ಕ್ರೀಡಾಪಟುಗಳು ಸಾಮರಸ್ಯ ಕಾಪಾಡಲಿ
ಕ.ಪ್ರ.ವಾರ್ತೆ, ಬಾಳೆಹೊನ್ನೂರು, ಫೆ. 5
ಕ್ರೀಡಾಪಟುಗಳು ಕ್ರೀಡೆಯಲ್ಲಿ ಸೌಹಾರ್ದದಿಂದ ಪಾಲ್ಗೊಂಡು ಸಾಮರಸ್ಯ ಸಾಧಿಸಬೇಕು ಎಂದು ಕಾಫಿ ಬೆಳೆಗಾರ ಟಿ.ಎಂ. ನಾಗೇಶ್ ಕಲ್ಮಕ್ಕಿ ಹೇಳಿದ್ದಾರೆ.
ಇಲ್ಲಿನ ಕಲಾರಂಗ ಕ್ರೀಡಾಂಗಣದಲ್ಲಿ ಕಾಫಿಲ್ಯಾಂಡ್ ಕ್ರಿಕೆಟ್ ಕ್ಲಬ್ ದಿ. ಟಿ.ಎ. ಮಲ್ಲೇಗೌಡ ಸ್ಮರಣಾರ್ಥ ಬುಧವಾರದಿಂದ ಹಮ್ಮಿಕೊಂಡಿದ್ದ ಕ್ಷೇತ್ರಮಟ್ಟದ ಆಹ್ವಾನಿತ ತಂಡಗಳ ಕ್ರಿಕೆಟ್ ಪಂದ್ಯಾವಳಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸ್ಥಳೀಯ ಕ್ರೀಡಾಂಗಣದ ಸುತ್ತಮುತ್ತ ಶಾಲಾ -ಕಾಲೇಜುಗಳು ಇರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಆಗದಂತೆ ಪಂದ್ಯಾವಳಿ ನಡೆಸಿ ಸಹಕರಿಸಬೇಕು. ಕ್ರೀಡೆಗಳು ಮಾನಸಿಕ, ದೈಹಿಕ ಸ್ಥಿರತೆ ಕಾಪಾಡಲು ಸಹಕಾರಿ ಎಂದರು.
ಜೇಸಿ ಅಧ್ಯಕ್ಷ ಕೆ.ಎಸ್. ಜಗದೀಶ್ ಮಾತನಾಡಿ, ಕ್ರೀಡಾಪಟುಗಳು ಶ್ರಮವಹಿಸಿ ಆಟವಾಡಿ ಗೆಲುವು ಸಾಧಿಸಬೇಕು. ಗ್ರಾಮೀಣ ಪ್ರತಿಭೆಗಳ ಹೊರಹೊಮ್ಮುವಿಕೆಗೆ ಈ ಕ್ರೀಡಾಕೂಟ ಸಹಕಾರಿಯಾಗಿದೆ ಎಂದರು.
ಕಾಫಿಲ್ಯಾಂಡ್ ಕ್ರಿಕೆಟ್ ಕ್ಲಬ್ ಅಧ್ಯಕ್ಷ ಡಾ.ನವೀನ್ ಲಾಯ್ಡ್ ಮಿಸ್ಕಿತ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯಲ್ಲೂ ಪ್ರತಿಭೆಯಿದ್ದು, ಅದನ್ನು ಹೊರಹೊಮ್ಮಿಸುವ ದೃಷ್ಟಿಯಿಂದ ತಮ್ಮ ಕ್ಲಬ್ ವತಿಯಿಂದ ಕ್ಷೇತ್ರಮಟ್ಟದ ಪಂದ್ಯಾವಳಿ ಆಯೋಜಿಸಲಾಗಿದೆ. ಕ್ರೀಡಾಕೂಟದಲ್ಲಿ ಆಟಗಾರರ ನಡುವೆ ಹೊಂದಾಣಿಕೆ ಅಗತ್ಯವಾಗಿ ಇರಬೇಕಾಗಿದೆ. ಪರಸ್ಪರ ಸ್ನೇಹಮಯ ವಾತಾವರಣದಿಂದ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.
ಸಿಎಲ್ಸಿ ಕ್ಲಬ್ನ ಗೌರವಾಧ್ಯಕ್ಷ ಜಂಶೀದ್ ಅಹ್ಮದ್, ಖಜಾಂಚಿ ಸುಧಾಕರ್, ಕಾರ್ಯದರ್ಶಿ ರಿಚರ್ಡ್ ಮಥಾಯಿಸ್, ಗುತ್ತಿಗೆದಾರ ಕೆ.ಪಿ. ವಿಲ್ಸನ್, ಕೆಸಿಸಿ ಕ್ಲಬ್ ಕಾರ್ಯದರ್ಶಿ ಸತೀಶ್ ಅರಳಿಕೊಪ್ಪ, ಬಿ.ಕಣಬೂರು ಗ್ರಾ.ಪಂ. ಸದಸ್ಯ ಇಬ್ರಾಹಿಂ ಶಾಫಿ, ಟಿ.ಟಿ. ಇಸ್ಮಾಯಿಲ್, ತೀರ್ಪುಗಾರ ದಿನೇಶ್ ಶೆಣೈ, ಬಾಬ್ಲಾ, ಸೀಕೆ ನವೀನ್ ಉಪಸ್ಥಿತರಿದ್ದರು.
ಬಾಳೆಹೊನ್ನೂರಿನ ಕಾಫಿಲ್ಯಾಂಡ್ ಕ್ರಿಕೆಟ್ ಕ್ಲಬ್ ಬುಧವಾರ ಆಯೋಜಿಸಿದ್ದ ಕ್ಷೇತ್ರಮಟ್ಟದ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಕಾಫಿ ಬೆಳೆಗಾರ ಟಿ.ಎಂ. ನಾಗೇಶ್ ಕಲ್ಮಕ್ಕಿ ಬ್ಯಾಟಿಂಗ್ ಮಾಡುವ ಮೂಲಕ ಉದ್ಘಾಟಿಸಿದರು.