ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಲೋಕಸಭಾ ಚುನಾವಣೆಗೆ ಜಿಲ್ಲಾಡಳಿತ ಸಿದ್ಧತೆ

Vishwanath S
Updated On : 14 Feb 2014, 1:58 am

ಚಿಕ್ಕಮಗಳೂರು: ಮುಂಬರಲಿರುವ ಲೋಕಸಭೆಯ ಸಾರ್ವತ್ರಿಕ ಚುನಾವಣೆಯನ್ನು ನಡೆಸಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ಸಂಬಂಧ ಜಿಲ್ಲಾಧಿಕಾರಿ ಬಿ.ಎಸ್. ಶೇಖರಪ್ಪ ಅವರ ಅಧ್ಯಕ್ಷತೆಯಲ್ಲಿ ಡಿಸಿ ಕಚೇರಿ ಸಭಾಂಗಣದಲ್ಲಿ ಗುರುವಾರ ಅಧಿಕಾರಿಗಳ ಸಭೆ ನಡೆಯಿತು.
ಚುನಾವಣಾ ಕರ್ತವ್ಯಕ್ಕೆ ನಿಯೋಜನೆ ಮಾಡುವ ಅಧಿಕಾರಿಗಳ ಹಾಗೂ ಸರ್ಕಾರಿ ನೌಕರರ ಮಾಹಿತಿಯನ್ನು ಮಾನವ ಸಂಪನ್ಮೂಲ ನಿರ್ವಹಣೆಯ ಘಟಕದಿಂದ ಸಂಗ್ರಹಿಸಿ ಎಪಿಕ್ ಸಂಖ್ಯೆಯೊಂದಿಗೆ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದೇ ವೇಳೆಯಲ್ಲಿ ಮತದಾರರ ಪಟ್ಟಿಗೆ ಹೊಸದಾಗಿ ಹೆಸರು ಸೇರ್ಪಡೆ ಮಾಡಿರುವ ಮತದಾರರಿಗೆ ಗುರುತಿನ ಚೀಟಿ ವಿತರಣೆ ಮಾಡಿರುವ ಬಗ್ಗೆ ತಹಸೀಲ್ದಾರ್‌ಗಳಿಂದ ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು, ಬಾಕಿ ಉಳಿದಿರುವ ಮತದಾರರಿಗೆ ಶೀಘ್ರದಲ್ಲೇ ಗುರುತಿನ ಚೀಟಿ ವಿತರಣೆ ಮಾಡಬೇಕು ಎಂದರು.
ಮತದಾನ ನಡೆಯುವ ಕೇಂದ್ರಗಳಲ್ಲಿ ವಿದ್ಯುಚ್ಛಕ್ತಿ , ಪೀಠೋಪಕರಣಗಳು ಹಾಗೂ ಶೌಚಾಲಯಗಳನ್ನೊಳಗೊಂಡಂತೆ ಇತರೆ ಅಗತ್ಯ ಮೂಲಭೂತ ಸೌಕರ್ಯಗಳ ಬಗ್ಗೆ ಹಾಗೂ ಕಟ್ಟಡದ ಸ್ಥಿತಿಗತಿಗಳ ಬಗ್ಗೆ ಪರಿಶೀಲಿಸಿ ವರದಿ ನೀಡಬೇಕು. ಮತಯಂತ್ರ ಇನ್ನಿತರ ಭದ್ರತೆ ಬಗ್ಗ್ಗೆ ಪೊಲೀಸ್ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಬೇಕು ಎಂದರು.
ಸಭೆಯಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪಿ.ಬಿ. ಕರುಣಾಕರ್, ಅಪರ ಜಿಲ್ಲಾಧಿಕಾರಿ ಕೆ.ಪಿ. ಹೊನಕೇರಿ, ಉಪ ವಿಭಾಗಾಧಿಕಾರಿಗಳಾದ ಕೆ. ಚೆನ್ನಬಸಪ್ಪ, ಅನುರಾಧ, ಎಲ್ಲಾ ತಾಲೂಕಿನ ತಹಸೀಲ್ದಾರ್‌ಗಳು ಹಾಗೂ ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.
