ಡಿಕೆಶಿಗೆ ಭಾರದ್ವಾಜ್ ಬುಲಾವ್
ಬೆಂಗಳೂರು: ಮಹತ್ವದ ಬೆಳವಣಿಗೆಯೊಂದರಲ್ಲಿ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಇಂಧನ ಸಚಿವ ಡಿ.ಕೆ. ಶಿವಕುಮಾರ ಅವರನ್ನು ರಾಜಭವನಕ್ಕೆ ಕರೆಸಿಕೊಂಡು ಚರ್ಚೆ ನಡೆಸಿದ್ದಾರೆ.
ಸೋಮವಾರ ಸಾಯಂಕಾಲ 8.15ರ ಸುಮಾರಿಗೆ ಶಿವಕುಮಾರ್ ಅವರಿಗೆ ಬುಲಾವ್ ನೀಡಿದ ರಾಜ್ಯಪಾಲರು, ಮಹತ್ವದ ವಿಚಾರದ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ರಾಜಭವನದ ಮೂಲಗಳು ಕನ್ನಡಪ್ರಭಕ್ಕೆ ತಿಳಿಸಿವೆ.
ಅಕ್ರಮ ಗಣಿಗಾರಿಕೆ, ಡಿನೋಟಿಫಿಕೇಶನ್ ಸೇರಿದಂತೆ ಹಲವು ಆರೋಪಗಳನ್ನು ಎದುರಿಸುತ್ತಿರುವ ಡಿ.ಕೆ.ಶಿವಕುಮಾರ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಕಾನೂನು ತೊಡಕುಗಳು ಉಂಟಾಗಿತ್ತು. ಮೇಲಾಗಿ ಸಮಾಜ ಪರಿವರ್ತನ ಸಂಸ್ಥೆಯ ಎಸ್.ಆರ್.ಹಿರೇಮಠ್ ಅವರು ಈ ಬಗ್ಗೆ ಗಂಭೀರ ಆರೋಪ ಮಾಡಿದ್ದರು. ಡಿನೋಟಿಫಿಕೇಶನ್ ಪ್ರಕರಣ ಸಂಬಂಧ ಶಿವಕುಮಾರ್ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆಯಾಗಿದೆ. ಇದನ್ನು ರಾಜ್ಯಪಾಲರು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಳುಹಿಸಿಕೊಡುತ್ತೇನೆ ಎಂದಿದ್ದ ಹಿರೇಮಠ್ ಕೆಲ ದಿನಗಳ ಹಿಂದೆಯೇ ಸ್ಪೀಡ್ ಪೋಸ್ಟ್ ಮೂಲಕ ರಾಜಭವನಕ್ಕೆ ರವಾನಿಸಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯಪಾಲರು ಶಿವಕುಮಾರ್ ಅವರನ್ನು ಕರೆಸಿಕೊಂಡು ಆರೋಪಗಳ ಸಂಬಂಧ ವಿವರಣೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. ಚರ್ಚೆ ಸಂದರ್ಭದಲ್ಲಿ ಕಾನೂನು ರೀತ್ಯಾ ತಾವು ಸರಿ ಇರುವುದಾಗಿ ಶಿವಕುಮಾರ್ ರಾಜ್ಯಪಾಲರಿಗೆ ಮನವರಿಕೆ ಮಾಡಿಕೊಟ್ಟಿದ್ದು, ಹಿರೇಮಠ್ ಸೇರಿದಂತೆ ತಮ್ಮ ವಿರುದ್ಧ ಆರೋಪ ಮಾಡಿದವರಿಗೆಲ್ಲ ಉತ್ತರ ನೀಡಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.