ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಒಕ್ಕಲೆದ್ದರೆ ಕುಟುಂಬ ಬೀದಿಗೆ

Vishwanath S
Updated On : 14 Feb 2014, 1:58 am

ಕ.ಪ್ರ.ವಾರ್ತೆ ಟಿ ಚಿಕ್ಕಮಗಳೂರು ಟಿ ಫೆ.13
ಕಳಸದ ಇನಾಂ ಭೂಮಿಯಲ್ಲಿ ಒತ್ತುವರಿ ಮಾಡಿಕೊಂಡಿರುವ ಸಣ್ಣ ಹಾಗೂ ಅತಿ ಸಣ್ಣ ರೈತರನ್ನು ಅಲ್ಲೇ ಉಳಿಸಿಕೊಳ್ಳಲು ನ್ಯಾಯಾಲಯಕ್ಕೆ ಪ್ರಮಾಣಪತ್ರವನ್ನು ಸಲ್ಲಿಸಬೇಕೆಂದು ಮೂಡಿಗೆರೆ ಶಾಸಕ ಬಿ.ಬಿ. ನಿಂಗಯ್ಯ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಇನಾಂ ಭೂಮಿಯಲ್ಲಿ ವಾಸವಾಗಿರುವ ಜನರನ್ನು ಒಕ್ಕಲೆಬ್ಬಿಸಿದರೆ ಬಹಳಷ್ಟು ಬಡ ಕುಟುಂಬಗಳು ಬೀದಿಗೆ ಬರಲಿವೆ. ಈ ವಾಸ್ತವಿಕತೆಯನ್ನು ರಾಜ್ಯ ಸರ್ಕಾರ ನ್ಯಾಯಾಲಯಕ್ಕೆ ಮನವರಿಕೆ ಮಾಡಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಗುರುವಾರ ಒತ್ತಾಯಿಸಿದರು.
ಒತ್ತುವರಿಯಾಗಿದ್ದಲ್ಲ:  ಕಳಸೇಶ್ವರ ದೇವಾಲಯಕ್ಕೆ 1928ರಲ್ಲಿ 14 ಸಾವಿರ ಎಕರೆ ಇನಾಂ ಭೂಮಿ ನೀಡಲಾಗಿದೆ. ಇದರಲ್ಲಿ ಕೆಲವು ಪ್ರಕರಣಗಳಲ್ಲಿ ಜಿಲ್ಲಾಡಳಿತ ಹಕ್ಕುಪತ್ರ ನೀಡಿದೆ. ಇನ್ನುಳಿದಂತೆ 1800 ಎಕರೆ ಮೀಸಲು ಅರಣ್ಯ ಭೂಮಿ ಒತ್ತುವರಿಯಾಗಿದೆ. ಇದು, ಇತ್ತೀಚೆಗೆ ಒತ್ತುವರಿಯಾಗಿದ್ದಲ್ಲ, ತಲೆತಲಾಂತರದಿಂದ ರೈತರು ಈ ಭೂಮಿಯಲ್ಲಿ ಸಾಗುವಳಿ ಮಾಡಿಕೊಂಡು ಬರುತ್ತಿದ್ದಾರೆ ಎಂದರು.
ಇದು, ಮೀಸಲು ಅರಣ್ಯ ಎಂದು ನ್ಯಾಯಾಲಯ 2005 ರಲ್ಲಿ ಹೇಳಿತ್ತು. ಆಗಲೇ ಸರ್ಕಾರ ಸಮರ್ಥವಾಗಿ ತನ್ನ ವಾದವನ್ನು ಮಂಡಿಸಿದ್ದರೆ, ಇನಾಂ ಭೂಮಿ ಸಮಸ್ಯೆ ಈ ಮಟ್ಟದಲ್ಲಿ ತಲೆದೋರುತ್ತಿರಲಿಲ್ಲ. ಇಲ್ಲಿನ ಜನರನ್ನು ಉಳಿಸಿಕೊಳ್ಳಲು ಹಲವು ದಾರಿಗಳಿವೆ. ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಜೆಡಿಎಸ್ ನಾಯಕರಾದ ಎಚ್.ಡಿ. ಕುಮಾರಸ್ವಾಮಿ ಅವರು ಪತ್ರದ ಮುಖೇನ ತಿಳಿಸಿದ್ದಾರೆ. ಜತೆಗೆ ಸದನದಲ್ಲಿ ಈ ಕುರಿತು ಸರ್ಕಾರದ ಗಮನ ಸೆಳೆಯಲಾಗಿದೆ ಎಂದರು.
ಕೋರ್ಟ್‌ಗೆ ಪ್ರಮಾಣಪತ್ರ:  ಹೊಟ್ಟೆಪಾಡಿಗಾಗಿ 2-3 ಎಕರೆ ಒತ್ತುವರಿ ಮಾಡಿಕೊಂಡಿರುವವರನ್ನು ಉಳಿಸಿಕೊಳ್ಳಲು ಸರ್ಕಾರ ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಬೇಕು. ಈ ಸಂಬಂಧ ಗ್ರಾಮ ಅರಣ್ಯ ಸಮಿತಿಯನ್ನು ರಚನೆ ಮಾಡಿ ಕೃಷಿ ಭೂಮಿಗೆ ಹಕ್ಕುಪತ್ರ ನೀಡಬೇಕು. ಕುದುರೆಮುಖ ಅದಿರು ಕಂಪನಿಗೆ ನೀಡಲಾಗಿದ್ದ ಜಾಗ ಜಿಲ್ಲಾಡಳಿತಕ್ಕೆ ಹಸ್ತಾಂತರವಾಗಿದೆ. ಇನಾಂ ಭೂಮಿಯಲ್ಲಿರುವ ಜನರನ್ನು ಅಲ್ಲೇ ಉಳಿಸಿಕೊಂಡು, ಇಲ್ಲಿನ ಭೂಮಿಗೆ ಪರ್ಯಾಯವಾಗಿ ಕುದುರೆಮುಖ ಕಂಪನಿಯಿಂದ ತೆಗೆದುಕೊಂಡಿರುವ ಜಾಗವನ್ನು ಅರಣ್ಯ ಇಲಾಖೆಗೆ ನೀಡಬೇಕು. ಈ ಕುರಿತು ಸರ್ಕಾರ ನಿರ್ಣಯ ಕೈಗೊಂಡು ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಬೇಕು ಎಂದು ಆಗ್ರಹಿಸಿದರು.
ಸಕ್ರಮಗೊಳಿಸಿ:  ರಾಜ್ಯದಲ್ಲಿ ಸುಮಾರು 13 ಲಕ್ಷ ಎಕರೆ ಕಂದಾಯ ಹಾಗೂ ಅರಣ್ಯ ಭೂಮಿ ಒತ್ತುವರಿಯಾಗಿದೆ ಎಂದು ಡಾ. ಬಾಲಸುಬ್ರಹ್ಮಣ್ಯಂ ಕಮಿಟಿ ರಾಜ್ಯ ಸರ್ಕಾರಕ್ಕೆ ವರದಿ ನೀಡಿದ್ದಾರೆ. ಒತ್ತುವರಿದಾರರಲ್ಲಿ ಶೇ.75 ರಿಂದ 80ರಷ್ಟು ಸಣ್ಣ ಹಾಗೂ ಅತಿ ಸಣ್ಣ ರೈತರಿದ್ದಾರೆ. ಅವರು ಬದುಕಿಗಾಗಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಅವರು ಒತ್ತುವರಿ ಮಾಡಿಕೊಂಡಿರುವ ಭೂಮಿ ಸಕ್ರಮಗೊಳಿಸಬೇಕೆಂದು ಒತ್ತಾಯಿಸಿದರು.
ಸರ್ಕಾರ ಸ್ಪಂದಿಸಿಲ್ಲ:  ಇನಾಂ ಭೂಮಿ ತೆರವು ವಿವಾದ ಅಲ್ಲಿನ ಜನರಲ್ಲಿ ಆತಂಕ ಮೂಡಿಸಿದೆ. ಸಾವಿರಾರೂ ಮಂದಿ ಬೀದಿಗಳಿದು ಹೋರಾಟ ಮಾಡಿದ್ದಾರೆ. ಸದ್ಯ ಇದಕ್ಕೆ ತಾತ್ಕಾಲಿಕವಾಗಿ ತಡೆಯಾಗಿದೆ. ಇಲ್ಲಿನ ಸಮಸ್ಯೆ ಇಷ್ಟೆಲ್ಲಾ ಗಂಭೀರವಾಗಿದ್ದರೂ ಕೂಡ ಜಿಲ್ಲಾ ಉಸ್ತುವಾರಿ ಸಚಿವರು ಕಳಸಕ್ಕೆ ಒಮ್ಮೆಯೂ ಭೇಟಿ ನೀಡಿಲ್ಲ, ಜನರ ಸಮಸ್ಯೆಗಳನ್ನು ಆಲಿಸಿಲ್ಲ. ಈ ಸಮಸ್ಯೆ ಎದುರಾಗಿ ಬಹಳಷ್ಟು ದಿನಗಳು ಕಳೆದಿವೆ. ಆದರೆ, ರಾಜ್ಯ ಸರ್ಕಾರ ಈವರೆಗೆ ಸ್ಪಂದಿಸಿಲ್ಲ, ಜನರ ಪರ ನಿಲುವು ತಾಳಿಲ್ಲ, ಇದೊಂದು ಬೇಜವಾಬ್ದಾರಿ ಸರ್ಕಾರ ಎಂದ ನಿಂಗಯ್ಯ, ಇನಾಂ ಭೂಮಿಗೆ ಸಂಬಂಧಿಸಿದಂತೆ ಸದನದಲ್ಲಿ ನಿಲುವಳಿ ಸೂಚನೆ ಮಂಡಿಸಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜಪ್ಪ, ಪ್ರಧಾನ ಕಾರ್ಯದರ್ಶಿ ಚಂದ್ರಪ್ಪ ಹಾಗೂ ಹೊಲದಗದ್ದೆ ಗಿರೀಶ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement