ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಗೆಲವಿನ ಬಾವುಟ ಹಾರಿಸಲು ಸನ್ನದ್ಧರಾಗಿ

Mainashree
Updated On : 10 Feb 2014, 12:24 pm

ಕ.ಪ್ರ.ವಾರ್ತೆ  ಕಡೂರು  ಫೆ.9 ದೇಶಾದ್ಯಂತ ಬಿಜೆಪಿ ಅಲೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲವಿನ ಬಾವುಟ ಹಾರಿಸಲು ಪಕ್ಷದ ಕಾರ್ಯಕರ್ತರು ಮುಖಂಡರು ಸನ್ನದ್ಧರಾಗುವಂತೆ  ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಜಿಪಂ ಸದಸ್ಯ ಎಚ್.ಸಿ. ಕಲ್ಮರುಡಪ್ಪ ಸಲಹೆ ನೀಡಿದರು.
ಅವರು ಕಡೂರು ಪಟ್ಟಣದ ಪಾಂಡುರಂಗ ಕಲ್ಯಾಣ ಮಂಟಪದಲ್ಲಿ ತಾಲೂಕು ಬಿಜೆಪಿ ಘಟಕ ಏರ್ಪಡಿಸಿದ್ದ ಕಾರ್ಯಕರ್ತರ ಸಭೆ ಮತ್ತು ಜಿಪಂ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಹಿರೇನಲ್ಲೂರು ಜಿಪಂ ಸದಸ್ಯೆ ಪದ್ಮಾ ಚಂದ್ರಪ್ಪನವರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ನರೇಂದ್ರ ಮೋದಿಯವರು ದೇಶದ ಪ್ರಧಾನಿಯಾಗಬೇಕೆಂಬ ಅಭಿಪ್ರಾಯ ದೇಶದ ಪ್ರತಿಯೊಬ್ಬ ನಾಗರೀಕರಲ್ಲೂ ಮನೆ ಮಾಡಿರುವ ಹಿನ್ನೆಲೆಯಲ್ಲಿ ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತರೂ ದೇಶದ ಭದ್ರತೆ ಹಾಗೂ ಭವಿಷ್ಯದ ದೃಷ್ಟಿಯಿಂದ ಶ್ರಮವಹಿಸಿ ದುಡಿಯುವ ಸಂಕಲ್ಪ ಮಾಡಬೇಕು ಎಂದು ಹೇಳಿದರು.
ಗೆಲವು ಖಚಿತ; ಹಾಸನ ಲೋಕಸಭೆಯ ಬಿಜೆಪಿ ಅಧ್ಯಕ್ಷ ರೇಣುಕುಮಾರ್ ಮಾತನಾಡಿ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲವು ಖಚಿತವಾಗಿದ್ದು, ಜಿಲ್ಲೆಯ ಆರೇಳು ಕ್ಷೇತ್ರಗಳಲ್ಲೂ ಜೆಡಿಎಸ್ ಈಗಾಗಲೇ ನೆಲಕಚ್ಚಿ ಎಲ್ಲೆಡೆ ಮೋದಿ ಅಲೆ ಎದ್ದಿದೆ ಎಂದರು.
ನಮೋ ಬ್ರಿಗೇಡ್ ಅಭಿಯಾನದಲ್ಲಿ ಮತದಾರರಿಂದ ಪಕ್ಷದ ನಿಧಿ ಸಂಗ್ರಹಣೆಗೆ ಪಕ್ಷ ನಿರ್ಧರಿಸಿದ್ದು, ಕಾರ್ಯಕರ್ತರು ಯಾವುದೇ ಕಾರಣಕ್ಕೂ ಮತದಾರರ ಮೇಲೆ ನಿಧಿ ಸಂಗ್ರಹಣೆಗೆ ಒತ್ತಡ ಹಾಕದೆ ಅವರ ಮನವೊಲಿಸಿ  ನಿಧಿ ಸಂಗ್ರಹಿಸುವಂತೆ ಕೋರಿ, ಲೋಕಸಭಾ ಚುನಾವಣೆಯಲ್ಲಿ ಕಾರ್ಯಕರ್ತರು ಪರಸ್ಪರ ಭಿನ್ನಭಿಪ್ರಾಯ ಮತ್ತು ಪ್ರತಿಷ್ಠೆ ಮರೆತು ಒಟ್ಟಾಗಿ ಬಿಜೆಪಿಯನ್ನು ಸಂಘಟಿಸುವಂತೆ ಮನವಿ ಮಾಡಿದರು.
