ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ದುರಾಸೆ ತುಂಬಿ ಮಾನವೀಯತೆ ಮರೆ: ಸಂತೋಷ ಹೆಗ್ಡೆ

Mainashree
Updated On : 10 Feb 2014, 12:24 pm

ಚಿಕ್ಕಮಗಳೂರು: ಸಮಾಜದಲ್ಲಿ ದುರಾಸೆ ತುಂಬಿ ತುಳುಕುತ್ತಿದ್ದು, ಮಾನವೀಯತೆ ಕಳೆದುಕೊಳ್ಳುತ್ತಿದ್ದೇವೆ ಎಂದು ನಿವೃತ್ತ ಲೋಕಾಯುಕ್ತ ನಾಡೋಜ ಸಂತೋಷ್ ಹೆಗ್ಡೆ ವಿಷಾದ ವ್ಯಕ್ತಪಡಿಸಿದರು.
ಇಲ್ಲಿನ ಜಿಲ್ಲಾ ಆಟದ ಮೈದಾನದಲ್ಲಿ ಭಾನುವಾರ ನಡೆದ ಯುನಿವರ್ಸಲ್ ಕಾಫಿ ಫೌಂಡೇಶನ್ 9.9.9 ಲೋಕಾರ್ಪಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಹೆಚ್ಚುತ್ತಿರುವ ದುರಾಸೆ: ಸಮಾಜದಲ್ಲಿ ದುರಾಸೆ ತುಂಬಿ ತುಳುಕುತ್ತಿದೆ. ಎಲ್ಲಾ ಅನುಕೂಲಗಳಿದ್ದರೂ, ಇನ್ನಷ್ಟು ಹಣ ಸಂಪಾದನೆ ಮಾಡಬೇಕೆಂಬ ಭಾವನೆ ಹಲವರಲ್ಲಿ ಬಂದಿದೆ. ಹಿಂದಿನ ಸಂಸ್ಕೃತಿ ಮರೆತು ದುರಾಸೆಯ ಹಿಂದೆ ಬಿದ್ದಿದ್ದಾರೆ. ಇದರಿಂದಾಗಿ ಮಾನವೀಯತೆ ಕಳೆದುಕೊಳ್ಳುತ್ತಿದ್ದೇವೆ. ಈ ಪರಿಸ್ಥಿತಿ ಮುಂದಿನ ದಿನಗಳಲ್ಲಿ ಎಲ್ಲಿಗೆ ಹೋಗಿ ಮುಟ್ಟುತ್ತದೆಯೋ ಗೊತ್ತಾಗುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ಹುಟ್ಟಿದಾಗ ಮನುಷ್ಯರಾಗಿರುತ್ತೇವೆ. ಬೆಳೆಯುತ್ತಾ ಮಾನವರಾಗುತ್ತೇವೆ. ಆದರೆ ಕೆಲವರು ಮಾನವರತಿಲ್ಲ. ಹುಟ್ಟುವಾಗ ಮನುಷ್ಯರಾಗಿ ಹುಟ್ಟಿ ಸಾಯುವಾಗ ಮಾನವರಾಗಿ ಸಾಯಬೇಕು. ಮುಂದಿನ ಪೀಳಿಗೆಯನ್ನು ಮಾನವರಂತೆ ಬೆಳೆಸಬೇಕು ಎಂದರು.
ಪ್ರಾಮಾಣಿಕರಿಗೆ ಕಾಲವಿಲ್ಲ: ಇಂದಿನ ಸಮಾಜದಲ್ಲಿ ಪ್ರಾಮಾಣಿಕರಿಗೆ ಕಾಲವಿಲ್ಲ, ಬರೀ ಶ್ರೀಮಂತ, ಅಧಿಕಾರಿಗಳ ಕಾಲವೆಂಬ ಭಾವನೆ ಜನರಲ್ಲಿ ಬಂದಿದೆ. ಶ್ರೀಮಂತರಿಗೆ, ಅಧಿಕಾರಿಗಳನ್ನು ಮಾತ್ರ ಈ ಸಮಾಜ ಪುರಸ್ಕರಿಸಲಿದೆ ಎಂಬ ಸ್ಥಿತಿ ನಿರ್ಮಾಣಗೊಂಡಿದೆ. ಈ ತಪ್ಪು ಸಂದೇಶ ಬದಲಾಗಬೇಕು ಎಂದರು.
ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಮಾತನಾಡಿ, ರಾಜಕಾರಣದಲ್ಲಿ ಇದ್ದವರು ಸಮಾಜ ಸೇವಕರಲ್ಲ. ಚುನಾವಣೆಯಲ್ಲಿ ಗೆದ್ದವರು ಕೆಲಸ ಮಾಡಬೇಕಾಗಿರುವುದು ಅವರ ಹಕ್ಕು. ಜನ ಸೇವೆ ಮಾಡುವ ಶಕ್ತಿ ಇಲ್ಲದವರು ಚುನಾವಣೆಗೆ ನಿಲ್ಲಬಾರದು.
 ಚುನಾವಣೆಗೆ ಸ್ಪರ್ಧೆ ಮಾಡುವವರು ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಬೇಕು ಎಂದು ಹೇಳಿದರು.
ಶಾಸಕ ಸಿ.ಟಿ. ರವಿ ಅಧ್ಯಕ್ಷತೆ ವಹಿಸಿದ್ದರು. ವಿಪ ಸದಸ್ಯೆ ಗಾಯತ್ರಿ ಶಾಂತೇಗೌಡ, ಜಿಪಂ ಮಾಜಿ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ, ಜಿಲ್ಲಾಧಿಕಾರಿ ಬಿ.ಎಸ್. ಶೇಖರಪ್ಪ, ಜಿಲ್ಲಾ ರಕ್ಷಣಾಧಿಕಾರಿ ಆರ್. ಚೇತನ್, ಆಶಾಕಿರಣ ಸಂಸ್ಥೆ ಅಧ್ಯಕ್ಷ ಡಾ. ಜೆ.ಪಿ. ಕೃಷ್ಣೇಗೌಡ, ಎಐಟಿ ಪ್ರಾಂಶುಪಾಲ ಡಾ. ಸಿ.ಕೆ. ಸುಬ್ರಾಯ, ಕಾಫಿ ಬೆಳೆಗಾರ ಎ.ಸಿ. ಶಾಂತಮಲ್ಲೇಗೌಡ, ಎಂ.ಆರ್. ಸಣ್ಣಸಿದ್ದೇಗೌಡ, ಯುನಿವರ್ಸಲ್ ಕಾಫಿ ಫೌಂಡೇಶನ್ 9.9.9ನ ಸಂಸ್ಥಾಪಕ ಅಧ್ಯಕ್ಷೆ ಗೌರಮ್ಮ ಬಸವೇಗೌಡ, ಟ್ರಸ್ಟಿ ಟಿ. ಜಯಪ್ರಕಾಶ್, ಎ.ಬಿ. ಸುದರ್ಶನ್, ಕಿಶೋರ್ ಕುಮಾರ್ ಹೆಗ್ಡೆ ಹಾಗೂ ಸಂಸ್ಥೆಯ ಟ್ರಸ್ಟಿಗಳು ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement