ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಅರಣ್ಯ ಇಲಾಖೆ ಕ್ರಮಕ್ಕೂ, ಕೋರ್ಟಲ್ಲಿ ನನ್ನ ಅರ್ಜಿಗೂ ಯಾವ ಸಂಬಂಧವಿಲ್ಲ

Vishwanath S
Updated On : 14 Feb 2014, 1:57 am

ಕ.ಪ್ರ.ವಾರ್ತೆ, ನರಸಿಂಹರಾಜಪುರ   ಫೆ.13
ಅರಣ್ಯ ಇಲಾಖೆಯು ಸಣ್ಣ ರೈತರ ಒತ್ತುವರಿ ಭೂಮಿ ತೆರವು ಮಾಡುತ್ತಿರುವುದಕ್ಕೂ ತಾವು ಹೈಕೋರ್ಟಿನಲ್ಲಿ ಒತ್ತುವರಿಗೆ ಸಂಬಂಧಪಟ್ಟಂತೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೂ ಯಾವುದೇ ಸಂಬಂಧವಿಲ್ಲ ಎಂದು ಸಮಾಜ ಪರಿವರ್ತನ ಸಂಸ್ಥೆಯ ಅಧ್ಯಕ್ಷ ಹಿರೇಮಠ್ ಸ್ಪಷ್ಟನೆ ನೀಡಿದರು.
ತಾಲೂಕಿನ ಹೊನ್ನೇಕೊಡಿಗೆ ಗ್ರಾಮ ಪಂಚಾಯ್ತಿಯ ಸಾಲೂರು ಗ್ರಾಮಕ್ಕೆ ಗುರುವಾರ ಭೇಟಿ ನೀಡಿ ಅಲ್ಲಿ ದಾಮೋದರ ಆಚಾರ್ ಮತ್ತು ಗೋವಿಂದ ಆಚಾರ್ ಎಂಬವರ ಮನೆಯ ಅಂಗಳದಲ್ಲಿ ಅರಣ್ಯ ಇಲಾಖೆಯವರು ಗಡಿ ಟ್ರಂಚ್ ತೆಗೆಸಿರುವುದನ್ನು ವೀಕ್ಷಿಸಿದ ನಂತರ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಕೆಲವು ತಿಂಗಳ ಹಿಂದೆ ನರಸಿಂಹರಾಜಪುರ ತಾಲೂಕಿನ ಸಾಲೂರು ಗ್ರಾಮದ ಬಿಳಾಲುಕೊಪ್ಪ ಎಂಬಲ್ಲಿ 15 ರಿಂದ 20 ಎಕರೆ ಅರಣ್ಯವನ್ನು ಮನು ಎಂಬವರು ಒತ್ತುವರಿ ಮಾಡಿ ಅರಣ್ಯ ನಾಶ ಮಾಡುತ್ತಿದ್ದಾರೆ ಎಂದು ಸ್ಥಳೀಯರಾದ ರಾಘವೇಂದ್ರ ದೂರು ನೀಡಿದ್ದರು.
ದೂರಿನ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೆ. ಆ ಜಾಗದಲ್ಲಿ ಒತ್ತುವರಿ, ಅರಣ್ಯ ನಾಶ ಸತ್ಯವಾಗಿತ್ತು. ಈ ಬಗ್ಗೆ ಕ್ರಮ ತೆಗೆದುಕೊಳ್ಳಲು ಅರಣ್ಯ ಜಾಗ್ರತಾ ದಳಕ್ಕೆ ಹಾಗೂ ಕೊಪ್ಪ ಅರಣ್ಯ ಉಪ ಸಂರಕ್ಷಣಾ ಅಧಿಕಾರಿಗಳಿಗೆ ದೂರು ನೀಡಿದ್ದೆ. ಸೆ.8ರಂದು ಅರಣ್ಯ ಇಲಾಖೆಯ ಅಧಿಕಾರಿಗಳ ಆಹ್ವಾನದಂತೆ ಸಾಲೂರು ಗ್ರಾಮಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಭೇಟಿ ನೀಡಿದಾಗ ಒತ್ತುವರಿ ಜಾಗ ತೆರವುಗೊಳಿಸಲಾಗಿತ್ತು. ಅರಣ್ಯ ಕಾಯ್ದೆ ಪ್ರಕಾರ ವಿಚಾರಣೆ ನಡೆಸಿ ಮನು ಅವರ ಮೇಲೆ ಸಿವಿಲ್ ಮತ್ತು ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದರು ಎಂದು ವಿವರಿಸಿದರು.
