ರೈತರ ಒಕ್ಕಲೆಬ್ಬಿಸಿದರೆ ಹೋರಾಟ: ಎಚ್ಡಿಕೆ
ಮೈಸೂರು: ಚಿಕ್ಕಮಗಳೂರಿನ ಕಾಡಂಚಿನ ಗ್ರಾಮದ ರೈತರನ್ನು ಒಕ್ಕಲೆಬ್ಬಿಸಿದರೆ ಹೋರಾಟ ನಡೆಸಬೇಕಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಎಚ್ಚರಿಸಿದರು.
ಜೆಡಿಎಸ್ ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ಮಾತನಾಡಿದ ಅವರು, ಚಿಕ್ಕಮಗಳೂರಿನ ರೈತರನ್ನು ಒಕ್ಕಲಿಬ್ಬಿಸಲು ನೂರಾರು ಮಂದಿ ಪೊಲೀಸರು ಗ್ರಾಮಕ್ಕೆ ಜಮಾಯಿಸಿದ್ದಾರೆ. ನಮಗೆ ನ್ಯಾಯ ಕೊಡಿಸಲು ನನ್ನನ್ನು ಬರುವಂತೆ ರೈತರು ಕರೆ ಮಾಡಿ ಕೋರುತ್ತಿದ್ದಾರೆ. ಹೀಗಾಗಿ ಸಮಾವೇಶ ಮುಗಿದ ನಂತರ ಚಿಕ್ಕಮಗಳೂರಿಗೆ ಹೋಗಲು ನಿರ್ಧರಿಸಿರುವುದಾಗಿ ಹೇಳಿದರು. ಚಿಕ್ಕಮಗಳೂರು ರೈತರನ್ನು ಒಕ್ಕಲೆಬ್ಬಿಸುವುದಿಲ್ಲ ಎಂದು ಅರಣ್ಯ ಸಚಿವ ರಮಾನಾಥ ರೈ ಹೇಳಿದ್ದರು. ಆದರೆ, ಈಗ ಪೊಲೀಸರನ್ನು ಮುಂದಿಟ್ಟುಕೊಂಡು ರೈತರನ್ನು ಒಕ್ಕಲೆಬ್ಬಿಸಲು ಮುಂದಾಗಿದ್ದಾರೆ. ಈ ನಿರ್ಧಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಕ್ಷಣ ಹಿಂಪಡೆಯಬೇಕು. ರೈತರನ್ನು ಒಕ್ಕಲೆಬ್ಬಿಸಬಾರದು ಎಂದು ಆಗ್ರಹಿಸಿದರು.