ಜಿಪಂ ಅಧ್ಯಕ್ಷರಾಗಿ ಪದ್ಮಾ ಅವಿರೋಧ ಆಯ್ಕೆ
ಚಿಕ್ಕಮಗಳೂರು: ಚಿಕ್ಕಮಗಳೂರು ಜಿಪಂ ನೂತನ ಅಧ್ಯಕ್ಷರಾಗಿ ಟಿ.ಸಿ. ಪದ್ಮಾ ಚಂದ್ರಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಜಿಪಂ ಸಭಾಂಗಣದಲ್ಲಿ ಶುಕ್ರವಾರ ನೂತನ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯಿತು.
ಪದ್ಮಾ ಚಂದ್ರಪ್ಪ ಒಬ್ಬರೇ ನಾಮಪತ್ರ ಸಲ್ಲಿಸಿದ್ದು, ಮಧ್ಯಾಹ್ನ 3 ಗಂಟೆಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿದ್ದ ಮೈಸೂರು ವಿಭಾಗೀಯ ಆಯುಕ್ತೆ ಎಂ.ವಿ. ಜಯಂತಿ ಅವರು ನೂತನ ಅಧ್ಯಕ್ಷರ ಆಯ್ಕೆಯನ್ನು ಘೋಷಣೆ ಮಾಡಿದರು. ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕರುಣಾಕರ್ ಉಪಸ್ಥಿತರಿದ್ದರು.
ಜಿಪಂ ಅಧ್ಯಕ್ಷರಾಗಿದ್ದ ರೇಖಾ ಹುಲಿಯಪ್ಪಗೌಡ ಬಿಜೆಪಿಯಲ್ಲಿ ಮಾಡಿಕೊಂಡಿದ್ದ ಒಳ ಒಪ್ಪಂದದ ಮೇರೆಗೆ ಸುಮಾರು ಒಂದೂವರೆ ವರ್ಷ ಕಾಲ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿ ಇತ್ತೀಚೆಗೆ ರಾಜಿನಾಮೆ ಸಲ್ಲಿಸಿದ್ದರು.
ಬಿಜೆಪಿ ಬಹುಮತ: ಜಿಪಂನಲ್ಲಿ ಬಿಜೆಪಿ ಬಹುಮತ ಹೊಂದಿದ್ದರಿಂದ ಅಧ್ಯಕ್ಷರ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಸಾಹಸದ ಕೆಲಸಕ್ಕೆ ಕಾಂಗ್ರೆಸ್ ಹಾಗೂ ಜೆಡಿಎಸ್ ಕೈ ಹಾಕಲಿಲ್ಲ.
ನಂತರ ನೂತನ ಅಧ್ಯಕ್ಷೆ ಪದ್ಮ ಚಂದ್ರಪ್ಪ ಅವರಿಗೆ ಶಾಸಕ ಸಿ.ಟಿ. ರವಿ, ಮಾಜಿ ಶಾಸಕ ಡಾ. ವೈ.ಸಿ. ವಿಶ್ವನಾಥ್, ಜಿಪಂ ಮಾಜಿ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಹಾಗೂ ಬಿಜೆಪಿ ಪಕ್ಷದ ಜಿಪಂ ಸದಸ್ಯರು ಅಭಿನಂದನೆ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಪದ್ಮಾ ಚಂದ್ರಪ್ಪ, ಮುಂದಿನ ತಮ್ಮ ಅಧಿಕಾರದ ಅಲ್ಪಾವಧಿಯಲ್ಲಿ ಜಿಲ್ಲೆಯ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಮೂಲ ಸೌಲಭ್ಯಗಳಾದ ಕುಡಿಯುವ ನೀರು, ವಿದ್ಯುತ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು. ಉತ್ತಮ, ದಕ್ಷ, ಭ್ರಷ್ಟಚಾರ ರಹಿತ ಆಡಳಿತ ನೀಡುವುದಾಗಿ ಹೇಳಿದರು.