22ರಂದು ಕಾಲ್ನಡಿಗೆ ಜಾಥಾ
ಚಿಕ್ಕಮಗಳೂರು: ನಿವೇಶನಕ್ಕೆ ಆಗ್ರಹಿಸಿ ಸಿಪಿಐ ಹಾಗೂ ನಿವೇಶನ ರಹಿತ ಹೋರಾಟ ಸಮಿತಿ ಫೆ.22ರಂದು ಕಾಲ್ನಡಿಗೆ ಜಾಥಾ ಹಮ್ಮಿಕೊಂಡಿದೆ.
ಫೆ.22ರಂದು ಕಳಸದಿಂದ ಜಾಥಾ ಹೊರಡಲಿದ್ದು, ಇದೇ ಸಂದರ್ಭದಲ್ಲಿ ಬಸರೀಕಟ್ಟೆ, ಬಸ್ಕಲ್, ಸಿರವಾಸೆ, ಆಲ್ದೂರು ಹಾಗೂ ಶಾಂತವೇರಿಗಳಿಂದ ಉಪ ಜಾಥಾಗಳು ಹೊರಡಲಿದ್ದು, ಫೆ.26ರಂದು ಈ ಜಾಥಾಗಳು ಜಿಲ್ಲಾ ಕೇಂದ್ರವನ್ನು ತಲುಪಲಿದ್ದು, ಅಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಎಚ್.ಎಂ. ರೇಣುಕಾರಾಧ್ಯ ಸುದ್ದಿಗೋಷ್ಠಿಯಲ್ಲಿ ಗುರುವಾರ ತಿಳಿಸಿದರು.
ದಶಕಗಳ ಬೇಡಿಕೆ: ನಿವೇಶನಕ್ಕಾಗಿ ಆಗ್ರಹ, ಇದು, ಬಡಜನರ ಹಲವು ದಶಕಗಳ ಬೇಡಿಕೆ. ಆದರೆ, ಅಧಿಕಾರಿಗಳ ಹಣದ ವ್ಯಾಮೋಹ, ಸರ್ಕಾರಗಳ ಅಸಡ್ಡೆ, ರಾಜಕಾರಣಿಗಳ ರಾಜಕೀಯ ಲೆಕ್ಕಾಚಾರದ ಪರಿಣಾಮ ಅಂದಿನಿಂದ ಇಂದಿನವರೆಗೂ ಬಡವರ ಬದುಕು ಬೀದಿ ಬದಿಯಿಂದ ಜೋಪಡಿಗಳು, ಬಾಡಿಗೆ, ಗುಡಿಸಲು ಕೂಲಿ ಲೈನುಗಳು, ಕೊಳಗೇರಿಯ ಅಡ್ಡೆಗಳಲ್ಲೇ ಕಾಲ ಕಳೆಯುತ್ತಿದ್ದಾರೆ. ಈ ಸಮಸ್ಯೆಯನ್ನು ಕಣ್ಣಿಗೆ ಕಂಡರೂ ಕಾಣದಂತೆ ಅಧಿಕಾರಿಗಳು ವರ್ತಿಸುತ್ತಿರುವುದು ಪ್ರಜಾತಂತ್ರ ವ್ಯವಸ್ಥೆಗೊಂದು ಕಪ್ಪು ಚುಕ್ಕೆಯಂತಾಗಿದೆ ಎಂದರು.
ಗ್ರಾಮಾಂತರ ಪ್ರದೇಶಗಳಲ್ಲಿ ನಿವೇಶನ ಖರೀದಿ ಮಾಡಬೇಕಾದರೆ 4 ರಿಂದ 5 ಲಕ್ಷ, ನಗರ ಪ್ರದೇಶಗಳಲ್ಲಿ ಖಾಲಿ ನಿವೇಶನ ಖರೀದಿ ಮಾಡಬೇಕಾದರೆ 10 ರಿಂದ 15 ಲಕ್ಷ ಬೇಕು. ಆದರೆ, ಬಡವರಿಗೆ ಇಷ್ಟು ಹಣವನ್ನು ನೀಡಲು ಸಾಧ್ಯವಿಲ್ಲ. ಹಣವಂತರು, ಭೂ ಖರೀದಿಯಲ್ಲಿ ತೊಡಗಿದ್ದಾರೆ. ಇದೇ ಪರಿಸ್ಥಿತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಸರ್ಕಾರಿ ಭೂಮಿ ಉದ್ಯಮಿಗಳು, ವಿದೇಶಿ ಕಂಪನಿಗಳು ಹಾಗೂ ಎಸ್ಟೇಟ್ ಮಾಲೀಕರ ಪಾಲಾಗಲಿದೆ ಎಂದು ಹೇಳಿದರು.
14 ಸಾವಿರ ಅರ್ಜಿಗಳು: ನಿವೇಶನಕ್ಕೆ ಕೋರಿ ಚಿಕ್ಕಮಗಳೂರು ನಗರಸಭಾ ವ್ಯಾಪ್ತಿಯಲ್ಲಿ ಸುಮಾರು 12 ರಿಂದ 14 ಸಾವಿರ ಅರ್ಜಿಗಳು ಬಂದಿದೆ. 2003ರಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿ 7500 ಅರ್ಜಿಗಳು ನಿವೇಶನ ಕೋರಿ ಬಂದಿವೆ. ಜಿಲ್ಲೆಯಲ್ಲಿ ಬಹಳಷ್ಟು ಕುಟುಂಬಗಳಿಗೆ ಸ್ವಂತ ನಿವೇಶನಗಳಿಲ್ಲ ಎಂದು ತಿಳಿಸಿದರು.
ಸಿಪಿಐ ಮುಖಂಡರಾದ ರಾಧಾ ಸುಂದರೇಶ್ ಮಾತನಾಡಿಸಿದರು. ಸಿಪಿಐ ಮುಖಂಡರಾದ ಜಿ. ರಘು, ವಿಜಯಕುಮಾರ್ ಉಪಸ್ಥಿತರಿದ್ದರು.