ರೋಗ ಹರಡದಂತೆ ಜಾಗ್ರತೆ ಅಗತ್ಯ
ತರೀಕೆರೆ: ಸಮೀಪದ ನಂದಿ ಗ್ರಾಮದಲ್ಲಿ ಪಶುಪಾಲನೆ ಇಲಾಖೆ ಮತ್ತು ಪಶು ವೈದ್ಯ ಸೇವಾ ಇಲಾಖೆಯಿಂದ ರಾಷ್ಟ್ರೀಯ ಕಾಲುಬಾಯಿ ರೋಗ ನಿಯಂತ್ರಣದಲ್ಲಿ ಜಾನುವಾರುಗಳಿಗೆ ಕಾಲುಬಾಯಿ ರೋಗ ಲಸಿಕೆ ಹಾಕುವ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಸುಣ್ಣದಹಳ್ಳಿ ಗ್ರಾಪಂ ಅಧ್ಯಕ್ಷೆ ಶಾಂತಮ್ಮ ಯೋಗೀಶ್ ಉದ್ಘಾಟಿಸಿ ಮಾತನಾಡಿ, ಜಾನುವಾರುಗಳಿಗೆ ಕಾಲುಬಾಯಿ ರೋಗ ಹರಡುವ ಮುಂಚೆ ಮುಂಜಾಗ್ರತೆಯಾಗಿ ಲಸಿಕೆ ಹಾಕಿಸಲು ಗ್ರಾಮಸ್ಥರು ಮುಂದಾಗಬೇಕು ಎಂದು ತಿಳಿಸಿದರು.
ಜಾನುವಾರು ರಕ್ಷಣೆ: ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಕೊಟ್ರೇಶಪ್ಪ ಅವರು ಮಾತನಾಡಿ ಇತ್ತೀಚೆಗೆ ರಾಜ್ಯದಲ್ಲಿ ತಲೆದೋರಿದ್ದ ಕಾಲುಬಾಯಿ ರೋಗಕ್ಕೆ ಸುಮಾರು 10 ಸಾವಿರಕ್ಕೂ ಹೆಚ್ಚು ಜಾನುವಾರುಗಳು ಮರಣ ಹೊಂದಿದೆ, ಇದನ್ನು ತಪ್ಪಿಸಲು ತಮ್ಮ ಜಾನುವಾರುಗಳಿಗೆ ಕಾಲುಬಾಯಿ ರೋಗ ಲಸಿಕೆ ಹಾಕಿಸಿ, ಅವುಗಳನ್ನು ರಕ್ಷಿಸಲು ಎಚ್ಚರ ವಹಿಸುವಂತೆ, ರಾಜ್ಯಾದ್ಯಂತ ಇಂದು ಏಕಕಾಲದಲ್ಲಿ ಈ ಕಾರ್ಯಕ್ರಮ ಪ್ರಾರಂಭಿಸಲಾಗಿದ್ದು, ತರೀಕೆರೆ ತಾಲೂಕಿನಲ್ಲಿ 4 ವಿಭಾಗಗಳನ್ನಾಗಿ ಮಾಡಿ 1 ತಿಂಗಳ ಅವಧಿಯೊಳಗೆ ಎಲ್ಲಾ ಜಾನುವಾರುಗಳಿಗೆ ಕಾಲುಬಾಯಿ ರೋಗ ಲಸಿಕೆ ಹಾಕಲಾಗುವುದು ಎಂದು ತಿಳಿಸಿದರು.
ಲಿಂಗದಹಳ್ಳಿ ಪಶು ವೈದ್ಯಾಧಿಕಾರಿ ಡಾ.ಎಸ್.ಬಿ.ಉಮೇಶ್ ಮಾತನಾಡಿ, ಪ್ರತಿ ಆರು ತಿಂಗಳಿಗೊಮ್ಮೆ ತಪ್ಪದೇ ಕಾಲುಬಾಯಿ ರೋಗ ಲಸಿಕೆ ಹಾಕಿಸುವಂತೆ ತಿಳಿಸಿ ಕಾಲುಬಾಯಿ ರೋಗ ವಿವಿಧ ರೋಗ ಹರಡುವಿಕೆ, ರೋಗ ತಡೆಗಟ್ಟುವಿಕೆ, ಲಸಿಕೆ ರಾಸುಗಳ ಅರೈಕೆ ಬಗ್ಗೆ ಮಾಹಿತಿ ನೀಡಿದರು.
ಪಶು ವೈದ್ಯ ಇಲಾಖೆಯ ವಸಂತಕುಮಾರ್, ಶ್ವೇತಾ, ಗಂಗಾಧರ್, ನಾಗರಾಜ್, ಉದಯ್, ಮಂಜಪ್ಪ, ರಘು, ಅರುಣ್‌ಕುಮಾರ್, ಶೇಖರಪ್ಪ ಮೊದಲಾದವರು ಭಾಗವಹಿಸಿದ್ದರು.
6 ಹಳ್ಳಿಗಳ ಜಾನುವಾರುಗಳಿಗೆ ಕಾಲುಬಾಯಿ ರೋಗ ಲಸಿಕೆ ಹಾಕಲಾಯಿತು.