ಸಾರಿಗೆ ಬಸ್ ಪಲ್ಟಿ: ಹಲವರಿಗೆ ಗಾಯ
ಕಡೂರು: ಮಾರುತಿ ಓಮ್ನಿಗೆ ದಾರಿ ಬಿಡಲು ಸೈಡಿಗೆ ಹೋದ ಕೆಎಸ್ಆರ್ಟಿಸಿ ಬಸ್ಸೊಂದು ಮೂರು ಪಲ್ಟಿಯಾಗಿದ್ದು, ನಿರ್ವಾಹಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಘಟನೆಯಲ್ಲಿ ಹಲವಾರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.
ತಾಲೂಕಿನ ಚಿಕ್ಕದೇವನೂರು ಬಳಿ ಬುಧವಾರ ಮಧ್ಯಾಹ್ನ ಸುಮಾರು 3.30ರ ಸಮಯದಲ್ಲಿ ಘಟನೆ ಸಂಭವಿಸಿದೆ. ಚಿಕ್ಕಮಗಳೂರು ಡಿಪೋಕ್ಕೆ ಸೇರಿದ ಬಸ್ಸು ಅರಸೀಕೆರೆ ತಾಲೂಕು ಬಾಣಾವರದಿಂದ ಮಧ್ಯಾಹ್ನ 2.30ಕ್ಕೆ ಸಖರಾಯಪಟ್ಟಣ ಮಾರ್ಗವಾಗಿ ಚಿಕ್ಕಮಗಳೂರಿಗೆ ತೆರಳುತ್ತಿತ್ತು ಎನ್ನಲಾಗಿದೆ.
ಬಸ್ಸು ಪಲ್ಟಿಯಾಗುತ್ತಿದ್ದಂತೆ ಬಸ್ಸಿನಿಂದ ಹೊರ ಹಾರಲು ಹೋದ ನಿರ್ವಾಹಕ ಮೃತಪಟ್ಟಿದ್ದಾನೆ. ಶಾಲಾ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಬಸ್ಸಿನಲ್ಲಿ ಸುಮಾರು 60ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಬಸ್ಸು ಬಾಣಾವರದಿಂದ ರೇಲ್ವೆ ಗೇಟ್ ಸಮೀಪದಲ್ಲೇ ಇರುವ ಚಿಕ್ಕದೇವನೂರಿನ ಈರಪ್ಪನಹಳ್ಳಿ ಬಳಿ ಬಂದಾಗ ಸಖರಾಯಪಟ್ಟಣದ ಕಡೆಯಿಂದ ಮಾರುತಿ ಓಮ್ನಿ ಎದುರು ಬಂದಿದೆ. ಕಿರಿದಾಗಿದ್ದ ರಸ್ತೆಯ ಎಡಗಡೆಗೆ ಇಳಿಸಿದ ತಕ್ಷಣವೇ ಬಸ್ಸು ಮೂರು ಪಲ್ಟಿಯಾಗಿ ಬಿದ್ದಿದೆ.
ವಿಷಯ ತಿಳಿದ ದೇವನೂರು ಗ್ರಾಪಂ ಅಧ್ಯಕ್ಷ ನಟರಾಜ್, ಎಪಿಎಂಸಿ ಮಾಜಿ ಅಧ್ಯಕ್ಷ ಚಿಕ್ಕದೇವನೂರು ರವಿ, ಗ್ರಾಪಂ ಸದಸ್ಯ ಭದ್ರೇಶ್, ಮುಖಂಡ ಅಶೋಕ್ ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರ ಸಹಾಯದಿಂದ ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದರು.
ಗಾಯಳುಗಳನ್ನು ಶಿವಮೊಗ್ಗ ಆಸ್ಪತ್ರೆಗೆ ದಾಖಲು ಮಾಡಲಾಗುವುದು ಎಂದು ಕಡೂರು ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ್ದ ಜಿಲ್ಲಾ ಆರೋಗ್ಯಾಧಿಕಾರಿ ನೀರಜ್, ತಾಲೂಕು ವೈದ್ಯಾಧಿಕಾರಿ ಡಾ ಎಸ್.ಕೆ. ಪ್ರಭು ತಿಳಿಸಿದರು.
ಡಿವೈಎಸ್ಪಿ ನೀರಜ್, ಬೀರೂರು ವೃತ್ತ ನಿರೀಕ್ಷಕ ವಿಶ್ವನಾಥ್ ಮತ್ತಿತರರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
--
ಗೌರವ ಡಾಕ್ಟರೇಟ್: ಮೋಟಮ್ಮಗೆ ಸನ್ಮಾನ
ಮೂಡಿಗೆರೆ: ಇಲ್ಲಿನ ಆಶ್ರಯ ಕಾಲೇಜಿನಲ್ಲಿ ಮಹಿಳಾ ಸಬಲೀಕರಣದ ವಿಶೇಷ ಸೇವೆಗಾಗಿ ಬಿಜಾಪುರ ಮಹಿಳಾ ವಿವಿ ವಿಧಾನಪರಿಷತ್ ಸದಸ್ಯೆ ಮೋಟಮ್ಮ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿದ ಹಿನ್ನೆಲೆ ಮೂಡಿಗೆರೆ ಆಶ್ರಯ ಸಾಮಾಜಿಕ ಸೇವಾ ಸಂಸ್ಥೆ, ಹೇಮ ಜ್ಯೋತಿ ಎಜುಕೇಷನ್ ಟ್ರಸ್ಟ್ನಿಂದ ಸನ್ಮಾನಿಸಲಾಯಿತು. ಯು.ಎಚ್. ಹೇಮಶೇಖರ್, ಜಯರಾಮ್, ಚಟ್ನಳ್ಳಿ ಮಹೇಶ್, ಜ್ಯೋತಿ ಹೇಮ ಶೇಖರ್, ಮನು, ವಿಶ್ವನಾಥ್, ಹಾಲಪ್ಪಗೌಡ, ಶಿಕ್ಷಕ ಸತ್ಯನಾರಾಯಣ್, ತಾ.ಪಂ. ಸದಸ್ಯರಾದ ಎ.ಜೆ.ಸುಬ್ರಾ ಯಗೌಡ, ಸಬ್ಲೀ ದೇವರಾಜ್, ಜಿಪಂ ಸದಸ್ಯ ಎಂ.ಎಸ್. ಅನಂತು, ಹಳೇ ಕೋಟೆ ರಮೇಶ್ ಸೇರಿದಂತೆ ಅನೇಕ ಗಣ್ಯರು ವಿವಿಧ ಪಕ್ಷಗಳ ಮತ್ತು ಸಂಘಗಳ ಸದಸ್ಯರು ಇದ್ದರು.