ಅರ್ಧ ಟಿಎಂಸಿ ನೀರು ಬಿಡುಗಡೆ
ಚಿಕ್ಕಮಗಳೂರು: ಹೂವಿನಹಡಗಲಿ ತಾಲೂಕಿನ ಮೈಲಾರ ಗ್ರಾಮದ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ ವಾರ್ಷಿಕ ಕಾರ್ಣಿಕೋತ್ಸವ ಪ್ರಯುಕ್ತ ಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ ಫೆ.7 ರಂದು ಸಂಜೆ 6 ಗಂಟೆಯಿಂದ 0.50 ಟಿಎಂಸಿ ನೀರನ್ನು ಮಾರ್ಚ್ 3 ರವರೆಗೆ ಬಿಡಲಾಗುತ್ತಿದೆ. ಭದ್ರಾ ದಂಡೆಯ ಕೆಳಮಟ್ಟದ ಸಾರ್ವಜನಿಕರು ತಿರುಗಾಡುವುದು, ದನಕರುಗಳನ್ನು ಮೇಯಿಸುವುದು ಮತ್ತು ತೋಟಗಾರಿಕೆ ಮಾಡಬಾರದೆಂದು ಎಚ್ಚರಿಕೆ ನೀಡಲಾಗಿದೆ. ರೈತ ಬಾಂದವರು ನದಿಯ ದಂಡೆಯಲ್ಲಿ ಅಳವಡಿಸಿರುವ ಪಂಪ್ ಸೆಟ್ಗಳಿಂದ ನೀರೆತ್ತುವುದನ್ನು ಸಹ ನಿಷೇಧಿಸಲಾಗಿದೆ ಎಂದು ಅಧೀಕ್ಷಕ ಅಭಿಯಂತರರು, ಕರ್ನಾಟಕ ನೀರಾವರಿ ನಿಗಮ ನಿಯಮಿತ, ಭದ್ರಾ ಯೋಜನಾ ವೃತ್ತ, ಬಿ.ಆರ್. ಪ್ರಾಜೆಕ್ಟ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆ
ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ವತಿಯಿಂದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯನ್ನು ಫೆ.17 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿ ಬಿ.ಎಸ್. ಶೇಖರಪ್ಪ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ನ್ಯಾಯಾಲಯದ ಸಭಾಂಗಣದಲ್ಲಿ ನಡೆಯಲಿದೆ.
ಲೋಕಾಯುಕ್ತ ಅಧಿಕಾರಿಗಳ ಪ್ರವಾಸ
ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕರು ಫೆ. 12 ರಂದು ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಅಂದು ಬೆಳಿಗ್ಗೆ 10.30 ಕ್ಕೆ ತರೀಕೆರೆ ಪ್ರವಾಸಿ ಮಂದಿರಕ್ಕೆ ಆಗಮಿಸಲಿದ್ದಾರೆ. ತಾಲೂಕಿನ ಸಾರ್ವಜನಿಕರು ಸರ್ಕಾರಿ ಕಚೇರಿಗಳಿಗೆ ತಮ್ಮ ಕೆಲಸಗಳ ನಿಮಿತ್ತ ಅರ್ಜಿ, ದೂರು ಸಲ್ಲಿಸಿದ್ದು, ತಮ್ಮ ಅರ್ಜಿ, ದೂರನ್ನು ಸಂಬಂಧಪಟ್ಟ ಅಧಿಕಾರಿಯು ವಿಲೇವಾರಿ ಮಾಡದೆ, ಸಮಸ್ಯೆಯನ್ನು ಬಗೆಹರಿಸದೆ ಇದ್ದಲ್ಲಿ ತಮ್ಮ ದೂರುಗಳನ್ನು ಸಲ್ಲಿಸಲು ಕೋರಲಾಗಿದೆ.
ರಸ್ತೆ ಡಾಂಬರೀಕರಣ
ತರೀಕೆರೆ: ಸಮೀಪದ ಹಲಸೂರು ಗೇಟ್ ಬಳಿ ರು. 4 ಲಕ್ಷ 26 ಸಾವಿರ ರು.ಗಳಲ್ಲಿ ಜಿಪಂ ಅನುದಾನದಿಂದ ಹಲಸೂರು ರಸ್ತೆ ಅಭಿವೃದ್ಧಿ ಡಾಂಬರೀಕರಣ ಕಾಮಗಾರಿಗೆ ಗುದ್ದಲಿಪೂಜೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಲಕ್ಕವಳ್ಳಿ ಭಾಗದ ಜಿಪಂ ಸದಸ್ಯ ಕೆ.ಪಿ. ಕುಮಾರ್ ಕಾಮಗಾರಿ ಕಾರ್ಯಕ್ಕೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿ, ಶಾಶ್ವತವಾಗಿ ಉಳಿಯವಂತಹ ಗುಣಮಟ್ಟದ ಕಾಮಗಾರಿ ನಿರ್ವಹಿಸಬೇಕು ಎಂದು ತಿಳಿಸಿದರು. ಹಲಸೂರು ಗ್ರಾಪಂ ಉಪಾಧ್ಯಕ್ಷೆ ಸರೋಜಬಾಯಿ, ಸದಸ್ಯ ಮಲ್ಲಿಕಾರ್ಜುನ್, ಹಾಲೇಶ್, ದಸ್ತಗಿರ್ ಸಾಬ್ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.