ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಕಾಂಗ್ರೆಸ್ ಸರ್ಕಾರ, ಸಂಸದರಿಂದ ತಪ್ಪು ಮಾಹಿತಿ

Vishwanath S
Updated On : 8 Feb 2014, 1:29 am

ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಫೆ.7
ಅರಣ್ಯ, ಕಂದಾಯ ಭೂ ಒತ್ತುವರಿ ತೆರವು ಹಾಗೂ ಅಡಕೆ ಬೆಳೆ ನಿಷೇಧಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್, ಈ ಕ್ಷೇತ್ರದ ಸಂಸದರು ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಶಾಸಕ ಸಿ.ಟಿ.ರವಿ ಆರೋಪಿಸಿದ್ದಾರೆ.
ಒತ್ತುವರಿ ಆಗಿರುವ ಕಂದಾಯ ಭೂಮಿ ತೆರವಿಗೆ ರಾಜ್ಯ ಸರ್ಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ. ಅತ್ತ ಅಡಕೆ ವಿಷಕಾರಿಕ ವಸ್ತು ಎಂದು ಕೇಂದ್ರ ಸರ್ಕಾರದ ಕಾನೂನು ಸಲಹೆಗಾರರ ಮೂಲಕ ಸುಪ್ರೀಂಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದ್ದಾರೆ. ಆದರೆ, ಇವೆಲ್ಲವೂ ಸುಳ್ಳು ಎಂದು ದಾರಿ ತಪ್ಪಿಸುವ ಹೇಳಿಕೆಗಳನ್ನು ಕಾಂಗ್ರೆಸ್ ಹಾಗೂ ಸಂಸದರು ನೀಡುತ್ತಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ತಿಳಿಸಿದರು.
ಕುಟಿಲ ನೀತಿ:  ಆಡಳಿತ ವೈಫಲ್ಯತೆ ಮತ್ತು ಭ್ರಷ್ಟಚಾರದ ವಿಷಯ ಕುರಿತು ಚರ್ಚೆ ಆಗಬಾರದೆಂಬ ಉದ್ದೇಶದಿಂದ ಕಾಂಗ್ರೆಸ್ ಪಕ್ಷ ವಿವಾದಸ್ಪದ ಸಂಗತಿಗಳನ್ನು ಹುಟ್ಟು ಹಾಕುತ್ತಿದೆ. ಕಲ್ಲಿದಲ್ಲು, ರೇಲ್ವೆ ಹಗರಣ, ಆಂತರಿಕ ಸುರಕ್ಷತೆಯಲ್ಲಿ ರಾಜಿ ಮಾಡಿಕೊಂಡಿರುವುದು, ಬೆಲೆ ಏರಿಕೆ, ರುಪಾಯಿ ಮೌಲ್ಯ ಕುಸಿತ, ನಿರುದ್ಯೋಗ ಸಮಸ್ಯೆಗಳ ಬಗ್ಗೆ ಮುಂದಿನ ಲೋಕಸಭಾ ಚುನಾವಣೆಯ ಅಜೆಂಡವಾಗಬೇಕು. ಆ ಮೂಲಕ ಜನಾಭಿಪ್ರಾಯ ರೂಪುಗೊಳ್ಳಬೇಕು. ಈ ಚರ್ಚೆಗೆ ಬಂದರೆ ಅಪರಾಧಿ ಸ್ಥಾನದಲ್ಲಿ ನಿಲ್ಲಬೇಕಾಗುತ್ತದೆ ಎಂಬ ಉದ್ದೇಶದಿಂದ ವಿವಾದಿತ ವಿಷಯಗಳ ಕುರಿತು ಪ್ರಸ್ತಾಪಿಸುತ್ತಿದೆ. ಇದೊಂದು ಕುಟಿಲ ನೀತಿ ಎಂದರು.
ಕಾಂಗ್ರೆಸ್ ಪಕ್ಷ ಒಳ್ಳೆಯ ಕೆಲಸ ಮಾಡಿದ್ದರೆ ಜಾಹಿರಾತಿಗೆ ಕೋಟ್ಯಂತರ ರುಪಾಯಿ ಖರ್ಚು ಮಾಡುವ ದುಸ್ಥಿತಿ ಬರುತ್ತಿರಲಿಲ್ಲ. ತನ್ನ ಹುಳುಕು ಜಾಹಿರಾತುಗಳ ಮೂಲಕ ಮುಚ್ಚಿಕೊಳ್ಳಬಹುದೆಂಬ ಭ್ರಮೆ ಕಾಂಗ್ರೆಸ್ ಪಕ್ಷಕ್ಕೆ ಬಂದಿದೆ. ಚುನಾವಣಾ ಪೂರ್ವಸಮೀಕ್ಷೆ ಪ್ರಕಾರ ಕಾಂಗ್ರೆಸ್ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಎರಡಂಕಿ ಸ್ಥಾನಕ್ಕೆ ಕುಸಿಯಲಿದೆ ಎಂದರು.
ಅರಣ್ಯ-ನದಿ ಮೂಲ ರಕ್ಷಿಸಿ: ಕಸ್ತೂರಿ ರಂಗನ್ ವರದಿ ಹಾಗೂ ಬಫರ್ ಝೋನ್ ಮಲೆನಾಡಿನ ಜನರಲ್ಲಿ ಆತಂಕ ಮೂಡಿಸಿದೆ. ಇದೊಂದು ಅವೈಜ್ಞಾನಿಕ ವರದಿ, ಇದನ್ನು ಮಾರ್ಪಡು ಮಾಡಬೇಕು. ಪಶ್ಚಿಮಘಟ್ಟ ಪ್ರದೇಶದ ಗಡಿಯನ್ನು ಗುರುತು ಮಾಡಬೇಕು. ಈಗ ಉಳಿದಿರುವ ಅರಣ್ಯ ಮತ್ತು ನದಿ ಮೂಲವನ್ನು ಮೊದಲು ರಕ್ಷಿಸಬೇಕು ಎಂದು ಆಗ್ರಹಿಸಿದರು.
ಖುಲ್ಲಾಗೊಳಿಸಬೇಕು:  ರಾಜ್ಯದಲ್ಲಿ ಒತ್ತುವರಿ ಆಗಿರುವ ಕಂದಾಯ ಭೂಮಿ ತೆರವುಗೊಳಿಸುವುದಾಗಿ ರಾಜ್ಯದ ಅಡ್ವೋಕೇಟ್ ಜನರಲ್ ಅವರು ನ್ಯಾಯಾಲಯಕ್ಕೆ ಬದ್ಧತೆಯ ಹೇಳಿಕೆ ನೀಡಿದ್ದಾರೆ. ಈ ಸಂಬಂಧ ಅವರು ಕಂದಾಯ, ಅರಣ್ಯ ಇಲಾಖೆ ಹಾಗೂ ಅಭಿವೃದ್ಧಿ ಪ್ರಾಧಿಕಾರದ ಸಭೆ ನಡೆಸಿ ಕ್ರಿಯಾ ಯೋಜನೆ ಸಿದ್ಧಪಡಿಸಿದ್ದಾರೆ. ಅಕ್ರಮ ಸಕ್ರಮಗೊಳಿಸಲು ಫಾರಂ ನಂ.50 ಹಾಗೂ 53ರಲ್ಲಿ ಅರ್ಜಿ ಸಲ್ಲಿಸಿರುವ ಪ್ರಕರಣಗಳು, ನ್ಯಾಯಾಲಯದಲ್ಲಿ ಪ್ರಕರಣಗಳ ಅರ್ಜಿಗಳನ್ನು ಹೊರತುಪಡಿಸಿ ಇನ್ನುಳಿದಂತೆ 4,54,704 ಎಕರೆ ಜಮೀನು ತೆರವುಗೊಳಿಸಲು ಸರ್ಕಾರ ಒಪ್ಪಿಕೊಂಡಿದೆ. ಅದರಂತೆ ಚಿಕ್ಕಮಗಳೂರು ಜಿಲ್ಲೆಯಲ್ಲಿ 63,677 ಎಕರೆ ಒತ್ತುವರಿ ಖುಲ್ಲಾಗೊಳಿಸಬೇಕಾಗಿದೆ ಎಂದರು.
ಪ್ರತಿ ನೀಡಲಿ:  ಒತ್ತುವರಿ ತೆರವಿಗೆ ಬದ್ಧತೆಯ ಹೇಳಿಕೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಪ್ರಮಾಣಪತ್ರ ಸಲ್ಲಿಸಿದ್ದೆಯಾದರೆ, ಇನಾಂ ಭೂಮಿಯ ವಿವಾದದಂತೆ ಕಂದಾಯ ಭೂಮಿ ಒತ್ತುವರಿ ತೆರವು ಪ್ರಕರಣ ಜಟಿಲವಾಗಲಿದೆ. ಆದುದರಿಂದ ಸರ್ಕಾರ ಈ ಪ್ರಯತ್ನಕ್ಕೆ ಮುಂದಾಗಬಾರದು ಎಂದ ಸಿ.ಟಿ. ರವಿ, ಕಂದಾಯ ಭೂಮಿ ತೆರವಿಗೆ ಸಂಬಂಧಿಸಿದಂತೆ ಹಿಂದಿನ ಬಿಜೆಪಿ ಸರ್ಕಾರ ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಿದೆ ಎಂದು ಸಂಸದ ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ. ಹಾಗಿದ್ದರೆ ಅವರು ಪ್ರಮಾಣಪತ್ರದ ಪ್ರತಿಯನ್ನು ನೀಡಲಿ ಎಂದು ಹೇಳಿದರು.
ಅಡಕೆಯಲ್ಲಿ ವಿಷಕಾರಿ ವಸ್ತುಗಳಿವೆ ಎಂದು ಸುಪ್ರೀಂಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಲಾಗಿದೆ ಎಂದು ಕೇಂದ್ರದ ಅಟಾರ್ನಿ ಜನರಲ್ ಹೇಳಿ ನೀಡಿದ್ದಾರೆ. ಹೀಗಿದ್ದರೂ  ಕೂಡ ರಾಜ್ಯ ಸರ್ಕಾರ ಪ್ರಮಾಣಪತ್ರ ಸಲ್ಲಿಸಿಲ್ಲ ಎಂದು ಸಮರ್ಥನೆ ನೀಡುತ್ತಿದೆ. ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ಪ್ರಮಾಣಪತ್ರವನ್ನು ಕೂಡಲೇ ವಾಪಸ್ ಪಡೆಯಬೇಕು ಎಂದು ತಿಳಿಸಿದರು. ನಗರ ಬಿಜೆಪಿ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ವಕ್ತಾರ ಪುಷ್ಪರಾಜ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement