ಶುದ್ಧ ಕಾಯಕದಿಂದ ಅಗಣಿತ ತೃಪ್ತಿ
ತರೀಕೆರೆ: ಶುದ್ಧ ಕಾಯಕದಿಂದ ಅಗಣಿತ ತೃಪ್ತಿ ದೊರೆಯುತ್ತದೆ ಎಂದು ಶಿವಮೊಗ್ಗ ಸಹ್ಯಾದ್ರಿ ಕಾಲೇಜು ಉಪನ್ಯಾಸಕ ಡಾ.ಹಾ.ಮ. ನಾಗಾರ್ಜುನ ತಿಳಿಸಿದ್ದಾರೆ.
ಅವರು ಗುರುವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಎಸ್ಜೆ.ಎಂ. ಪ್ರಥಮ ದರ್ಜೆ ಕಾಲೇಜು ವತಿಯಿಂದ ಕಾಲೇಜು ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ದತ್ತಿ ಉಪನ್ಯಾಸ ಹಾಗೂ ಜಾನಪದ ಗೀತ ಗಾಯನ ಕಾರ್ಯಕ್ರಮದಲ್ಲಿ ರುದ್ರಯ್ಯ ಮತ್ತು ಪಾರ್ವತಮ್ಮ ದತ್ತಿ ಮತ್ತು ಕಲ್ಲೇನಹಳ್ಳಿ ಬಸಮ್ಮ ಪಟೇಲ್ ರಂಗಮ್ಮ ದತ್ತಿ ಉಪನ್ಯಾಸದಲ್ಲಿ ಶರಣರು ಕಂಡಕೊಂಡ ಕಾಯಕದ ಮಹತ್ವ ಕುರಿತು ಉಪನ್ಯಾಸ ಮಾಡುತ್ತಿದ್ದರು.
ಕಾಯಕವೇ ಪೂಜೆ: ಕಾಯಕ ದೇಹಕ್ಕೆ ಸಂಬಂಧಿಸಿದ್ದು, ಕಾಯಕಕ್ಕೆ ಮಾನಸಿಕ ದೃಢತೆ ಅಗತ್ಯ. ಸೃಷ್ಟಿಯ ವಿವಿಧೋದ್ದೇಶ ಮೂಲವೇ ಕಾಯಕವಾಗಿದೆ. ನುಲಿಯ ಚಂದಯ್ಯ, ದೋಹರ ಕಕ್ಕಯ್ಯ ಇತ್ಯಾದಿ 900 ಬಸವಾದಿ ಪ್ರಮುಖರ ಅನನ್ಯತೆಯೇ ಕಾಯಕವಾಗಿದೆ. ಮನಸ್ಸನ್ನು ಕೇಂದ್ರೀಕರಿಸುವ ಕಾಯಕವೇ ಪೂಜೆ, ಮಕ್ಕಳ ಕಾಯಕವನ್ನು ಟೀವಿ ದಿಕ್ಕು ತಪ್ಪಿಸುತ್ತಿದೆ ಎಂದರು.
ಕಾಯಕಕ್ಕೆ ಮೂಲವೇ ಜನಪದ, ಮೌನ ಮಾತಿಗಿಂತ ಪ್ರಖರತೆ ಹೊಂದಿರುತ್ತದೆ. ಧ್ಯಾನ ವಜ್ರವಿದ್ದ ಹಾಗೆ. ಚಿತ್ತ ಶುದ್ಧಿ ಇದ್ದರೆ ಕಾಯಕಕ್ಕೆ ಸಾರ್ವತ್ರಿಕ ಮೌಲ್ಯ ದೊರೆಯುತ್ತದೆ ಎಂದು ತಿಳಿಸಿದರು.
ಪ್ರಾಚಾರ್ಯ ಬಿ.ಈ. ಕುಮಾರಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜಾನಪದ ಸಾಹಿತ್ಯವನ್ನು ನಾಡಿನ ಉದ್ದಗಲಕ್ಕೆ ಬಿತ್ತಿದ ಕೀರ್ತಿ ಜಾನಪದ ಸಾಹಿತ್ಯ ರತ್ನ ಕೆ.ಆರ್. ಲಿಂಗಪ್ಪನವರಿಗೆ ಸಲ್ಲುತ್ತದೆ. ಜೀವಂತ ಜೀವನಾನುಭವವೇ ಜನಪದ, ಕಾಯಕದಿಂದ ಬರುವ ಅನುಭವವೇ ಜಾನಪದ ನುಡಿಯಾಗಿದೆ, ಜಾನಪದವನ್ನು ಉಳಿಸಿ ಬೆಳೆಸಬೇಕಾಗಿದೆ ಎಂದು ತಿಳಿಸಿದರು.
ಶತಮಾನೋತ್ಸವ: ತಾಲೂಕು ಕಸಾಪ ಅಧ್ಯಕ್ಷ ಜಿ. ಸುಬ್ರಹ್ಮಣ್ಯ ಸಮಾರಂಭದ ಅಧ್ಯಕ್ಷತೆ ವಹಿಸಿ, ಕನ್ನಡಿಗರ ಏಕೈಕ ಪ್ರಾತಿನಿಧ್ಯ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತು ಶತಮಾನೋತ್ಸವವನ್ನು ಅಚರಿಸಿಕೊಳ್ಳುತ್ತಿದೆ. ಹಿರಿಯರ ಹೆಸರಿನಲ್ಲಿ ಭಾಷೆ ಸಾಹಿತ್ಯ ಇತಿಹಾಸ ಇತ್ಯಾದಿ ವಿಷಯಗಳನ್ನು ಕುರಿತು ನಿರಂತರವಾಗಿ ದತ್ತಿ ಉಪನ್ಯಾಸಗಳನ್ನು ನಡೆಸಲಾಗುತ್ತಿದೆ ಇಂತಹ ಕಾರ್ಯಕ್ರಮಗಳಿಂದ ವಿವಿಧ ರೀತಿಯಲ್ಲಿ ಉಪಯೋಗವನ್ನು ಪಡೆದುಕೊಳ್ಳಬಹುದಾಗಿದೆ, ಹೆಚ್ಚು ಹೆಚ್ಚು ದತ್ತಿ ಉಪನ್ಯಾಸಗಳನ್ನು ನೀಡಿ ಪರಿಷತ್ತಿನ ಬೆಳವಣಿಗೆಗೆ ಎಲ್ಲರೂ ಸಹಕರಿಸಬೇಕೆಂದು ಮನವಿ ಮಾಡಿದರು.
ದತ್ತಿ ದಾನಿ ಕೆ.ಎಲ್ ಲಿಂಗರಾಜು, ಜಿಲ್ಲಾ ಕಸಾಪ ಪ್ರತಿನಿಧಿ, ಕನ್ನಡಶ್ರೀ ಬಿ.ಎಸ್. ಭಗವಾನ್ ಮಾತನಾಡಿದರು.
ಗೌ.ರು. ಓಂಕಾರಯ್ಯ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್. ಸುರೇಶ್ ಚಂದ್ರ, ಶೃತಿ ಮತ್ತಿತರರು ಮಾತನಾಡಿದರು. ಆಕಾಶವಾಣಿ ಕಲಾವಿದ ಮುಗುಳಿ ಲಕ್ಷ್ಮೀದೇವಮ್ಮ, ಬಿ.ಎಂ. ಶಂಕರಪ್ಪ, ವಿನೋದಾ ಅವರಿಂದ ಜಾನಪದ ಗೀತ ಗಾಯನ ಏರ್ಪಡಿಸಲಾಗಿತ್ತು. ಪ್ರೊ. ಆರ್.ವಿ. ಹೆಗಡಾಳ್, ಪ್ರೊ. ಬಸವರಾಜಪ್ಪ, ಉಪನ್ಯಾಸಕರು, ತಾಲೂಕು ಗಮಕ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸಿದ್ದಾಮಪ್ಪ, ವಿನುತಾ ಇದ್ದರು.