ಕಡೆಗಣನೆ ಸಲ್ಲ: ಮಾಜಿ ಜಿಪಂ ಅಧ್ಯಕ್ಷ ಬೆಳ್ಳಿ ಪ್ರಕಾಶ್ ಮಾತನಾಡಿ, ಬಿಜೆಪಿಯಲ್ಲಿ ಕೆಜೆಪಿ ವಿಲೀನಗೊಂಡ ನಂತರ ಕಡೂರು ಕ್ಷೇತ್ರದ ಎರಡೂ ಪಕ್ಷಗಳ ಮುಖಂಡರ ಸಮ್ಮಿಲನಕ್ಕೆ ಈ ವೇದಿಕೆ ಸಾಕ್ಷಿಯಾಗಿದೆ. ಕೆಜೆಪಿಯಲ್ಲಿ ಗುರುತಿಸಿಕೊಂಡು ಬಿಜೆಪಿ ಸೇರಿರುವ ಕಾರ್ಯಕರ್ತರ ಮೇಲೆ ಯಾರೂ ತಾರತಮ್ಯ ನೀತಿ ಅನುಸರಿಸಬಾರದು ಎಲ್ಲರೂ ಒಗ್ಗಟ್ಟಾಗಿ ಪಕ್ಷ ಸಂಘಟನೆಗೆ ದುಡಿಯಬೇಕು. ಕಾರ್ಯಕರ್ತರನ್ನು ಕಡೆಗಣಿಸಿದೆರ ಪಕ್ಷಕ್ಕೆ ಭವಿಷ್ಯವಿಲ್ಲ ಎಂದು ಎಚ್ಚರಿಸಿದರು.
ನೂತನ ಜಿಪಂ ಅಧ್ಯಕ್ಷೆ ಪದ್ಮಾ ಚಂದ್ರಪ್ಪ ಮಾತನಾಡಿ, ತತ್ವ ಸಿದ್ದಾಂತಕ್ಕೆ ತಕ್ಕಂತೆ ಬಿಜೆಪಿ ತಮ್ಮನ್ನು ಗುರುತಿಸಿ ಜಿಪಂ ಅಧ್ಯಕ್ಷಗಿರಿ ನೀಡಿದೆ. ತಮಗೆ ನೀಡಿರುವ ಈ ಜವಾಬ್ದಾರಿಯನ್ನು ಪಕ್ಷದ ಎಲ್ಲಾ ಮುಖಂಡರ ಸಲಹೆ ಸಹಕಾರ ಪಡೆಯುವ ಮೂಲಕ ಜಿಲ್ಲೆಯ ಜನರ ಅಭಿವೃದ್ಧಿಗಾಗಿ ದುಡಿದು, ಮೂಲ ಸವಲತ್ತುಗಳನ್ನು ದೊರಕಿಸಿಕೊಡುವಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವುದಾಗಿ ತಿಳಿಸಿದರು.
ಕಡೂರು ತಾಲೂಕು ಬಿಜೆಪಿ ಅಧ್ಯಕ್ಷ ಕೆ.ಎಚ್. ಶಂಕರ್, ಬಿಜೆಪಿ ಜಿಲ್ಲಾ ಮುಖಂಡ ಅರೇಕಲ್ ಪ್ರಕಾಶ್, ಎಸ್.ವಿ. ಉಮಾಪತಿ, ತಾಪಂ ಅಧ್ಯಕ್ಷ ಕುಂಕಾನಾಡು ಬಸವರಾಜು, ಜಿಪಂ ಸದಸ್ಯೆ ಶಶಿರೇಖಾ ಸುರೇಶ್, ತಾಪಂ ಸದಸ್ಯ ಆರ್. ಶಿವಕುಮಾರ್, ರತ್ನಮ್ಮ, ಪುರಸಭಾ ಸದಸ್ಯ ರಾಜೇಶ್, ಸವಿತಾ ರಮೇಶ್, ರಾಜಾನಾಯ್ಕ, ಮಂಜು, ರವಿಶಂಕರ್, ಪ್ರಕಾಶ್, ಜಿಗಣೇಹಳ್ಳಿ ಮಂಜು ಮೊದಲಾದವರುಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement