ಶೂನ್ಯ ಬಡ್ಡಿಯಲ್ಲಿ ರು. 3 ಲಕ್ಷವರೆಗೆ ಸಾಲ
ಕ.ಪ್ರ.ವಾರ್ತೆ ಚಿಕ್ಕಮಗಳೂರು ಫೆ.9
ಸಹಕಾರ ಸಂಘಗಳ ಮೂಲಕ ಶೂನ್ಯ ಬಡ್ಡಿ ದರದಲ್ಲಿ ರು. 3 ಲಕ್ಷದವರೆಗೆ ಸಾಲ ನೀಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಸಹಕಾರ ಸಚಿವ ಮಹಾದೇವ ಪ್ರಸಾದ್ ಹೇಳಿದರು.
ಇಲ್ಲಿನ ಹಿರೇಮಗಳೂರಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶತಮಾನೋತ್ಸವ ಸಮಾರಂಭವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದ ಅವರು, ಶೂನ್ಯ ಬಡ್ಡಿಯಲ್ಲಿ ಈ ಹಿಂದೆ ರು. 1 ಲಕ್ಷ ಸಾಲ ನೀಡಲಾಗುತ್ತಿತ್ತು. ಇದನ್ನು ಈಗಿನ ಸರ್ಕಾರ ರು. 2 ಲಕ್ಷಕ್ಕೆ ಹೆಚ್ಚಳ ಮಾಡಿದೆ. ಮುಂದಿನ ದಿನಗಳಲ್ಲಿ ರು. 3 ಲಕ್ಷದವರೆಗೆ ಶೂನ್ಯ ಬಡ್ಡಿಯಲ್ಲಿ ಸಾಲ ನೀಡಲು ಸರ್ಕಾರ ಉದ್ದೇಶಿಸಿದೆ ಎಂದು ತಿಳಿಸಿದರು.
37,000 ಸಂಘ: ರಾಜ್ಯದಲ್ಲಿ 37,000 ಸಹಕಾರ ಸಂಘಗಳಿವೆ. ಉಪ ಕಸುಬಿಗೆ ಅನುಕೂಲವಾಗಲು ಈ ಹಿಂದೆ ರು. 5,000ದವರೆಗೆ ಸುತ್ತು ನಿಧಿ ನೀಡಲಾಗುತ್ತಿದ್ದು, ಈ ಮೊತ್ತವನ್ನು ಇದೀಗ ರು. 25,000ಕ್ಕೆ ಹೆಚ್ಚಳ ಮಾಡಲಾಗಿದೆ ಎಂದರು.
ಯಶಸ್ವಿನಿ ಯೋಜನೆಯ ಸವಲತ್ತು ಪಡೆಯಲು ಹೆಸರು ನೋಂದಾಯಿಸಿದವರು 6 ತಿಂಗಳವರೆಗೆ ಕಾಯಬೇಕಾಗಿತ್ತು. ಈ ನಿಯಮವನ್ನು ರಾಜ್ಯ ಸರ್ಕಾರ ಸಡಿಲಗೊಳಿಸಿದ್ದು, ಯಶಸ್ವಿನಿ ಯೋಜನೆಯ ಸವಲತ್ತು ಪಡೆಯಲು ಹೆಸರು ನೋಂದಾಯಿಸಿದ ದಿನದಂದೇ ಇದರ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ ಎಂದರು.
ಗೊಂದಲದ ಹೇಳಿಕೆ: ಅಡಕೆ ನಿಷೇಧ ವಿಷಯ ಪ್ರಸ್ತಾಪಿಸಿದ ಸಚಿವರು, ಅಡಕೆ ನಿಷೇಧ ಮಾಡಲಾಗುತ್ತಿದೆ ಎಂದು ಕೆಲವರು ಬೊಬ್ಬೆ ಹೊಡೆಯುತ್ತಿದ್ದಾರೆ. ರಾಜಕೀಯ ಅಸ್ತಿತ್ವ ಕಳೆದುಕೊಂಡವರು, ರಾಜಕೀಯ ಲಾಭ ಪಡೆಯಲು ಈ ರೀತಿಯ ಗೊಂದಲ ಸೃಷ್ಟಿಸಿ, ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಹೇಳಿದರು.
ಅಡಕೆ ನಿಷೇಧಿಸುವುದಿಲ್ಲ ಎಂದು ಈಗಾಗಲೇ ಮುಖ್ಯಮಂತ್ರಿಯವರು ಸ್ಪಷ್ಟಪಡಿಸಿದ್ದಾರೆ. ಇದರ ಬಗ್ಗೆ ಮತ್ತೆ ಚರ್ಚಿಸುವ ಅವಶ್ಯಕತೆ ಇಲ್ಲ. ಅಡಕೆ ನಿಷೇಧದ ಗೊಂದಲದ ಹೇಳಿಕೆಗಳಿಗೆ ಯಾರೂ ಮಾನ್ಯತೆ ನೀಡಬಾರದು ಎಂದು ತಿಳಿಸಿದರು.
ಕಳೆದ ಬಾರಿ ಮಳೆಯಿಂದಾಗಿ ಹಾನಿಯಾದ ಅಡಕೆ ಬೆಳೆಗಾರರಿಗೆ ಸರ್ಕಾರ ಪರಿಹಾರ ನೀಡಿದೆ. ಹಳದಿ ಎಲೆ ರೋಗಕ್ಕೆ ಸಂಬಂಧಿಸಿದಂತೆ ಗೋರಕ್ ಸಿಂಗ್ ನೀಡಿರುವ ವರದಿಯನ್ನು ಹಂತ ಹಂತವಾಗಿ ಜಾರಿಗೆ ತರಲಾಗಿದೆ ಎಂದರು.
ಮರುಪಾವತಿ ಕಷ್ಟ: ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಸಾಲ ಪಡೆಯುವುದು ಸುಲಭ. ಆದರೆ, ಆ ಸಾಲವನ್ನು ಮರುಪಾವತಿ ಮಾಡುವುದು ಕಷ್ಟ. ಬ್ಯಾಂಕಿನಿಂದ ಪಡೆದ ಸಾಲ ಬೇರೆಯವರ ಠೇವಣಿ ಹಣ ಎಂಬುದನ್ನು ಮರೆಯಬಾರದು. ಅದುದರಿಂದ ಸಕಾಲದಲ್ಲಿ ಸಾಲ ಮರುಪಾವತಿ ಮಾಡಬೇಕು. ಬ್ಯಾಂಕಿಂಗ್ ವ್ಯವಸ್ಥೆ ಬಗ್ಗೆ ಅರ್ಥ ಮಾಡಿಕೊಳ್ಳಬೇಕು ಎಂದರು.
ರಾಜ್ಯ ಅಫೆಕ್ಸ್ ಬ್ಯಾಂಕ್ ಅಧ್ಯಕ್ಷ ಎಂ.ಆರ್. ಮಂಜುನಾಥ್ ಗೌಡ ಮಾತನಾಡಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಸಹಕಾರದ ಆಧಾರ ಸ್ತಂಭ ಎಂಬುದನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ಸಹಕಾರ ಕ್ಷೇತ್ರದಲ್ಲಿ ಜಾತಿ, ಪಕ್ಷ, ಲಿಂಗಭೇದ ಇರಬಾರದು ಎಂದರು.
ವಿಪ ಸದಸ್ಯೆ ಗಾಯತ್ರಿ ಶಾಂತೇಗೌಡ ಮಾತನಾಡಿದರು. ಹಿರೇಮಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ.ಸಿ. ಬಸವರಾಜ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಸಿ.ಟಿ. ರವಿ, ಅಫೆಕ್ಸ್ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ರಮಣ ರೆಡ್ಡಿ, ಡಿಸಿಸಿ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಲೋಕಪ್ಪಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಡಿ.ಎಲ್. ವಿಜಯಕುಮಾರ್, ಸಿಡಿಎ ಮಾಜಿ ಅಧ್ಯಕ್ಷ ಕೋಟೆ ರಂಗನಾಥ್ ಹಾಗೂ ಹಿರೇಮಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯವರು ಉಪಸ್ಥಿತರಿದ್ದರು.
ನಗರಸಭಾ ಸದಸ್ಯ ಎಚ್.ಎಸ್. ಪುಟ್ಟಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಗರಸಭಾ ಸದಸ್ಯ ಎಚ್.ಡಿ. ತಮ್ಮಯ್ಯ ಕಾರ್ಯಕ್ರಮ ನಿರೂಪಿಸಿದರು.