ನಿಷ್ಠಾವಂತರ ವರ್ಗಾವಣೆಗೆ ವಿರೋಧ
ಚಿಕ್ಕಮಗಳೂರು: ಅರಣ್ಯ ಇಲಾಖೆಯಲ್ಲಿ ನಿಷ್ಠೆಯಿಂದ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ಅನಗತ್ಯವಾಗಿ ಕೆಲವರು ತೇಜೋವಧೆ ಮಾಡುತ್ತಿರುವುದನ್ನು ಖಂಡಿಸಿ ವಿವಿಧ ಸಂಘಟನೆಗಳ ಮುಖಂಡರು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಜಿ.ಎಸ್.ಯಾದವ್‌ರಿಗೆ ಮನವಿ ಸಲ್ಲಿಸಿದರು.
ಕನ್ನಡಸೇನೆ, ಕಾಫಿ ಬೆಳೆಗಾರರ ಸಂಘ, ಮರದ ವ್ಯಾಪಾರಿಗಳ ಸಂಘ ಸೇರಿದಂತೆ ಚಿಕ್ಕಮಗಳೂರು ಮತ್ತು ಮೂಡಿಗೆರೆಯ ವಿವಿಧ ಸಂಘಟನೆ ಮುಖಂಡರು ಮತ್ತು ಕಾರ್ಯಕರ್ತರು ಗುರುವಾರ ಅರಣ್ಯ ಇಲಾಖೆ ಕಚೇರಿಗೆ ತೆರಳಿ ಅನಗತ್ಯ ವರ್ಗಾವಣೆ ಹುನ್ನಾರಕ್ಕೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿದರು.
ಕನ್ನಡಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ ಮಾತನಾಡಿ, ಅರಣ್ಯ ಇಲಾಖೆಯಲ್ಲಿ ಅಧೀಕ್ಷರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಹೆಚ್.ವಿ. ರಾಜೇಶ್ ಜನಪರ ಕಾಳಜಿ ಕೆಲಸ ಮಾಡುತ್ತಿದ್ದಾರೆ. ಇದರೊಂದಿಗೆ ನೌಕರರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರಿಂದ ನೌಕರರ ಸಂಘಕ್ಕೆ ಚುನಾಯಿತರಾಗಿದ್ದಾರೆ. ಇಂತಹ ವ್ಯಕ್ತಿಯ ಏಳಿಗೆ ಸಹಿಸಲಾಗದೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಪ್ರಾಮಾಣಿಕ ಅಧಿಕಾರಿಗಳ ವಿರುದ್ದ ಅಪಪ್ರಚಾರಕ್ಕೆ ಮುಂದಾಗಿದ್ದಾರೆ ಎಂದು ದೂರಿದರು.
ಭ್ರಷ್ಟ ಅಧಿಕಾರಿಗಳ ವಿರುದ್ಧ ಸರ್ಕಾರ ಅಥವಾ ಉನ್ನತ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡರೂ ಸಂಪೂರ್ಣ್ಣಸಹಕಾರ ನೀಡುತ್ತೇವೆ. ಆದರೆ, ದುಷ್ಟ ಶಕ್ತಿಗಳ ಮಾತಿಗೆ ಮಣೆಹಾಕಿ ಯಾವುದೇ ಪ್ರಾಮಾಣಿಕ ಅಧಿಕಾರಿಗಳನ್ನು ವರ್ಗಾವಣೆ ಮಾಡಲು ಮುಂದಾದರೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕಾಫಿ ಬೆಳೆಗಾರರಾದ ಮೂಡಿಗೆರೆ ಸುರೇಶ್, ಇಬ್ರಾಹಿಂ, ಯೂಸೂಫ್, ರಮೇಶ್, ಸತ್ಯಪಾಲ್, ಕನ್ನಡಸೇನೆ ನಗರಾಧ್ಯಕ್ಷ ಪ್ರವೀಣ್, ನೀಲೇಶ್, ರಾಜು, ದೇವರಾಜು, ಮರದ ವ್ಯಾಪಾರಿಗಳ ಸಂಘದ ರುದ್ರೇಗೌಡ, ರಂಗಸ್ವಾಮಿ, ಮಂಜುನಾಥ್ ಹಾಜರಿದ್ದರು.
ನೀರಿಗೆ ಹಾಹಾಕಾರ: ಮನವಿ
ನರಸಿಂಹರಾಜಪುರ:  ಕಾನೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಟ್ಟಿನಮನೆ, ದಾವಣ, ಜೋಗಿಮಕ್ಕಿ, ಕಾನೂರು, ಹಂತುವಾನಿ ಮುಂತಾದ ಗ್ರಾಮಗಳಿಗೆ ವಿದ್ಯುತ್ ಸಮಸ್ಯೆ ತೀವ್ರವಾಗಿದೆ. ಗ್ರಾಮ ಪಂಚಾಯ್ತಿಯ ಕುಡಿಯುವ ನೀರಿನ ಯೋಜನೆಗೂ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಪದೇ ಪದೇ ಕರೆಂಟು ಹೋಗುತ್ತಿದೆ. ಓಲ್ಜೇಜ್ ಸಹ ಇರುವುದಿಲ್ಲ. ವಿದ್ಯುತ್ ಕಡಿತ ಯಾವಾಗ ಎಂಬುದೇ ತಿಳಿಯುತ್ತಿಲ್ಲ. ಕಾನೂರು ಗ್ರಾಮ ಪಂಚಾಯ್ತಿಯ 6ಕ್ಕೂ ಹೆಚ್ಚು ಕುಡಿಯುವ ನೀರಿನ ಯೋಜನೆಗೂ ಅನಿಯಮಿತ ವಿದ್ಯುತ್ ಕಡಿತದಿಂದ ತೊಂದರೆ ಆಗುತ್ತಿದೆ ಎಂದು ದೂರಿದ್ದಾರೆ.
ವಿದ್ಯುತ್ ಮಾರ್ಗ ಬದಲಾಯಿಸಿ:  ಪ್ರಸ್ತುತ ಕಾನೂರು ಗ್ರಾಮ ಪಂಚಾಯ್ತಿಗೆ ಕೊರಡಹಿತ್ತಲು ವಿದ್ಯುತ್ ವಿತರಣಾ ಕೇಂದ್ರದಿಂದ ವಿದ್ಯುತ್ ಸರಬರಾಜಾಗುತ್ತಿದೆ. ಕೊರಡಹಿತ್ತಲು ವಿದ್ಯುತ್ ವಿತರಣಾ ಕೇಂದ್ರವು ಹಳೆಯದಾಗಿದೆ. ಆ ಕೇಂದ್ರದಲ್ಲಿ ಬರುವ ವಿದ್ಯುತ್ ಮಾರ್ಗವು ಕಾಫಿ ತೋಟಗಳ ಮೂಲಕ ಹಾದುಬರಲಿದೆ. ಮಳೆಗಾಲದಲ್ಲಿ ಸರಿಯಾಗಿ ವಿದ್ಯುತ್ ಸಂಪರ್ಕ ಇರುವುದಿಲ್ಲ. ವಿತರಣಾ ಕೇಂದ್ರಕ್ಕೆ ಲೋಡಿಂಗ್ ಸಹ ಜಾಸ್ತಿಯಾಗಿದೆ. ಆದ್ದರಿಂದ ಕಾನೂರು ಗ್ರಾಮಕ್ಕೆ ಕೊರಡಹಿತ್ತಲು ವಿದ್ಯುತ್ ವಿತರಣಾ ಕೇಂದ್ರದ ಮಾರ್ಗ ತಪ್ಪಿಸಿ ನರಸಿಂಹರಾಜಪುರ ವಿದ್ಯುತ್ ವಿತರಣಾ ಕೇಂದ್ರಕ್ಕೆ ಸಂಪರ್ಕ ಕಲ್ಪಿಸಬೇಕು ಎಂದು ಕಾನೂರು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಸ್ವಾರ್ಥಕ್ಕೆ ಬಲಿಯಾದ ಪ್ರಕೃತಿ: ನಟೇಶ್
ಬೀರೂರು:  ಪ್ರಕೃತಿಯ ನಿಸ್ವಾರ್ಥ ಸೇವೆಯನ್ನು ಮನುಷ್ಯ ಸ್ವಾರ್ಥ ಸಾಧನೆಗೆ ಬಳಸುತ್ತಿರುವುದು ನೋವಿನ ಸಂಗತಿ ಎಂದು ಮಂಕುತಿಮ್ಮನ ಕಗ್ಗದ ವಿಶೇಷ ವ್ಯಾಖ್ಯಾನಕಾರ ಶಿವಮೊಗ್ಗದ ಕಸ್ತೂರ ಬಾ ಕಾಲೇಜು ಉಪನ್ಯಾಸಕ ಜಿ.ಎಸ್. ನಟೇಶ್ ಹೇಳಿದರು.
