ಸುದ್ದಿ ಸಂಕ್ಷೇಪ
ಅಭಿವೃದ್ಧಿ ತರಬೇತಿ ಕಾರ್ಯಕ್ರಮ
ಚಿಕ್ಕಮಗಳೂರು: ನೆಹರು ಯುವ ಕೇಂದ್ರ, ಆಶ್ರಯ ಸಮುದಾಯ ಅಭಿವೃದ್ಧಿ ಸಂಸ್ಥೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಶ್ರಯದಲ್ಲಿ ಯುವ ಮುಂದಾಳತ್ವ ಹಾಗೂ ಸಮುದಾಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ಫೆ. 19 ರ ಬೆಳಗ್ಗೆ 11 ಗಂಟೆಗೆ ಬೀರೂರಿನ ರೋಟರಿ ಹಾಲ್ನಲ್ಲಿ ಹಮ್ಮಿಕೊಳ್ಳಲಾಗಿದೆ.
ಕಡೂರು ತಹಸೀಲ್ದಾರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಬೀರೂರಿನ ಆಶ್ರಯ ಸಮದಾಯ ಅಭಿವೃದ್ಧಿ ಸಂಘದ ಅಧ್ಯಕ್ಷ ಎಸ್. ಶ್ರೀನಿವಾಸ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬೀರೂರು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಬಿ. ಮೋಹನ್ ಕುಮಾರ್, ಪುರಸಭೆ ಮುಖ್ಯಾಧಿಕಾರಿ ಟಿ.ಡಿ. ಕುಮಾರ್ ನಾಯಕ್, ಕೆನರಾ ಬ್ಯಾಂಕ್ ವ್ಯವಸ್ಥಾಪಕ ಜಿ.ಎಂ. ಬಾಲಕೃಷ್ಣ ಭಾಗವಹಿಸಲಿದ್ದಾರೆ.
ಮತ್ಸ್ಯ ಸಂತತಿ ಉಳಿಸಿ ಬೆಳೆಸಿ
ಶಿವಮೊಗ್ಗ: ಮನುಷ್ಯ ಪ್ರಕೃತಿಯ ಮೇಲೆ ನಿರಂತರವಾಗಿ ನಡೆಸುತ್ತಿರುವ ದಾಳಿಯಿಂದಾಗಿ ಸ್ವಾಭಾವಿಕವಾಗಿ ನಾಗರಿಕ ವ್ಯವಸ್ಥೆಗೆ ಪೂರಕವಾಗಿದ್ದ ಕೆಲ ಮತ್ಸ್ಯ ಸಂತತಿ ಅಳಿವಿನಂಚಿನಲ್ಲಿರುವುದು ನೋವಿನ ಸಂಗತಿ ಎಂದು ವಿಧಾನ ಪರಿಷತ್ ಸಭಾಪತಿ ಡಿ.ಹೆಚ್. ಶಂಕರಮೂರ್ತಿ ವಿಷಾದಿಸಿದರು.
ಅವರು ಶನಿವಾರ ಮೀನುಗಾರಿಕೆ ಇಲಾಖೆಯು ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಆವರಣದಲ್ಲಿ ಮೂರು ದಿನಗಳವರೆಗೆ ನಡೆಯಲಿರುವ ಮತ್ಸ್ಯಮೇಳವನ್ನು ಉದ್ಘಾಟಿಸಿ, ರಾಜ್ಯವು ವಿಶಾಲವಾದ ಸಮುದ್ರ ತೀರ ಹೊಂದಿದೆ. ಹಲವು ನದಿಗಳಿವೆ. ಸಾವಿರಾರು ಕೆರೆಕಟ್ಟೆಗಳಿವೆ. ಮೀನುಗಳನ್ನು ಬೆಳೆಸುವುದಕ್ಕೆ ವಿಪುಲ ಅವಕಾಶವಿದೆ. ಆದರೆ ಕಲುಷಿತಗೊಳ್ಳುತ್ತಿರುವ ಪರಿಸರ ಜಲಚರಗಳಿಗೆ ಕಂಟಕ ತಂದಿದೆ ಎಂದರು.
ಮೀನಿನ ಸಂತತಿ ಉಳಿಸಿ: ಮನುಷ್ಯ ತಿಳಿದೋ, ತಿಳಿಯದೆಯೋ ಜಲಮೂಲಗಳನ್ನು ಹಾಳು ಮಾಡುತ್ತಿದ್ದಾನೆ. ಹೊಲಗಳಿಗೆ ಸಿಂಪಡಿಸಿದ ರಸಾಯನಿಕಗಳು ನದಿತೊರೆಗಳು ಸೇರಿ ಕಲುಷಿತಗೊಳ್ಳುತ್ತಿವೆ. ಸರ್ಕಾರ ಸಮುದ್ರದಲ್ಲಿ ಮೀನುಗಾರಿಕೆ ನಡೆಸುವ ಮೀನುಗಾರರಿಗೆ ಸಮುದ್ರದಲ್ಲಿ ಮೀನುಗಳು ಸಂತಾನಾಭಿವೃದ್ದಿ ನಡೆಸುವ ಕಾಲದಲ್ಲಿ ಮೀನುಗಾರಿಕೆ ನಡೆಸದಂತೆ ನಿಷೇಧ ಹೇರಿದೆ. ಈಗಲಾದರೂ ಮೀನಿನ ಸಂತತಿ ಉಳಿಸಿ ಬೆಳೆಸಲು ಶ್ರಮಿಸಬೇಕು ಎಂದರು.
ಗ್ರಾಮೀಣ ಪ್ರದೇಶದ ಕೆರೆಗಳಲ್ಲಿ ಮೀನಿನ ಸಂತತಿ ನಾಶದ ಅಂಚಿಗೆ ಬಂದು ನಿಂತಿದೆ. ಕೆರೆಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳುತ್ತಿದ್ದೇವೆ. ಅಲ್ಲದೇ ಕೆರೆಯನ್ನು ಒತ್ತುವರಿ ಮಾಡಿ ಸಾಗುವಳಿ ಮಾಡಿಕೊಳ್ಳುತ್ತಿದ್ದೇವೆ. ಹೀಗಾದರೆ ಮೀನಿನ ಸಂತತಿ ಉಳಿಯುವುದಾದರೂ ಹೇಗೆ ಎಂದು ಪ್ರಶ್ನಿಸಿದ ಅವರು, ಮನುಷ್ಯ ಮತ್ತು ಪ್ರಕೃತಿ ಒಟ್ಟಾಗಿ ಬಾಳುವಂತಹ ಸಂಬಂಧ ಭಾರತದಲ್ಲಿರುವುದು ವಿಶೇಷ. ಅದಕ್ಕೆ ಧಾರ್ಮಿಕ ಕಾರಣಗಳೂ ಇವೆ ಎಂದರು.
ಗ್ರಾಪಂ ಕಾರ್ಯದರ್ಶಿಗೆ ಜೈಲು ಶಿಕ್ಷೆ
ಚಿಕ್ಕಮಗಳೂರು: ಸರ್ಕಾರದಿಂದ ಮಂಜೂರಾದ ಆಶ್ರಯ ಮನೆಯ ಬಿಲ್ ವಿತರಿಸಲು ಲಂಚ ಪಡೆದ ಗ್ರಾಮ ಪಂಚಾಯ್ತಿ ಕಾರ್ಯದರ್ಶಿಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ.
2009ರ ನವೆಂಬರ್ 3 ರಂದು ಕಡೂರು ತಾಲೂಕಿನ ಬಿಸಲೆಹಳ್ಳಿ ಗ್ರಾಮದ ಶಾಂತಮ್ಮ ಎಂಬುವವರಿಗೆ ಈ ಹಿಂದೆ ಸರ್ಕಾರದಿಂದ ಮಂಜೂರಾದ ಆಶ್ರಯ ಮನೆಯ ನಾಲ್ಕನೆ ಬಿಲ್ನ ಚೆಕ್ ವಿತರಿಸಲು ಬಿಸಲೆಹಳ್ಳಿ ಗ್ರಾಮ ಪಂಚಾಯ್ತಿಯ ಕಾರ್ಯದರ್ಶಿ ಬಾಲಾಜಿ ನಾಯಕ್ ಒಂದು ಸಾವಿರ ರೂ. ಲಂಚದ ಹಣ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಹೆಚ್.ಎಸ್. ಕಮಲ ಅವರು, ಪ್ರಕರಣ ಸಾಭೀತಾದ ಹಿನ್ನೆಲೆಯಲ್ಲಿ ಆರೋಪಿ ಬಾಲಾಜಿ ನಾಯಕ್ನಿಗೆ ಭ್ರಷ್ಟಾಚಾರ ನಿರ್ಮೂಲನಾ ಕಾಯ್ದೆಯ ಕಲಂ 7 ರ ಅಪರಾಧಕ್ಕೆ 3 ವರ್ಷ ಕಠಿಣ ಶಿಕ್ಷೆ ಹಾಗೂ 20 ಸಾವಿರ ದಂಡ ಹಾಗೂ ಕಲಂ 13(1) (ಡಿ) ಅಪರಾಧಕ್ಕೆ 3 ವರ್ಷ ಕಠಿಣ ಶಿಕ್ಷೆ, 20 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಡಿ.ಬಿ. ಸುಜೇಂದ್ರ ಮೊಕದ್ದಮೆ ನಡೆಸಿದ್ದರು.
ನಕಲಿ ತಾಮ್ರ ಮಾರಾಟ: 3 ಬಂಧನ
ಹೊಸನಗರ: ನಕಲಿ ತಾಮ್ರದ ತಂತಿಯನ್ನು ಅಸಲಿ ಎಂದು ಮಾರಾಟ ಮಾಡುತ್ತಿದ್ದ ಉತ್ತರಪ್ರದೇಶದ ಮೂವರು ಆರೋಪಿಗಳನ್ನು ಬಂಧಿಸಿದ ಘಟನೆ ತಾಲೂಕಿನ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಉತ್ತರ ಪ್ರದೇಶದ ಮಹಮದ್ ಸಾಹಿದ್, ಮಹಮದ್ ಅಸ್ಲಾಂ, ಮಹಮದ್ ರಹೀಸ್ ಎಂಬುವವರು ಬಂಧಿತ ಆರೋಪಿಗಳು. ಶನಿವಾರ ಬೆಳಿಗ್ಗೆ ನೂಲಿಗ್ಗೇರಿಯ ಗುಜರಿ ಅಂಗಡಿಗೆ ನಕಲಿ ತಾಮ್ರದ ತಂತಿಗಳನ್ನು ಅಸಲಿ ಎಂದು ಮಾರಾಟಮಾಡುತ್ತಿದ್ದ ವೇಳೆ ಅನುಮಾನ ಗೊಂಡ ಗುಜರಿ ಅಂಗಡಿಯ ಯಾಸಿನ್ ಪೋಲೀಸರಿಗೆ ಮಾಹಿತಿ ನೀಡಿದ್ದಾನೆ. ಈ ಸುದ್ದಿ ತಿಳಿಯುತ್ತಿದ್ದ ಕಾರ್ನಲ್ಲಿ ಮಾಲು ಸಮೇತ ಬಂದಿದ್ದ ಆರೋಪಿಗಳು ಪರಾರಿಯಾಗಲು ಯತ್ನಿಸಿದ್ದಾರೆ. ಆದರೆ ಪಿಎಸ್ಐ ತಿಪ್ಪಾರೆಡ್ಡಿ ನೇತೃತ್ವದ ಕ್ರೈಂ ತಂಡ ಆರೋಪಿಗಳನ್ನು ಬೆನ್ನಟಿದೆ. ಈ ನಡುವೆ ಅಡ್ಡಾದಿಡ್ಡಿ ಕಾರು ಚಲಾಯಿಸುತ್ತಿದ್ದ ಆರೋಪಿಗಳು ನಗರ ಸಿಂಡಿಕೇಟ್ ಬ್ಯಾಂಕ್ ಬಳಿ ಆಟೋವೊಂದಕ್ಕೆ ಡಿಕ್ಕಿ ಹೊಡೆದು ಜಖಂಗೊಳಿಸಿ ತಪ್ಪಿಸಿಕೊಂಡಿದ್ದರು.
ಕೊನೆಗೂ ಸಿಕ್ಕಿಬಿದ್ದರು: ಆದರೂ ಬೆನ್ನುಹತ್ತಿದ ಪೊಲೀಸ್ ತಂಡ ಸುಮಾರು 20 ಕಿಮೀ ಹಿಂಬಾಲಿಸಿ ಹಿಡಿಯುವ ಪ್ರಯತ್ನ ಮಾಡಿದ್ದಾರೆ. ಕೊನೆಗೆ ಕೊಲ್ಲೂರು ಮಾರ್ಗದ ಮತ್ತಿಕೈ ಬಳಿ ಕಾರನ್ನು ಬಿಟ್ಟು ಆರೋಪಿಗಳು ಪರಾರಿಯಾಗಿದ್ದು ಒಬ್ಬ ಆರೋಪಿಸಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಬಳಿಕ ಮತ್ತಿಬ್ಬರನ್ನು ಹಿಂಬಾಲಿಸಿ ಸಂಜೆವೇಳೆಗೆ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆದಿದೆ ಎಂದು ಪಿಎಸ್ಐ ತಿಪ್ಪಾರೆಡ್ಡಿ ತಿಳಿಸಿದ್ದಾರೆ.
ಕವನ ಸಂಕಲನಕ್ಕೆ ದೀಪಾರಾಣಿ ಆಯ್ಕೆ
ಮೂಡಿಗೆರೆ: ಮೈಸೂರಿನ ಗ್ರಾಮಾಂತರ ಬುದ್ಧಿ ಜೀವಿಗಳ ಬಳಗ ಪ್ರೇಮಕವಿ ಕೆ.ಎಸ್. ನರಸಿಂಹ ಸ್ವಾಮಿ ಅವರ ಸ್ಮರಣಾರ್ಥ ಆಯೋಜಿಸಿದ್ದ ರಾಜ್ಯ ಮಟ್ಟದ ಸಾಹಿತ್ಯೋತ್ಸವ ಕಾರ್ಯಕ್ರಮದಲ್ಲಿ ಸಂಪಾದಿತ ಕವನ ಸಂಕಲನವನ್ನು ಹೊರ ತಂದಿದೆ. ಇದರಲ್ಲಿ ತಾಲೂಕಿನ ಬೆಟ್ಟಗೆರೆ ಗ್ರಾಮದ ಕೃಷಿಕರಾದ ಸದಾನಂದ ಹಾಗೂ ಗೀತಾ ದಂಪತಿ ಪುತ್ರಿ ಬಿ.ಎಸ್. ದೀಪರಾಣಿ ರಚಿಸಿದ್ದ “ÔÚß·æ¹ÞÂÒ¥Ú ÔÚßsÚßVÚ’ ಎಂಬ ಪ್ರೇಮಕವನವು ಆಯ್ಕೆಯಾಗಿ ವಿಮರ್ಶಕರ ಪ್ರಶಂಸೆಗೆ ಪಾತ್ರವಾಗಿದೆ ಎಂದು ಪ್ರಕಟಣೆ ತಿಳಿಸಿದೆ.