ಇನಾಂ ಭೂಮಿ: ಕೋರ್ಟ್‌ಗೆ ಅಗತ್ಯ ಮಾಹಿತಿ ನೀಡಲು ಆಗ್ರಹ
ಮೂಡಿಗೆರೆ: ಕಳಸ ಭಾಗದ ಜನರು ಒಂದಲ್ಲಾ ಒಂದು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರಿಂದ ಮತ ಪಡೆದ ನಾವುಗಳು ಅವರ ಸಮಸ್ಯೆಗೆ ಸ್ಪಂದಿಸಬೇಕೇ ಹೋರತು ರಾಜಕಾರಣ ಮಾಡುವುದು ಸರಿಯಲ್ಲ ಎಂದು ಶಾಸಕ ಸಿ.ಟಿ. ರವಿ ಹೇಳಿದ್ದಾರೆ.
ಬಲಿಗೆ ಗ್ರಾಮಕ್ಕೆ ಸೋಮವಾರ ಭೇಟಿ ನೀಡಿದ ಅವರು ಇನಾಂ ಸಂತ್ರಸ್ತರ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ, ಉಳುವವನಿಗೆ ಭೂಮಿಯೆಂದು ಹೇಳಿ ಅದರಂತೆ ಸರ್ಕಾರ ಭೂಮಿ ನೀಡಿತ್ತು. ತಲತಲಾಂತರದಿಂದ ವಾಸಿಸುತ್ತ ಉತ್ತಿ, ಬಿತ್ತಿ, ತಮ್ಮ ರಕ್ತವನ್ನೇ ಹರಿಸಿ ಇನಾಂ ಭೂಮಿಯನ್ನು ಕಾಪಾಡಿಕೊಂಡು ಬಂದಿದ್ದ ರೈತರ ಭೂಮಿಯನ್ನು ಕಿತ್ತು ಕೊಳ್ಳುತ್ತಿರುವುದು ಸರ್ವಾಧಿಕಾರಿ ಧೋರಣೆಯಾಗಿದೆ ಎಂದರು.
ನ್ಯಾಯಾಲಯಕ್ಕೆ ಸರಿಯಾದ ಮಾಹಿತಿಯನ್ನು ಅಧಿಕಾರಿಗಳು ನೀಡದೇ ಇರುವುದೇ ಇಂದು ಇನಾಂ ಭೂಮಿ ತೆರವು ಒತುವರಿ ಭೂತ ಕಾಡುತ್ತಿದೆ. ಅಧಿಕಾರಿಗಳೇ ಇನ್ನಾದರೂ ಸರ್ಕಾರಕ್ಕೆ, ನ್ಯಾಯಾಲಯಕ್ಕೆ ಸರಿಯಾದ ಮಾಹಿತಿಯನ್ನು ನೀಡಿ ಪ್ರಮಾಣಪತ್ರ ಸಲ್ಲಿಸಿ ಇನಾಂ ಸಂತ್ರಸ್ತರನ್ನು ಉಳಿಸುವ ಕಾರ್ಯದಲ್ಲಿ ಮುಂದಾಗಿ ಎಂದರು.
ರಾಜಿನಾಮೆಗೂ ಸಿದ್ಧ: ಮೂಡಿಗೆರೆ ಶಾಸಕ ಬಿ.ಬಿ. ನಿಂಗಯ್ಯ ಮಾತನಾಡಿ, ಇನಾಂ ಸಮಸ್ಯೆ ಬಗೆಹರಿಸದೇ ಇದ್ದರೆ ಕ್ಷೇತ್ರ ಶಾಸಕನಾಗಿದ್ದೂ ಏನು ಪ್ರಯೋಜನ. ಕ್ಷೇತ್ರದ ಜನ ನನಗೆ ಮತ ಹಾಕಿದ್ದು, ಕ್ಷೇತ್ರದ ಸಮಸ್ಯೆಗೆ ಸ್ಪಂದಿಸಿ ಎಂದೇ ಹೊರತು, ದೊಡ್ಡಸ್ಥಿಕೆಯಿಂದ ತಿರುಗಿ ಎಂದಲ್ಲಾ. ಇನಾಂ ಸಮಸ್ಯೆಗಾಗಿ ನಾನು ರಾಜಿನಾಮೆ ನೀಡಲು ಸಿದ್ದ. ಇದು ಯಾವುದೇ ಭರವಸೆಯ ಮಾತಲ್ಲಾ. ನನ್ನ ಸ್ವ ಇಚ್ಚೆಯಿಂದ ಹೇಳುವ ಮಾತು. ಇನಾಂ ಭೂಮಿಯ ಸಮಸ್ಯೆಯ ಹೋರಾಟಕ್ಕೆ ನಾನು ಸದಾ ಸಿದ್ದ. ಇನಾಂ ಭೂಮಿಯನ್ನು ಉಳಿಸುವ ಸಲುವಾಗಿ ವಿದಾನಸಭೆಯಲ್ಲಿ ಚರ್ಚಿಸಿದಾಗಿ ತಿಳಿಸಿದರು.