ಹೈಕೋರ್ಟಿಗೆ ಅರ್ಜಿ:  ಸರ್ಕಾರಿ ಭೂಮಿ ಸಂರಕ್ಷಣಾ ಪಡೆಯ ಅಧ್ಯಕ್ಷ ಡಾ.ಬಾಲಸುಬ್ರಮಣ್ಯಂ ಹಾಗೂ ರಾಮಸ್ವಾಮಿ ವರದಿಯ ಆಧಾರದ ಮೇಲೆ 7 ರಿಂದ 8 ತಿಂಗಳು ಶ್ರಮವಹಿಸಿ 1000 ಪುಟಗಳ ವರದಿಯನ್ನು ತಯಾರಿಸಿ ಅರಣ್ಯ ಮತ್ತು ಕಂದಾಯ ಭೂಮಿಯ ಒತ್ತುವರಿ ತೆರವುಗೊಳಿಸುವಂತೆ ಸಮಾಜ ವರಿಪರ್ತನ ಸಂಸ್ಥೆಯಿಂದ ಸುಪ್ರೀಂ ಕೋರ್ಟಿನಲ್ಲಿ ದಾವೆ ಹೂಡಿದ್ದೆವು. ಸುಪ್ರೀಂಕೋರ್ಟ್ ಈ ವಿಚಾರವು ಕರ್ನಾಟಕ ರಾಜ್ಯದಲ್ಲಿ ಬರುವುದರಿಂದ ಹೈಕೋರ್ಟಿಗೆ ಅರ್ಜಿ ಸಲ್ಲಿಸುವಂತೆ ನಿರ್ದೇಶನ ನೀಡಿತು.  
2013ರ ಜ.30ರಂದು ಹೈಕೋರ್ಟಿನಲ್ಲಿ ನಾನು ಹಾಗೂ ಡಾ.ಬಾಲಸುಬ್ರಮಣ್ಯಂ ಅವರು ಸೇರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದೇವೆ. ಈ ಅರ್ಜಿಯಲ್ಲಿ ತಮ್ಮ ಬದುಕಿಗಾಗಿ 10 ಎಕರೆಗಿಂತ ಕಡಿಮೆ ಒತ್ತುವರಿ ಮಾಡಿರುವ ರೈತರನ್ನು ತೆರವು ಗೊಳಿಸಬಾರದು. ದುರಾಸೆಯಿಂದ 10 ಎಕರೆಗಿಂತ ಹೆಚ್ಚು ಒತ್ತುವರಿ ಮಾಡಿರುವ ಭೂಮಿ ತೆರವುಗೊಳಿಸಬೇಕು ಎಂದು ಒತ್ತಾಯಿಸಿದ್ದೇವೆ. ಕೆಲವರು ದುರಾಸೆಯಿಂದ 30 ರಿಂದ 100 ಎಕರೆಯಷ್ಟು ಒತ್ತುವರಿ ಮಾಡಿಕೊಂಡಿದ್ದಾರೆ. ಅವರು ತಮ್ಮ ಒತ್ತುವರಿ ಭೂಮಿ ಉಳಿಸಿಕೊಳ್ಳಲು ಬಡ ರೈತರನ್ನು ಎತ್ತಿಕಟ್ಟಿ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ ಟೀಕಿಸಿದರು.
ನಾನು ಬಡವರ ಪರವಾಗಿದ್ದೇನೆ:  10 ಎಕರೆಗಿಂತ ಕಡಿಮೆ ಇರುವ ಬದುಕಿಗಾಗಿ ಒತ್ತುವರಿ ಮಾಡಿಕೊಂಡಿರುವ ಬಡ ರೈತರ ಜಮೀನನ್ನು ತೆರವುಗೊಳಿಸಲು ಹೊರಟರೆ ನಾನು ಸಹ ರೈತರ ಪರವಾಗಿ ಹೋರಾಟಕ್ಕೆ ನಿಲ್ಲುತ್ತೇನೆ. ತಮ್ಮ ಜೀವನಕ್ಕಾಗಿ ಸಣ್ಣ ರೈತರು ಮಾಡಿರುವ ಒತ್ತುವರಿ ಸಮಸ್ಯೆಗೆ ಶಾಶ್ವತ ಪರಿಹಾರ ಆಗಬೇಕಾಗಿದೆ. ಸಣ್ಣ ರೈತರು ಸಂಘಟಿತರಾಗಿ ಹೋರಾಟ ಮಾಡಬೇಕಾಗಿದೆ. 2006 ರಲ್ಲಿ ಅರಣ್ಯ ಕಾಯ್ದೆ ಬಂದಿದ್ದು ಇದರಲ್ಲಿ ಮೂರು ತಲೆಮಾರು ಅರಣ್ಯದಲ್ಲಿ ವಾಸ ಮಾಡಿರುವ ಬುಡಕಟ್ಟು ಜನಾಂಗದವರಿಗೆ, ಪರಿಶಿಷ್ಚ ವರ್ಗದವರಿಗೆ ಭೂಮಿ ಮಂಜೂರು ಮಾಡಲು ಹಕ್ಕಿದೆ. ಹೊನ್ನೇಕೊಡಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಮುಳಗಡೆ ಪ್ರದೇಶದಿಂದ ಬಂದವರೇ ಹೆಚ್ಚಾಗಿದ್ದಾರೆ. ಅವರನ್ನು ಮಾನವೀಯತೆಯಿಂದ ಕಾಣಬೇಕಾಗಿದೆ. ಸಣ್ಣ ಒತ್ತುವರಿದಾರರ ಸಮಸ್ಯೆಗಳ ಪರಿಹಾರಕ್ಕೆ ಶಾಸಕರು, ಜನಪ್ರತಿನಿಧಿಗಳು ಗಮನಹರಿಸಬೇಕು.ಅದು ಅವರ ಕರ್ತವ್ಯ ಎಂದರು.
ವಿಕಸನ ಸಂಸ್ಥೆಯ ವರ್ಗೀಸ್, ಹಂಚಿನಮನೆ ರಾಘವೇಂದ್ರ, ಹೊನ್ನೇಕೊಡಿಗೆ ಎಂ.ಎಂ. ಜೋಸ್, ಪ್ರಶಾಂತ್, ಬಿ.ಎಚ್. ಕೈಮರ ವಾಸುದೇವ ಕೋಟ್ಯಾನ್ ಉಪಸ್ಥಿತರಿದ್ದರು.
ನನಗೆ ಹೆದರಿಕೆಯಿಲ್ಲ
ಭೂಗಳ್ಳರ, ಭ್ರಷ್ಟರ ವಿರುದ್ಧ ನಾನು ಹೋರಾಟ ಮಾಡುತ್ತಿರುವುದರಿಂದ ನನಗೆ ವಿರೋಧಿಗಳು ಹುಟ್ಟಿಕೊಂಡಿದ್ದಾರೆ. ನಾನು ಭದ್ರತೆಗೆ ಪೊಲೀಸರ ರಕ್ಷಣೆ ಕೇಳಿಲ್ಲ. ಮುಂದಿನ ದಿನಗಳಲ್ಲಿ ಜನ ಸಂಗ್ರಾಮ ಪರಿಷತ್ ವತಿಯಿಂದ ಉಳುವುವನೇ ಒಡೆಯ ಎಂಬ ತತ್ವದ ಮೇಲೆ ಮತ್ತೆ ಹೋರಾಟ ಪ್ರಾರಂಭಿಸಲಿದೆ. ಕೇಂದ್ರ ಸರ್ಕಾರವು ಕೈಗಾರಿಕೆಗೆ 5 ಲಕ್ಷ ಕೋಟಿ ರುಪಾಯಿ ಸಹಾಯಧನ ನೀಡುತ್ತಿದೆ. ಇದನ್ನು ರೈತರು, ಕೂಲಿ ಕಾರ್ಮಿಕರಿಗೆ ನೀಡಿ ಎಂದು ಒತ್ತಾಯಿಸಲಿದೆ.  ಭಾರತದ ಸಂವಿಧಾನವು ಅತ್ಯುತ್ತಮವಾಗಿದೆ. ಇದನ್ನು ಸದ್ಪಳಕೆ ಮಾಡಿಕೊಳ್ಳಬೇಕು ಎಂಬುದು ಜನ ಸಂಗ್ರಾಮ ಪರಿಷತ್‌ನ ಸದಾಶಯ ಎಂದು ಎಸ್.ಆರ್. ಹಿರೇಮಠ್ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement