ಸಾಂಸ್ಕೃತಿಕ ಹಿನ್ನೆಲೆಯಿಂದ ದೇಶ ಸದೃಢ
ಭಾವರಸಯಾನ ಧ್ವನಿ-ಬೆಳಕಿನ ನೃತ್ಯರೂಪಕ ಕಾರ್ಯಕ್ರಮದಲ್ಲಿ ಸಿ.ಟಿ.ರವಿ
ಕ.ಪ್ರ.ವಾರ್ತೆ ಟಿ ಚಿಕ್ಕಮಗಳೂರು ಟಿ ಫೆ.11
ಸಾಂಸ್ಕೃತಿಕ ಹಿನ್ನೆಲೆ ಇರುವ ಕಡೆಯಲ್ಲಿ ವೈಜ್ಞಾನಿಕ ದೃಷ್ಟಿಕೋನ, ಮಾನವೀಯ ಸಂಬಂಧಗಳು ಗಟ್ಟಿಯಾಗಿರುತ್ತವೆ. ಸಾಂಸ್ಕೃತಿಕ ಶ್ರೀಮಂತಿಕೆ ಸತ್ತುಹೋದ ದೇಶಗಳಲ್ಲಿ ಸಂಘರ್ಷ ತುಂಬಿ ತುಳುಕುತ್ತದೆ ಎಂಬುದಕ್ಕೆ ಹಲವು ದೇಶಗಳ ನಿದರ್ಶನವಿದೆ. ಹಾಗಾಗಿ, ಸಾಂಸ್ಕೃತಿಕ ಹಿನ್ನೆಲೆ ನಮ್ಮ ದೇಶವನ್ನು ಸದೃಢಗೊಳಿಸಿದೆ ಎಂದು ಶಾಸಕ ಸಿ.ಟಿ.ರವಿ ಹೇಳಿದ್ದಾರೆ.
ನಗರದ ಕುವೆಂಪು ಕಲಾ ಮಂದಿರದಲ್ಲಿ ಕೆಪಿಎಂಸಿ ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನೂಪುರ ಅಕಾಡೆಮಿ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ ಇತ್ತೀಚೆಗೆ ಹಮ್ಮಿಕೊಂಡಿದ್ದ ಭಾವರಸಯಾನ ಧ್ವನಿ ಮತ್ತು ಬೆಳಕಿನ ನೃತ್ಯ ರೂಪಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಾಂಸ್ಕೃತಿಕ ನೆಲೆಗಟ್ಟು: ರಂಗಾಯಣ ನಿರ್ದೇಶಕ ಮೈಸೂರು ಜನಾರ್ದನ ಜನ್ನಿ ಮಾತನಾಡಿ, ಪ್ರತಿ ಮಕ್ಕಳಲ್ಲೂ ಮೂಲ ಪ್ರತಿಭೆ ಅಡಗಿರುತ್ತದೆ. ಒಂದು ಸಂಸ್ಕೃತಿ ಫಲ ಪಡೆಯಲು ಅದಕ್ಕೆ ತಕ್ಕಂತೆ ತಯಾರು ಮಾಡುವುದು ಪ್ರಮುಖ ಸಂಗತಿ ಅದಕ್ಕೆ ಪ್ರೋತ್ಸಾಹ ಕೊಡುವ ಕೆಲಸ ಮಾಡಬೇಕು ಎಂದರು.
ಸ್ಪಂದನೆ ಶ್ಲಾಘನಾರ್ಹ: ವನ್ಯಜೀವಿ ಛಾಯಾಗ್ರಾಹಕ ಕೃಪಾಕರ ಸೇನಾನಿ ಮಾತನಾಡಿ, ಚಿಕ್ಕಮಗಳೂರು ಜಿಲ್ಲೆ, ಭದ್ರಾ ಅಭಯಾರಣ್ಯ, ಪೂರ್ಣಚಂದ್ರ ತೇಜಸ್ವಿ ಅವರೊಂದಿಗಿನ ಒಡನಾಟ ಮೆಲುಕು ಹಾಕಿ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮಲೆನಾಡಿನ ಈ ಜಿಲ್ಲೆಯಲ್ಲಿ ಅಭೂತಪೂರ್ವ ಸ್ಪಂದನೆ ಸಿಗುತ್ತಿರುವುದು ಸಂತಸದ ಸಂಗತಿ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಡಿ.ಎಲ್. ವಿಜಯಕುಮಾರ್, ಎಐಟಿ ಪ್ರಾಂಶುಪಾಲ ಡಾ. ಸಿ.ಕೆ. ಸುಬ್ಬರಾಯ, ಡಿ.ಎಚ್. ನಟರಾಜ್ ಮಾತನಾಡಿದರು.
ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಐ.ಎಂ. ಮಹೇಶ್ಗೌಡ, ಕೆಪಿಎಂಸಿ ಟ್ರಸ್ಟ್ ಅಧ್ಯಕ್ಷ ಎಂ.ಸಿ. ಪ್ರಕಾಶ್, ಸಂಸ್ಥೆ ನಿರ್ದೇಶಕಿ ಜ್ಯೋತಿ ಪ್ರಕಾಶ್, ನೃತ್ಯರೂಪಕ ನಿರ್ದೇಶಕ ಜಗದೀಶ್ ರುದ್ರಯ್ಯ ಜಾಣಿ, ಸಹ ನಿರ್ದೇಶನ ಕಿರಣ್ ಚಂದ್ರಶೇಖರ್ ಹಾಜರಿದ್ದರು.
ಉಪನ್ಯಾಸಕ ನಾಗರಾಜರಾವ್ ಕಲ್ಕಟ್ಟೆ ಸ್ವಾಗತಿಸಿ, ಬಿ.ನೀ. ವಿಶ್ವನಾಥ್ ನಿರೂಪಿಸಿ, ಗಿರಿಜಮ್ಮ ವಂದಿಸಿದರು.