ಪಟ್ಟಣದ ರೋಟರಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜೀವನ ಮೌಲ್ಯ ಡಿವಿಜಿಯವರ ಮಂಕುತಿಮ್ಮನ ಕಗ್ಗದ ಸಾರ ಕುರಿತಂತೆ ಉಪನ್ಯಾಸ ನೀಡಿದರು. ಮಾರ್ಗದರ್ಶಕರ ಕೊರತೆಯಿಂದ ಸಮಾಜದ ಸ್ವಾಸ್ಥ ಹದಗೆಡುತ್ತಿದೆ. ಪಾಶ್ಚಿಮಾತ್ಯ ಸಂಸ್ಕೃತಿ ಬೆನ್ನು ಬಿದ್ದಿರುವುದು ನೋವಿನ ಸಂಗತಿ ಎಂದರು.
ಸುಧೀಂದ್ರ ಹೆಬ್ಬಾರ್ ಅವರನ್ನು ಸನ್ಮಾನಿಸಲಾಯಿತು. ರೋಟರಿ ಅಧ್ಯಕ್ಷ ಗೋಪಾಲಕೃಷ್ಣ ಗುಪ್ತ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಸಿ.ವಿ. ನಾಗೇಂದ್ರ, ಖಜಾಂಚಿ ಗಂಗಾಧರ್, ಡಾ. ಅನಂತ ಪದ್ಮನಾಭ, ಡಾ. ಶ್ರೀನಿವಾಸಮೂರ್ತಿ, ಪತ್ರೆ ಸಿ. ಸದಾಶಿವನ್, ಬಿ.ಎನ್. ಕೃಷ್ಣಮೂರ್ತಿ,ಸತ್ಯನಾರಾಯಣ್, ಡಾ. ಕೆ.ಕೆ. ಶ್ರೀರಾಮ್, ಮಾನಸ ಮಹಾಬಲರಾವ್, ಎಸ್. ಮಹೇಶ್ವರಪ್ಪ ಭಾಗವಹಿಸಿದ್ದರು. ಗೋಪಾಲಕೃಷ್ಣ ಸ್ವಾಗತಿಸಿದರು. ನಾಗೇಂದ್ರ ವಂದಿಸಿದರು.
ಹುಲಿ ದಾಳಿಗೆ ಹಸು ಬಲಿ
ಮೂಡಿಗೆರೆ: ತಾಲೂಕಿನ ಮೂಲರಹಳ್ಳಿಯ ಬಳಿ ಹುಲಿ ದಾಳಿಗೆ ಹಸುವೊಂದು ಬಲಿಯಾಗಿರುವ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ. ಗೋಣಿಬೀಡು ಹೋಬಳಿಯ ಕುಂಬರಡಿಗೆ ಸಮೀಪವಿರುವ ಮೂಲರಹಳ್ಳಿಯ ಅಡ್ಡಗದ್ದೆ ಎಂಬಲ್ಲಿ ಕೆ.ಕೆ. ರಾಮಯ್ಯ ಎಂಬವರಿಗೆ ಸೇರಿದ ಹಸು ಮೇಯುತ್ತಿದ್ದಾಗ ಹುಲಿ ದಾಳಿ ನಡೆಸಿ ಕೊಂದು ಹಾಕಿದೆ. ಸ್ಥಳಕ್ಕೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್‌ಬಾಬು ಭೇಟಿ ನೀಡಿ ಪರೀಶೀಲಿಸಿದರು.
ಮಧ್ಯವರ್ತಿಗಳ ಹಾವಳಿ: ಪ್ರತಿಭಟನೆ
ಚಿಕ್ಕಮಗಳೂರು: ಸರ್ಕಾರಿ ಕಚೇರಿಗಳಲ್ಲಿ ನಡೆಯುತ್ತಿರುವ ಮಧ್ಯವರ್ತಿಗಳ ಹಾವಳಿಯನ್ನು ತಡೆಗಟ್ಟಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕೆಂದು ಯುವಶಕ್ತಿ ಮಾನವತಾ ವೇದಿಕೆ ಡಿಸಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿತು.
ವೇದಿಕೆಯ ಅಧ್ಯಕ್ಷ ಸತೀಶ್ ಮಾತನಾಡಿ, ನಗರದ ತಾಲೂಕು ಕಚೇರಿ, ಆಹಾರ ಇಲಾಖೆ, ಆರ್.ಟಿ.ಓ, ಎಪಿಎಂಸಿ, ನಗರಸಭೆ ಸೇರಿದಂತೆ ಸರ್ಕಾರಿ ಕಚೇರಿಗಳಲ್ಲಿ ಮಧ್ಯವರ್ತಗಳ ಹಾವಳಿ ಹೆಚ್ಚಾಗಿದ್ದು, ಕಚೇರಿ ಕೆಲಸ ಕಾರ್ಯಗಳಿಗೆ ಸಾರ್ವಜನಿಕರು ವಾರ, ತಿಂಗಳುಗಟ್ಟಲೇ ಅಲೆಯುವಂತಹ ಪರಿಸ್ಥಿತಿ ಎದುರಾಗಿದೆ ಎಂದರು.
ಉಪಾಧ್ಯಕ್ಷ ರಂಗನಾಥ್, ಕಾರ್ಯದರ್ಶಿ ವಸೀಲ್ ಪಾಷ, ಪದಾಧಿಕಾರಿಗಳಾದ ಬಾನಿ, ಇರ್ಫಾನ್, ಅಂಬಳೆ ರಘು, ತಾರಾನಾಥ್ ದಂಟರಮಕ್ಕಿ ಇತರರಿದ್ದರು.
ವಾಲಿಬಾಲ್: ಮೂಡಿಗೆರೆ ತಂಡಕ್ಕೆ ಬಹುಮಾನ
ಚಿಕ್ಕಮಗಳೂರು: ತಾಲೂಕಿನ ಕೆರೆಮಕ್ಕಿ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಜಿಲ್ಲಾ ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯಲ್ಲಿ ಮೂಡಿಗೆರೆ ತಂಡ ಪ್ರಥಮ, ಮತ್ತು ಮಾಗುಂಡಿ ತಂಡ ದ್ವಿತೀಯ ಸ್ಥಾನ ಗಳಿಸಿದೆ.
ಗ್ರಾಮಸ್ಥರ ಸಹಕಾರದಲ್ಲಿ ಕೆರೆಮಕ್ಕಿ ಆಟದ ಮೈದಾನದಲ್ಲಿ ಆಯೋಜಿಸಿದ್ದ ಪಂದ್ಯಾವಳಿಯಲ್ಲಿ ಮೂಡಿಗೆರೆ, ಮಾಗುಂಡಿ, ಚಿಕ್ಕಮಗಳೂರು, ಕೆರೆಮಕ್ಕಿ, ಧರಗುಣಿ, ಕೊಪ್ಪ, ಶೃಂಗೇರಿ ಸೇರಿದಂತೆ 12 ತಂಡಗಳು ಭಾಗವಹಿಸಿದ್ದವು. ಟಿಟಿ ಅಂಕಗಳ ಮಾದರಿಯಲ್ಲಿ ನಡೆದ ಈ ಪಂದ್ಯಾವಳಿ ರಾತ್ರಿ 2 ಗಂಟೆಯವರೆಗೂ ನಡೆದಿದ್ದು, ಪ್ರಥಮ ಮತ್ತು ದ್ವಿತೀಯ ಸ್ಥಾನಕ್ಕಾಗಿ ನಡೆದ ಫೈನಲ್ ಪಂದ್ಯ ವೀಕ್ಷಿಸಲು ಸುತ್ತಮುತ್ತಲ ಗ್ರಾಮದ ಸಹಸ್ರಾರು ಮಂದಿ ಕ್ರೀಡಾಭಿಮಾನಿಗಳು ನೆರೆದು ಆಟಗಾರರಿಗೆ ಪ್ರೋತ್ಸಾಹಿಸಿದರು.
