ದೊಡ್ಡಿ ಅಕ್ರಮ ಬಳಕೆ: ತೆರವಿಗೆ ಸ್ಥಳೀಯರ ಆಗ್ರಹ
ಚಿಕ್ಕಮಗಳೂರು: ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿರುವ ದೊಡ್ಡಿ (ಗೋಶಾಲೆ) ಅಕ್ರಮ ಬಳಕೆ ತೆರವುಗೊಳಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಬಿಡಾಡಿ ದನಕರುಗಳಿಗೆ ರಕ್ಷಣೆ, ಪಾಲನೆ ಮಾಡಲು ನೂರಾರು ವರ್ಷದ ಹಿಂದೆ ಪಟ್ಟಣದಲ್ಲಿ ದೊಡ್ಡಿ(ಗೋಶಾಲೆ) ತೆರೆಯಲಾಗಿತ್ತು. ಹೊಲ- ಗದ್ದೆಗಳಲ್ಲಿ ಮೇಯ್ದು ಬೆಳೆ ಹಾನಿ ಮಾಡುತ್ತಿದ್ದ ದನಗಳು, ಎಮ್ಮೆಗಳನ್ನು ಇಲ್ಲಿಗೆ ಒಪ್ಪಿಸಲಾಗುತ್ತಿತ್ತು. ಅವುಗಳನ್ನು ಬಿಡಿಸಿಕೊಳ್ಳುವ ಸಂದರ್ಭದಲ್ಲಿ ಸಂಬಂಧಪಟ್ಟವರು ನೀಡುತ್ತಿದ್ದ ಶುಲ್ಕದಿಂದ ದನಕರುಗಳಿಗೆ ಮೇವು ಮತ್ತು ನೀರಿನ ವ್ಯವಸ್ಥೆ ಮಾಡಲಾಗುತ್ತಿತ್ತು. ಸಾರ್ವಜನಿಕರು ಮತ್ತು ಗ್ರಾಮ ಪಂಚಾಯಿತಿ ವ್ಯವಸ್ಥೆ ಈ ಹಿಂದೆ ಸರಿಯಾದ ರೀತಿಯಲ್ಲಿ ನಿರ್ವಹಿಸಿಕೊಂಡು ಬರುತ್ತಿತ್ತು.
ಪಟ್ಟಣದ ಹೃದಯ ಭಾಗದಲ್ಲಿರುವ ಈ ದೊಡ್ಡಿ ಸಾರ್ವಜನಿಕರಿಗೆ ಅನುಕೂಲವಾಗಿತ್ತು. ಆದರೆ, 4 ವರ್ಷದಿಂದ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷರು ತಮ್ಮ ಸ್ವಂತಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅವರು ಹುಲ್ಲಿನ ಬಣವೆ ಹಾಕಿಕೊಂಡಿದ್ದಾರೆ. ಅಲ್ಲದೆ, ತಿಪ್ಪೆಯನ್ನು ಮಾಡಿಕೊಂಡಿದ್ದಾರೆ ಎಂದು ದೂರಿದ್ದಾರೆ.
ಕಿರಿಕಿರಿ: ಅಕ್ರಮವಾಗಿ ದೊಡ್ಡಿಯನ್ನು ತಮ್ಮ ಸ್ವಂತಕ್ಕೆ ಬಳಸಿಕೊಳ್ಳುತ್ತಿರುವುದರಿಂದ ದನಕರು ಸೇರಿಸುವುದು ಕಷ್ಟವಾಗಿರುವುದರಿಂದ ತೊಂದರೆ ಅನುಭವಿಸುವಂತಾಗಿದೆ. ತ್ಯಾಜ್ಯದಿಂದ ತಿಪ್ಪೆಗುಂಡಿಯಂತಾಗಿರುವುದರಿಂದ ಪಟ್ಟಣದ ಜನರು ನಿತ್ಯ ದುರ್ವಾಸನೆ ಅನುಭವಿಸುವಂತಾಗಿದೆ. ಪಟ್ಟಣದಲ್ಲಿರುವುದರಿಂದ ಸುತ್ತಮುತ್ತಲ ಜನರು ಕಿರಿಕಿರಿ ಅನುಭವಿಸುತ್ತಿದ್ದಾರೆ.
ಕೂಡಲೇ ದೊಡ್ಡಿಯ ಅಕ್ರಮ ತೆರವುಗೊಳಿಸದಿದ್ದರೆ ಗ್ರಾಪಂ ಆಸ್ತಿ ರಕ್ಷಿಸಿಕೊಳ್ಳಲು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಅಧ್ಯಕ್ಷ- ಉಪಾಧ್ಯಕ್ಷರು ಏನಂತಾರೆ?
3-4 ವರ್ಷದಿಂದ ದೊಡ್ಡಿಯನ್ನು ಗ್ರಾಪಂ ಮಾಜಿ ಉಪಾಧ್ಯಕ್ಷರು ಅಕ್ರಮವಾಗಿ ಬಳಸಿಕೊಳ್ಳುತ್ತಿರುವ ಬಗ್ಗೆ ಸಾರ್ವಜನಿಕರು ಮತ್ತು ವಿವಿಧ ಸಂಘಟನೆಗಳಿಂದ ದೂರು ಬಂದಿವೆ. ಸಾರ್ವಜನಿಕರ ಆಸ್ತಿ ರಕ್ಷಿಸಲು ಪಂಚಾಯಿತಿ ಎಂದೂ ಹಿಂಜರಿಯುವುದಿಲ್ಲ. ಈಗ ದೊಡ್ಡಿಯಲ್ಲಿನ ಅಕ್ರಮ ತೆರವಿಗೆ ಸಂಬಂಧಪಟ್ಟವರಿಗೆ ಸೂಚನೆ ನೀಡುತ್ತೇವೆ. ಅದಕ್ಕೆ ಅವರು ಸ್ಪಂದಿಸದಿದ್ದರೆ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ ಎಂದು ಗ್ರಾಪಂ ಅಧ್ಯಕ್ಷೆ ಚಂದ್ರಮ್ಮ ತಿಳಿಸಿದ್ದಾರೆ.
ಸಾರ್ವಜನಿಕರ ಉಪಯೋಗಕ್ಕೆ ಮೀಸಲಿಡಲೇಬೇಕು. ಸಾರ್ವಜನಿಕರು ಅಕ್ರಮ ತೆರವು ಮತ್ತು ಅದನ್ನು ದುರಸ್ತಿಗೊಳಿಸಿ ರಕ್ಷಿಸುವಂತೆ ಒತ್ತಾಯಿಸಿದ್ದಾರೆ. ಅದಕ್ಕೆ ಪಂಚಾಯಿತಿಯಿಂದ ಕಾರ್ಯಕ್ರಮ ರೂಪಿಸಲಾಗುತ್ತದೆ. ಅಕ್ರಮ ತೆರವಿಗೆ ಕ್ರಮ ಕೈಗೊಳ್ಳುವುದಾಗಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಸ್.ಪಿ. ಲೋಕೇಶ್ ಹೇಳಿದ್ದಾರೆ.