100 ಮಾದರಿ ವಸತಿ ಶಾಲೆ ಗುರಿ: ಸಚಿವ ಆಂಜನೇಯ
ಶಿಕಾರಿಪುರ: ಅಧಿಕಾರವಧಿಯಲ್ಲಿ ಪ್ರತಿ ಹೋಬಳಿ ಕೇಂದ್ರಗಳಿಗೆ ತಲಾ ಒಂದರಂತೆ ಕನಿಷ್ಠ 100 ಕಿತ್ತೂರು ರಾಣಿ ಚನ್ನಮ್ಮ ಮಾದರಿ ವಸತಿ ಶಾಲೆ ಆರಂಭಿಸುವ ಗುರಿ ಹೊಂದಲಾಗಿದೆ ಎಂದು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಾಖೆಯ ಸಚಿವ ಎಚ್.ಆಂಜನೇಯ ಪ್ರಕಟಿಸಿದರು.
ತಾಲೂಕಿನ ಅಂಬಾರಗೊಪ್ಪ ಗ್ರಾಮದ ಸಮೀಪದಲ್ಲಿ ಶನಿವಾರ 4.82 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ನೂತನ ಕಟ್ಟಡವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಸಂಕಲ್ಪ: ರಾಷ್ಟ್ರೀಯ ಗುಣಮಟ್ಟದ ಶಿಕ್ಷಣದ ಗುರಿಯ ಮೇರೆಗೆ ಆರಂಭವಾಗಿರುವ ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ 6 ರಿಂದ 10 ರವರೆಗಿನ ತರಗತಿಗಳನ್ನು ಕನ್ನಡ ಹಾಗೂ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ನೀಡಲಾಗುತ್ತಿದೆ. ರಾಜ್ಯ ಸರ್ಕಾರ ವಸತಿ ಶಾಲೆಯ ಪ್ರತಿ ವಿದ್ಯಾರ್ಥಿಗೆ 1000 ಪ್ರತಿ ತಿಂಗಳು ವ್ಯಯಿಸಲು ಬಜೆಟ್ನಲ್ಲಿ ಅನುಮೋದಿಸಲಾಗಿದೆ. ಪ್ರತಿ ವಸತಿ ಶಾಲೆಯಲ್ಲಿ ಸ್ಥಳೀಯರಿಗೆ ಶೇ.50 ಮೀಸಲಿಗೆ ನಿರ್ಧರಿಸಲಾಗಿದೆ. ಪ್ರತಿ ಹೋಬಳಿಮಟ್ಟದಲ್ಲಿ ವಸತಿ ಶಾಲೆ ಆರಂಭಕ್ಕೆ ಸಂಕಲ್ಪ ಕೈಗೊಂಡಿರುವುದಾಗಿ ಘೋಷಿಸಿದರು.
ಮನವಿ: ಅಧ್ಯಕ್ಷತೆ ವಹಿಸಿದ್ದ ಮಾಜಿ ಸಿಎಂ, ಶಾಸಕ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ಇತ್ತೀಚಿನ ವರ್ಷದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಎಲ್ಲಾ ಸರ್ಕಾರದ ಕ್ರಾಂತಿಕಾರಕ ಕಾರ್ಯದಿಂದ ಬಡಶೋಷಿತ ಮಕ್ಕಳು ಉತ್ತಮ ಕಾನ್ವೆಂಟ್ ಶಿಕ್ಷಣ ಪಡೆಯುವಂತಾಗಿದೆ. ಸರ್ಕಾರದ ಸೌಲಭ್ಯಗಳನ್ನು ಪಡೆಯದೆ ಮಕ್ಕಳಿಗೆ ಉತ್ತಮ ಶಿಕ್ಷಣದಿಂದ ವಂಚನೆಯಾದಲ್ಲಿ ಪೋಷಕರು ಪಾಪವನ್ನು ಅನುಭವಿಸಬೇಕಾದೀತು ಎಂದು ಎಚ್ಚರಿಸಿದರು.