ನೀರಿನ ಸಮಸ್ಯೆ ಬಾರದಂತೆ ಎಚ್ಚರ ವಹಿಸಿ
ಕ.ಪ್ರ.ವಾರ್ತೆ ತರೀಕೆರೆ ಫೆ.7
ಬೇಸಿಗೆ ಸಮೀಪಿಸುತ್ತಿರುವುದರಿಂದ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಬಾರದ ಹಾಗೆ ಸಂಬಂಧಿಸಿದ ಅಧಿಕಾರಿಗಳು ನೋಡಿಕೊಳ್ಳಬೇಕೆಂದು ತಾ.ಪಂ. ಅಧ್ಯಕ್ಷೆ ಶಕುಂತಲ ನಾಗರಾಜ್ ಸೂಚಿಸಿದರು.
ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆಯ ಮಾಸಿಕ ಕೆಡಿಪಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ಇಲಾಖೆ ಮತ್ತು ಮೆಸ್ಕಾಂ ಅಧಿಕಾರಿಗಳು ಕುಡಿಯುವ ನೀರು ಸರಬರಾಜು ವಿಷಯದಲ್ಲಿ ಹೆಚ್ಚು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವ ಪ್ರದೇಶಗಳನ್ನು ಕೂಡಲೇ ಗುರುತಿಸಿ ಈ ಬಗ್ಗೆ ಜಿಲ್ಲಾಧಿಕಾರಿಗೆ ಸಮಗ್ರ ವರದಿ ನೀಡಬೇಕು ಎಂದರು.
ತಾಲೂಕಿನ ಬೇಗೂರು, ಗುಡ್ಡದಹಳ್ಳಿ, ಮಾಕನಹಳ್ಳಿ ಮಿನಿ ವಾಟರ್ ಸಪ್ಲೈ ಯೋಜನೆಯನ್ನು ಕೂಡಲೇ ನಿರ್ವಹಿಸಬೇಕು, ಚೀರನಹಳ್ಳಿಯಲ್ಲೂ ನೀರಿನ ಸಮಸ್ಯೆ ಇದೆ. ನೀರಿನ ಸಂಪನ್ಮೂಲ ದೊರಕುವ ಜಾಗದಲ್ಲೇ ಬೋರ್ ಕೊರೆಸಿ ಅಲ್ಲಿಂದ ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಮಾಡಬೇಕು ಎಂದು ಅಧಿಕಾರಿಗಳಿಗೆ ತಾ.ಪಂ.ಅಧ್ಯಕ್ಷೆ ಶಕುಂತಲ ನಾಗರಾಜ್ ಸೂಚಿಸಿದರು.
ಲಕ್ಕವಳ್ಳಿ ಭಾಗದಲ್ಲಿ ಹುಣಸನಹಳ್ಳಿ, ಗುಂಡೇನಹಳ್ಳಿ, ಗುರುಪುರ ಇತ್ಯಾದಿ 9 ಹಳ್ಳಿಗಳ ಹಾಗು ಕರಕುಚ್ಚಿ ಮತ್ತು ಇತರ ಹಳ್ಳಿಗಳ ಮಲ್ಟಿ ವಿಲೇಜ್ ವಾಟರ್ ಸಪ್ಲೈ ಯೋಜನೆ ಇಲ್ಲಿಯವರೆಗೆ ಕಾರ್ಯಗತವಾಗಿಲ್ಲ ಏಕೆ ಎಂದು ಸಭೆಯಲ್ಲಿ ಅಧಿಕಾರಿಗಳನ್ನು ಪ್ರಶ್ನಿಸಲಾಯಿತು.
ಮೇವು ಸರಬರಾಜು: ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಜಗದೀಶ್ ಮಾತನಾಡಿ, ಅಜ್ಜಂಪುರ ಅಮೃತಮಹಲ್ನಲ್ಲಿ 200 ಟನ್ ಮೇವು ಇದೆ, ಅದು ಹಾಳಾಗುವುದಕ್ಕೆ ಬಿಡದೆ, ಅದರ ಬದಲು ತಾಲೂಕಿನ ಅಜ್ಜಂಪುರ, ಲಿಂಗದಹಳ್ಳಿ, ಶಿವನಿ ಮತ್ತು ಬರಪ್ರದೇಶಗಳ ಜಾನುವಾರುಗಳಿಗೆ ಉಪಯೋಗಕ್ಕೆ ಬರುವ ಹಾಗೆ ಮೇವು ಕೊರತೆ ಇರುವ ಪ್ರದೇಶಗಳಲ್ಲಿ ಮೇವು ವಿತರಿಸಿ ಎಂದು ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.
