ಓಟ್ ಬ್ಯಾಂಕ್ಗೆ ಅಲ್ಪಸಂಖ್ಯಾತರ ಬಳಕೆ: ಸೈಯದ್ ಆರೋಪ
ಚಿಕ್ಕಮಗಳೂರು: ಕಳೆದ 5 ದಶಕಗಳಿಂದ ರಾಜ್ಯ ಮತ್ತು ದೇಶವಾಳಿದ ಕಾಂಗ್ರೆಸ್ ನಾಯಕರು ಹಿಂದುಳಿದವರು ಮತ್ತು ಅಲ್ಪಸಂಖ್ಯಾತರನ್ನು ಕೇವಲ ಓಟ್ ಬ್ಯಾಂಕನ್ನಾಗಿ ಉಪಯೋಗಿಸಿಕೊಂಡಿದ್ದಾರೆಯೇ ಹೊರತು ರಕ್ಷಣೆ ಮಾಡುವಲ್ಲಿ ವಿಫಲರಾಗಿದ್ದಾರೆ ಎಂದು ಜೆಡಿಎಸ್ ಅಲ್ಪಸಂಖ್ಯಾತ ವಿಭಾಗದ ರಾಜ್ಯಾಧ್ಯಕ್ಷ ಸೈಯದ್ ಮೊಹಿದ್ ಅಲ್ತಾಫ್ ಆರೋಪಿಸಿದ್ದಾರೆ.
ನಗರದ ಜೆಡಿಎಸ್ ಕಚೇರಿಯಲ್ಲಿ ಗುರುವಾರ ನಡೆದ ಜಿಲ್ಲಾ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರ ರಕ್ಷಣೆ ಜೆಡಿಎಸ್ನಿಂದ ಮಾತ್ರ ಸಾಧ್ಯ. ಇದಕ್ಕೆ ಆಲ್ದೂರು ಧ್ವಜ ವಿವಾದ ಮತ್ತು ದರ್ಗಾ ಅಪವಿತ್ರ ಪ್ರಕರಣವೇ ಸಾಕ್ಷಿಯಾಗಿದೆ ಎಂದರು.
ಜೆಡಿಎಸ್ ಎಂದಿಗೂ ನಿಮ್ಮೊಂದಿಗಿರುತ್ತದೆ. ಆದರೆ, ನೀವು ಒಗ್ಗಟ್ಟಾಗಿ ನಮ್ಮ ಕೈ ಬಲಪಡಿಸಬೇಕು. ಜಿಲ್ಲೆಯ ಇಬ್ಬರು ಜೆಡಿಎಸ್ ಶಾಸಕರು ಬಡವರ ಮತ್ತು ಅಲ್ಪಸಂಖ್ಯಾತರ ಜೊತೆಗಿದ್ದಾರೆ. ದೇವೇಗೌಡರ ಆಶೀರ್ವಾದದಿಂದ ಕುಮಾರಸ್ವಾಮಿಯವರ ಸಹಕಾರದಿಂದ ಪಕ್ಷ ಸದೃಢವಾಗಿದ್ದು, ಜನರು ಪಕ್ಷದ ಮೇಲೆ ಇಟ್ಟಿರುವ ನಂಬಿಕೆ ಉಳಿಸಿಕೊಂಡು ವಿಶ್ವಾಸದಿಂದ ನಡೆಯಬೇಂಕು ಎಂದರು.
ಶಾಸಕ ಬಿ.ಬಿ. ನಿಂಗಯ್ಯ ಮಾತನಾಡಿ, ಕಳೆದ 10 ವರ್ಷದಿಂದ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ಸಾಧನೆ ಶೂನ್ಯ. ಹಗರಣಗಳಲ್ಲೇ ತುಂಬಿ ತುಳುಕುತ್ತಿರುವ ಕಾಂಗ್ರೆಸ್ ನಾಯಕರು ಸ್ವಾತಂತ್ರ್ಯ ಬಂದಾಗಿನಿಂದಲೂ ಅಲ್ಪಸಂಖ್ಯಾತರು, ದಲಿತರು, ಹಿಂದುಳಿದವರನ್ನು ಹಾದಿ ತಪ್ಪಿಸಿ ದೇಶವಾಳುತ್ತಿದ್ದಾರೆ. ವಿದ್ಯಾವಂತರು ವಿಚಾರವಂತರನ್ನು ನಂಬಿಸಿ ಮೋಸ ಮಾಡಿದ್ದಾರೆ ಎಂದರು.