ಪೊಲೀಸರ ಸರ್ವಾಧಿಕಾರಿ ಧೋರಣೆ ತನಿಖೆಗೆ ಒತ್ತಾಯ
ತರೀಕೆರೆ: ಭದ್ರಾ ಮೇಲ್ದಂಡೆ ಯೋಜನೆಯ ಎರಡನೇ ಹಂತದ ಕಾಮಗಾರಿ ಪ್ರಾರಂಭವಾಗಿದ್ದು, ಉಪ ವಿಭಾಗಾಧಿಕಾರಿಗಳು, ಪೊಲೀಸ್ ಉಪ ಅಧೀಕ್ಷಕರ ಸರ್ವಾಧಿಕಾರಿ ಧೋರಣೆಯನ್ನು ಸಮಗ್ರ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.
ಈ ಕುರಿತು ಮಾಜಿ ಶಾಸಕ ಬಿ.ಆರ್. ನೀಲಕಂಠಪ್ಪ, ಪತ್ರಕರ್ತ ಎ.ಆರ್.ಕೆ. ಶ್ರೀನಿವಾಸ್ ಮತ್ತು ತಾಲೂಕಿನ ರೈತರು ರಾಜ್ಯ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.
ತಾಲೂಕಿನ ರೈತರು ಕಳೆದ ಐದು ವರ್ಷಗಳಿಂದಲೂ ಅನೇಕ ರೀತಿಯ ಹೋರಾಟ, ಉಪವಾಸ ಸತ್ಯಾಗ್ರಹ ಮಾಡುತ್ತಾ ಬಂದಿರುತ್ತಾರೆ. ಅದರಂತೆ ಡಿಸೆಂಬರ್ 31ರಂದು ತರೀಕೆರೆ ತಾಲೂಕಿಗೆ ಸಮಗ್ರ ನೀರು ಬೇಕೆಂದು ನಡೆಸಿದ ಹೋರಾಟ ಬಂದ್ ಹಿನ್ನೆಲೆಯಲ್ಲಿ ಅಧಿಕಾರಿಗಳು ಅಜ್ಜಂಪುರ ಮತ್ತು ಭದ್ರಾ ಯೋಜನಾ ಸ್ಥಳಕ್ಕೆ ಬಂದು ರೈತರ ಆಗುಹೋಗುಗಳನ್ನು ಕೇಳಿ ಫೆ.8ರ ವರೆಗೆ ಕಾಮಗಾರಿಯನ್ನು ಸಂಪೂರ್ಣ ಸ್ಥಗಿತಗೊಳಿಸುತ್ತೇವೆ ಎಂದು ಭರವಸೆ ನೀಡಿದ್ದರು.
ಆದರೆ ಫೆ.1ರಂದು ಮುನ್ಸೂಚನೆ ಕೊಡದೆ, ಸಮಾಲೋಚನೆ ನಡೆಸದೆ ಸರ್ವಾಧಿಕಾರಿ ಧೋರಣೆಯಿಂದ ಕಾಮಗಾರಿಯನ್ನು ಪ್ರಾರಂಭಿಸಿದ್ದಾರೆ. ಹಿಂದಿನ ಮಾತಿನಂತೆ ಕಾಮಗಾರಿಯನ್ನು ನಿಲ್ಲಿಸಬೇಕೆಂದು ಶಾಂತ ರೀತಿಯಿಂದ ಮನವಿ ಮಾಡಿದರು. ಉಪ ವಿಭಾಗಾಧಿಕಾರಿಯವರು ಮಹಿಳೆಯರಿಗೆ ಗದರಿಸುವುದು ಹಾಗೂ ಸ್ವೇಚ್ಛಾ ರೀತಿಯಲ್ಲಿ ಮಾತನಾಡುವುದು ಇವರ ವರ್ತನೆಯಾಗಿತ್ತು. ಫೆ.1ರಂದು ನೂರಾರು ರೈತ ಮಹಿಳೆಯರಲ್ಲಿ ಕೇವಲ 15 ಜನರನ್ನು ಬಂಧಿಸಿದ್ದು, ನ್ಯಾಯಾಲಯದಲ್ಲಿ ಬಿಡುಗಡೆಗೆ ಮನವಿ ಮಾಡಿಕೊಳ್ಳಲು ಅವಕಾಶ ಮಾಡದಂತೆ ವರ್ತಿಸಿರುತ್ತಾರೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಪೊಲೀಸ್ ಉಪ ಅಧೀಕ್ಷಕರು ಸರ್ವಾಧಿಕಾರಿ ಧೋರಣೆಯಂತೆ ಕಾರ್ಯ ನಿರ್ವಹಿಸುತ್ತಿದ್ದು, ರೈತರಿಗೆ ತೊಂದರೆ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಅಧಿಕಾರಿಗಳನ್ನು ರಜದ ಮೇಲೆ ಹೋಗಲು ಆಜ್ಞೆ ಮಾಡಿ ಸಂಪೂರ್ಣವಾಗಿ ತನಿಖೆ ಮಾಡಬೇಕಾಗಿ ಆಗ್ರಹಿಸಲಾಗಿದೆ ಎಂದು ಹೇಳಿದ್ದಾರೆ.
--