ಪಕ್ಷದ ವರಿಷ್ಟರ ತೀರ್ಮಾನಕ್ಕೆ ಬದ್ಧ: ಡೀವಿ
ಚಿಕ್ಕಮಗಳೂರು: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಇಂತಹುದೇ ಕ್ಷೇತ್ರದಿಂದ ಅವಕಾಶ ನೀಡುವಂತೆ ಕೇಳಿಕೊಂಡಿಲ್ಲ, ವರಿಷ್ಟರು ಸೂಚಿಸುವ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಹೇಳಿದ್ದಾರೆ.
ಪಕ್ಷದ ರಾಜ್ಯಾಧ್ಯಕ್ಷ ಸೇರಿದಂತೆ ಹಲವು ಹುದ್ದೆಗಳಲ್ಲಿ ಕೆಲಸ ಮಾಡಿದ್ದೇನೆ. ರಾಜ್ಯದ ಮುಖ್ಯಮಂತ್ರಿಯೂ ಆಗಿದ್ದೆ. ಆದ್ದರಿಂದ ರಾಜ್ಯದ ಯಾವುದೇ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ಅವಕಾಶ ನೀಡಿದರೂ ಸ್ವೀಕಾರ ಮಾಡುತ್ತೇನೆ ಎಂದು ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡುವಾಗ ತಿಳಿಸಿದರು.
ವರಿಷ್ಟರಿಗೆ ಹೆಳಿಲ್ಲ: ಈವರೆಗೆ ಇಂತದ್ದೇ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ ಎಂದು ವರಿಷ್ಟರಿಗೆ ಹೇಳಿಲ್ಲ, ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಇಬ್ಬರು ಆಕಾಂಕ್ಷಿಗಳಿದ್ದಾರೆ. ಅವರಿಗೆ ಅವಕಾಶ ನೀಡದೇ ಹೋದರೆ ಅಲ್ಲಿ ಸ್ಪರ್ಧೆಗೆ ಅವಕಾಶ ನೀಡಿ ಎಂದು ಕೇಳಿದ್ದೇನೆ ಎಂರು.
ಚಿಕ್ಕಮಗಳೂರು ಬಿಜೆಪಿ ಕೋರ್ ಕಮಿಟಿ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ನನ್ನ ಹೆಸರು ಸೂಚನೆ ಮಾಡಿದ್ದಾರೆ. ವೀರಪ್ಪ ಮೊಯ್ಲಿ ವಿರುದ್ಧ ಸ್ಫರ್ಧೆ ಮಾಡಬೇಕೆಂದು ಪಕ್ಷದ ಹಿರಿಯ ಮುಖಂಡರು ಹೇಳಿದ್ದಾರೆ. ಅದೇ ರೀತಿ ಮೈಸೂರು- ಕೊಡಗು ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವಂತೆ ಸಲಹೆ ನೀಡಿದ್ದಾರೆ. ಒಟ್ಟಾರೆ ಪಕ್ಷದ ತೀರ್ಮಾನವೇ ಅಂತಿಮ ಅದಕ್ಕೆ ಬದ್ಧವಾಗಿದ್ದೇನೆ ಎಂದವರು ಹೇಳಿದರು.
ಮೋದಿ ಅಲೆ: ಈ ಬಾರಿ ದೇಶದಲ್ಲಿ ನರೇಂದ್ರ ಮೋದಿ ಅಲೆ ಇದೆ. ಕಳೆದ 8 ತಿಂಗಳಲ್ಲಿ ರಾಜ್ಯ ಸರ್ಕಾರದ ಆಡಳಿತ ವೈಫಲ್ಯತೆ, ಮುಂದಿನ ದಿನಗಳಲ್ಲಿ ಕೇಂದ್ರದಲ್ಲಿ ಬದಲಾವಣೆ ತರಲಿದೆ ಎಂದರು.
ವಿರುದ್ಧ ನಿಲುವು: ದೆಹಲಿ ಕೇಂದ್ರ ಆಡಳಿತವಾಗಿದ್ದರೂ ಸಹ ಅದಕ್ಕೆ ರಾಜ್ಯದ ಮಾನ್ಯತೆ ನೀಡಲಾಗಿದೆ. ಅದುದರಿಂದ ಲೋಕಪಾಲ ಮಸೂದೆ ಮಂಡಿಸಲು ದೆಹಲಿ ಮುಖ್ಯಮಂತ್ರಿಯವರು ಅನುಮತಿ ನೀಡುವಂತೆ ಕೇಳಿದ್ದಾರೆ. ಭ್ರಷ್ಟಚಾರ ತಡೆಯಲು ಕಾನೂನು ತರುವುದು ತಪ್ಪಲ್ಲ. ಇದರಲ್ಲಿ ಕೇಂದ್ರ ಸರ್ಕಾರ ಹಸ್ತಾಕ್ಷೇಪ ಮಾಡುವುದು ಸರಿಯಲ್ಲ. ಇದು, ರಾಜನೀತಿಗೆ ವಿರುದ್ಧವಾದ ನಿಲುವು ಎಂದು ಹೇಳಿದರು.
ಯೋಗ್ಯತೆ ಇಲ್ಲ: ಮಳೆಯಿಂದ ಹಾನಿಗೊಳಗಾದ ಅಡಕೆ ಬೆಳೆಗೆ ರಾಜ್ಯ ಸರ್ಕಾರ ಪರಿಹಾರ ನೀಡಿದೆ. ಹಳದಿ ಎಲೆ ರೋಗ ಪೀಡಿತ ಅಡಕೆ ತೋಟಗಳಿಗೆ ಪರಿಹಾರ ನೀಡುವಂತೆ ಗೋರಕ್ ಸಿಂಗ್ ಸಮಿತಿ ವರದಿ ನೀಡಿದೆ. ಅದರಂತೆ ಅಡಕೆ ಬೆಳೆಗಾರರಿಗೆ ರು. 125 ಕೋಟಿ ನೀಡುವುದಾಗಿ ಸಚಿವ ಶರತ್ ಪವಾರ್ ಹೇಳಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಡಿಕೆಗೆ ವಿಶೇಷ ಪ್ಯಾಕೇಜ್ ನೀಡಬೇಕು ಎಂದು ಆಗ್ರಹಿಸಿದರು.
ಭ್ರಷ್ಟಚಾರ ವಿರೋಧಿ ಹಣೆಪಟ್ಟಿ ಹಚ್ಚಿಕೊಂಡು ಎಸ್.ಆರ್. ಹಿರೇಮಠ್ ಓಡಾಡುತ್ತಿದ್ದಾರೆ. ನಮ್ಮ ಮೇಲೆ ಆರೋಪ ಮಾಡುವ ಅವರು ದಾಖಲೆಗಳಿದ್ದರೆ ಬಹಿರಂಗ ಪಡಿಸಲಿ ಆಗ ಅವರಿಗೆ ಗೌರವ ಬರುತ್ತದೆ ಎಂದರು.