ವಿಜೇತ ತಂಡಗಳಿಗೆ ಪ್ರಥಮ 25 ಸಾವಿರ ನಗದು, ದ್ವಿತೀಯ 15 ಸಾವಿರ ಸೇರಿದಂತೆ ಪಾರಿತೋಷಕಗಳನ್ನು ನೀಡಿ ಗೌರವಿಸಲಾಯಿತು.
ಒಟ್ಟಾರೆ ಪಂದ್ಯಾವಳಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಮೂಡಿಗೆರೆಯ ಸುನೀಲ್ ರವರಿಗೆ ವಿಶೇಷ ಬಹುಮಾನ ನೀಡಿ ಗೌರವಿಸಲಾಯಿತು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೆರೆಮಕ್ಕಿ ಮಹೇಶ್, ಮಾಜಿ ಅಧ್ಯಕ್ಷ ಮಹೇಂದ್ರ, ಮುಖಂಡರಾದ ಶಾಂತೇಗೌಡ, ಮಂಜುನಾಥ್, ಕೃಷ್ಣೇಗೌಡ, ರಮೇಶ್, ತರಬೇತುದಾರೆ ವಿನುತಾ ವಿಜೇತರಿಗೆ ಬಹುಮಾನ ವಿತರಿಸಿದರು.
ಸಹಕಾರಿ ಸಂಘಗಳು ಸಾರ್ವಜನಿಕರ ಜೀವನಾಡಿ: ಶಾಮಣ್ಣ
ಮೂಡಿಗೆರೆ:  ಸಹಕಾರಿ ಸಂಘಗಳು ಸಾರ್ವಜನಿಕರ ಜೀವನಾಡಿಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ತೋಟದೂರು ಟಿ.ಎಸ್. ಶಾಮಣ್ಣ ಹೇಳಿದರು.
ಬಾಳೆಹೊನ್ನೂರು ಅಪೂರ್ವ ಸೌಹಾರ್ದ ಸಹಕಾರಿ ನಿಯಮಿತದ ಕಳಸ ಅಪೂರ್ವ ಸೌಹಾರ್ದ ಸಹಕಾರಿ ನಿಯಮಿತದ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಹಕಾರಿ ಸಂಸ್ಥೆಗಳು ಸಾರ್ವಜನಿಕರಿಗೆ ಅಗತ್ಯ ಸೇವೆಗಳನ್ನು ಪೂರೈಸಿ ಜನಮಾನಸಕ್ಕೆ ಹತ್ತಿರವಾಗಬೇಕು ಎಂದರು.
ರಾಜ್ಯ ಸೌಹಾರ್ದ ಒಕ್ಕೂಟದ ನಿರ್ದೇಶಕ ಎಸ್.ಎನ್. ವಿಶ್ವನಾಥ್, ಸಹಕಾರಿಯ ಅಧ್ಯಕ್ಷ ಕೆ.ಶೈಲೇಂದ್ರ ಜೋಯ್ಸ್, ಉಪಾಧ್ಯಕ್ಷ ಕೆ.ಸೋಮಶೇಖರ, ನಿರ್ದೇಶಕರಾದ ಎಚ್.ಎನ್. ಚಂದ್ರಶೇಖರ, ಸಿ.ವಿ. ಸುಬ್ರಮಣ್ಯ, ವಿ.ಎಸ್. ಕೃಷ್ಣಯ್ಯ, ಶ್ರೀನಾಥ್, ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ.ಎಸ್. ಸುಧೀಂದ್ರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement