು.
ಸಭೆಯ ಅಧ್ಯಕ್ಷತೆಯನ್ನು ಕಡಹಿನಬೈಲು ಗ್ರಾಪಂ ಅಧ್ಯಕ್ಷ ಚಂದ್ರಶೇಖರ್ ವಹಿಸಿದ್ದರು. ಸಭೆಯಲ್ಲಿ ಗ್ರಾಪಂ ನೋಡಲ್ ಅಧಿಕಾರಿ ಸೀಮಾ, ಗ್ರಾಪಂ ಉಪಾಧ್ಯಕ್ಷೆ ರಾಗಿಣಿ, ಸದಸ್ಯರಾದ ಮಳಲಿ ಶ್ರೀನಿವಾಸ್, ಎ.ಎಲ್. ಮಹೇಶ್, ಗ್ರೇಸಿ ಬಾಬು, ಶೈಲ ಮಹೇಶ್, ಮೇರಿ, ಅನಿತಾ ನಾಗರಾಜ್, ಕಾರ್ಯದರ್ಶಿ ಸುಮತಿ ಉಪಸ್ಥಿತರಿದ್ದರು.
ಸಮಾಜ ಕಲ್ಯಾಣ ಇಲಾಖೆ, ತಾಪಂ, ಕೃಷಿ ಇಲಾಖೆ, ಜಿಪಂ, ಪಶು ವೈದ್ಯ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆ ಬಗ್ಗೆ ಮಾಹಿತಿ ನೀಡಿದರು.