ಕಳಸ ಇನಾಂ ಭೂಮಿ ತೆರವು ಬೇಡ
ಚಿಕ್ಕಮಗಳೂರು: ಕಳಸ ಇನಾಂ ಭೂಮಿ ತೆರವು ಕಾರ್ಯಾಚರಣೆಯನ್ನು ಸರ್ಕಾರ ಕೂಡಲೇ ಕೈಬಿಡಬೇಕು ಹಾಗೂ ಜೀವನೋಪಾಯಕ್ಕಾಗಿ 2-3 ಎಕರೆ ಸಾಗುವಳಿ ಮಾಡಿರುವ ಸಣ್ಣ, ಅತಿ ಸಣ್ಣ ರೈತರ ಜಮೀನನ್ನು ಸಕ್ರಮಗೊಳಿಸಬೇಕು ಎಂದು ಕರ್ನಾಟಕ ರೈತ ಸಂಘ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.
ಡಾ. ಬಾಲಸುಬ್ರಹ್ಮಣ್ಯಂ ವರದಿಯ ಪ್ರಕಾರ ಚಿಕ್ಕಮಗಳೂರು ಜಿಲ್ಲೆಯಲ್ಲಿ 11 ಲಕ್ಷ ಎಕರೆ ಭೂಮಿ ಒತ್ತುವರಿಯಾಗಿದ್ದು, ಭಾರೀ ಭೂ ಮಾಲೀಕರು, ರಾಜಕಾರಣಿಗಳು ಇದರ ಫಲಾನುಭವಿಗಳಾಗಿದ್ದಾರೆ ಎಂದು ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ಕೆ.ಎನ್. ಉದ್ದಪ್ಪ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬಲ ಪ್ರಯೋಗ: ಪ್ರತಿ ತಿಂಗಳು 100 ಎಕರೆ ಒತ್ತುವರಿ ಜಮೀನು ಖುಲ್ಲಾಗೊಳಿಸಿ ಸರ್ಕಾರಕ್ಕೆ ವರದಿ ನೀಡಬೇಕೆಂಬ ಆದೇಶವಿದ್ದರೂ ಇದರ ಬಗ್ಗೆ ತಲೆ ಕೆಡಿಸಿಕೊಳ್ಳದ ಸರ್ಕಾರ ಹಾಗೂ ಅರಣ್ಯ ಇಲಾಖೆ, ಪದೇ ಪದೇ ಬಡ ಒತ್ತುವರಿದಾರರ ಮೇಲೆ ಶಕ್ತಿ ಪ್ರಯೋಗಿಸಲು ಮುಂದಾಗಿವೆ. ಎಲ್ಲಾ ರಾಜಕೀಯ ಪಕ್ಷಗಳು ಇಂದು ಜನರಿಗೆ ಉತ್ತರ ಕೊಡಲಾಗದೇ ತಾವೇ ಹೋರಾಟದ ಮುಂಚೂಣಿ ಪಾತ್ರ ವಹಿಸಿ, ನಿಜವಾದ ಸಂತ್ರಸ್ಥ ಹೋರಾಟಗಾರರ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನಕ್ಕೆ ಮುಂದಾಗಿವೆ. ಅಲ್ಲದೆ ತಮ್ಮ ಕೈಲಾಗದ ಕೆಲಸಕ್ಕೆ ಸಮಾಜ ಪರಿವರ್ತನಾ ಸಮುದಾಯದ ಮುಖಂಡರಾದ ಎಸ್.ಆರ್. ಹಿರೇಮಠ್ ಮೇಲೆ ಗೂಬೆ ಕೂರಿಸುವ ಕೆಲಸಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಎಸ್.ಆರ್. ಹಿರೇಮಠ್, ಯಾವತ್ತೂ ಸಣ್ಣ ಮತ್ತು ಅತಿ ಸಣ್ಣ ಸಾಗುವಳಿದಾರರನ್ನು ಒಕ್ಕಲೆಬ್ಬಿಸುವ ಬಗ್ಗೆ ಮಾತನಾಡಿಲ್ಲ, ಸಣ್ಣ ಸಾಗುವಳಿದಾರರ ಪರವಾಗಿ ಹೋರಾಡುತ್ತಿದ್ದಾರೆ. ಕೆಲ ಆಡಳಿತ ಪಕ್ಷದ ಮುಖಂಡರು ತಮ್ಮ ಒತ್ತುವರಿ ಜಮೀನನ್ನು ಉಳಿಸಿಕೊಳ್ಳಲು ಹಿರೇಮಠ್ ವಿರುದ್ಧ ಜನರನ್ನು ಎತ್ತಿಕಟ್ಟುವ ಕೆಲಸಕ್ಕೆ ಮುಂದಾಗಿದ್ದಾರೆ. ರಾಜಕಾರಣಿಗಳ ಈ ಗೋಸುಂಬೆತನವನ್ನು ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ.
ಇತ್ತೀಚೆಗೆ ನಡೆದ ಬೆಳಗಾವಿ ಅಧಿವೇಶನದಲ್ಲಿ ಸಣ್ಣ, ಅತಿ ಸಣ್ಣ ಒತ್ತುವರಿದಾರರನ್ನು ಅಲ್ಲೇ ಉಳಿಸಬೇಕು. ಒಂದು ವೇಳೆ ತೆರವುಗೊಳಿಸಬೇಕಾದ ಅನಿವಾರ್ಯತೆ ಇದ್ದರೆ ಅಂತಹ ಸಂತ್ರಸ್ಥರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ನಂತರ ತೆರವುಗೊಳಿಸಬೇಕೆಂದು ತೀರ್ಮಾನ ಕೈಗೊಳ್ಳಲಾಗಿತ್ತು. ಹಾಗಿದ್ದರೂ ಕೂಡ ಅರಣ್ಯ ಇಲಾಖೆ ಇನಾಂ ಭೂಮಿ ಒತ್ತುವರಿ ತೆರವಿಗೆ ಮುಂದಾಗಿರುವುದು ಸರಿಯಾದ ಕ್ರಮವಲ್ಲ ಎಂದು ಹೇಳಿದ್ದಾರೆ.
ಒತ್ತುವರಿ ಭೂಮಿ ರಕ್ಷಿಸಿ: ಸರ್ಕಾರ ಮೊದಲು ಭಾರೀ ಭೂ ಮಾಲೀಕರ ಒತ್ತುವರಿ ಭೂಮಿಯನ್ನು ತೆರವುಗೊಳಿಸಿ ಅರಣ್ಯ ಸಂರಕ್ಷಣೆಗೆ ಮುಂದಾಗಬೇಕು. ಸಣ್ಣ ಮತ್ತು ಅತಿ ಸಣ್ಣ ರೈತರನ್ನು ಒಕ್ಕಲೆಬ್ಬಿಸಬಾರದು. ರಾಜಕಾರಣಿಗಳ ಬಣ್ಣದ ಮಾತಿಗೆ ಮರುಳಾಗಿ ತಮ್ಮ ಹೋರಾಟದ ದಿಕ್ಕು ತಪ್ಪದಂತೆ ನ್ಯಾಯಯುತ ಹೋರಾಟವನ್ನು ಮುಂದುವರೆಸಬೇಕೆಂದು ತಿಳಿಸಿದ್ದಾರೆ.