ತಾ.ಪಂ. ಅಧ್ಯಕ್ಷೆ ಶಕುಂತಲ ನಾಗರಾಜ್ ಮಾತನಾಡಿ, ತಾಲೂಕಿನಲ್ಲಿ ಗೋಶಾಲೆಗಳನ್ನು ನಿರ್ಮಿಸಿ, ಅಜ್ಜಂಪುರದಲ್ಲಿ ಸಂಗ್ರಹಿಸಿಟ್ಟಿರುವ ಮೇವಿನ ಬಗ್ಗೆ ಜಿಲ್ಲಾಧಿಕಾರಿಗೆ ಪತ್ರ ಬರೆಯಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕಿನಲ್ಲಿ ಜಾನುವಾರುಗಳ ಕಾಲು-ಬಾಯಿಜ್ವರ ನಿಯಂತ್ರಣದಲ್ಲಿದೆ ಈ ಬಗ್ಗೆ ವಿಚಾರ ಸಂಕಿರಣ ಸಭೆಗಳನ್ನು ಎಲ್ಲ ಕಡೆ ನಡೆಸಲಾಗುತ್ತಿದೆ ಎಂದು ಪಶು ಸಂಗೋಪನಾ ಸಹಾಯಕ ನಿರ್ದೇಶಕ ಡಾ.ಕೊಟ್ರೇಶಪ್ಪ ಸಭೆಯಲ್ಲಿ ತಿಳಿಸಿದರು.
ಫಲಿತಾಂಶ ಸುಧಾರಣೆ: ತಾಲೂಕಿನಲ್ಲಿ ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶ ಸುಧಾರಣೆಗೆ ಹೆಚ್ಚಿನ ಗಮನ ನೀಡಬೇಕು. ಎಲ್ಲ ಪ್ರೌಢಶಾಲೆಗಳಲ್ಲಿ ವಿಷಯವಾರು ವಿಶೇಷ ತರಗತಿಗಳನ್ನು ನಡೆಸಬೇಕು. ಪರೀಕ್ಷಾ ಫಲಿತಾಂಶ ಸುಧಾರಣೆಗೆ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಶಿಕ್ಷಣ ಇಲಾಖೆ ಪ್ರಗತಿ ಪರಿಶೀಲಿಸುವಾಗ ತಾ.ಪಂ. ಅಧ್ಯಕ್ಷೆ ಶಕುಂತಲ ನಾಗರಾಜ್ ಅಧಿಕಾರಿಗಳಿಗೆ ಸೂಚಿಸಿದರು.
ಆರೋಗ್ಯ ಇಲಾಖೆ ವೈದ್ಯ ಡಾ. ಕೆ.ಆರ್. ರವಿಶಂಕರ್ ಮಾತನಾಡಿ, ತಾಲೂಕಿನಲ್ಲಿ ಶೇ.99ರಷ್ಟು ಪಲ್ಸ್ ಪೋಲಿಯೋ ಗುರಿ ಸಾಧಿಸಲಾಗಿದೆ. ಎನ್ಆರ್ಇ.ಜಿ. ಯೋಜನೆಯಲ್ಲಿ ಚೆಕ್ ಡ್ಯಾಂಗಳನ್ನು ನಿರ್ಮಿಸಲು ಅವಕಾಶವಿದೆ. ಜಲಾನಯನ ಇಲಾಖೆ ಆದಷ್ಟು ಬೇಗ ಚೆಕ್ ಡ್ಯಾಂ ನಿರ್ಮಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಯಿತು
ಕಾರ್ಯನಿರ್ವಹಣಾಧಿಕಾರಿ ದೇವರಾಜಪ್ಪ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.