ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಹಣ ಕ್ಷಿಪ್ರ ಗತಿ, ಕೆಲ್ಸ ಆಮೆಗತಿ!

Lingaraj Badiger
Updated On : 17 Feb 2014, 11:04 am

ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಫೆ.16
ಅಭಿವೃದ್ಧಿ ಕಾಮಗಾರಿಗಳಿಗೆ ಸರ್ಕಾರದ ಹಣದ ಹೊಳೆ ಚಿಕ್ಕಮಗಳೂರಿಗೆ ಹರಿದು ಬಂದಿದೆ. ಆದರೆ, ಸಕಾಲದಲ್ಲಿ ಕಾಮಗಾರಿಗಳು ಮುಗಿಸದೇ ಹೋದರೆ ಏನೆಲ್ಲಾ ತೊಂದರೆಯಾಗುತ್ತವೆ ಎಂಬುದನ್ನು ನಗರದ ಜನತೆ ಕಳೆದ ಮುಂಗಾರಿನಲ್ಲಿ ನೋಡಿದ್ದರು, ನರಕಯಾತನೆ ಅನುಭವಿಸಿದ್ದರು.
ಮಳೆಗಾಲ ಮುಗಿದ ಮೇಲೆ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಜನಪ್ರತಿನಿಧಿಗಳು ಜನರಿಗೆ ಸಮಜಾಯಿಷಿ ನೀಡುತ್ತಿದ್ದರು. ಮಳೆಗಾಲ ಕಳೆಯಿತು. ಚಳಿಗಾಲವೂ ಮುಗಿದು, ಬೇಸಿಗೆ ಕಾಲ ಆರಂಭವಾಗಿದೆ. ಆದರೆ, ಕಾಮಗಾರಿಗಳಲ್ಲಿ ಮಾತ್ರ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಕಾಣುತ್ತಿಲ್ಲ. ಇದು ಗುತ್ತಿಗೆದಾರರ ನಿರ್ಲಕ್ಷ್ಯ ಎಂಬುದು ವಾಸ್ತವಿಕ ಸತ್ಯ. ಅವರನ್ನು ಹಿಡಿತದಲ್ಲಿಡಲು ಆಡಳಿತ ಯಂತ್ರ ವಿಫಲವಾಗಿದೆ. ಇನ್ನು ಆಡಳಿತ ಪಕ್ಷದವರಾಗಲಿ, ಪ್ರತಿಪಕ್ಷದವರಾಗಲಿ ಗುತ್ತಿಗೆದಾರರನ್ನು ಪ್ರಶ್ನಿಸುವ ಗೋಜಿಗೆ ಹೋಗುತ್ತಿಲ್ಲ.
ಹಣದ ಹೊಳೆ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಚಿಕ್ಕಮಗಳೂರು ನಗರಕ್ಕೆ ಕೋಟ್ಯಂತರ ರುಪಾಯಿ ಬಿಡುಗಡೆಯಾಗಿತ್ತು. ಪ್ರಮುಖವಾಗಿ ನಗರೋತ್ಥಾನ, ಇಲ್ಲಿನ ಎಂಜಿ ರಸ್ತೆ, ಮಾರ್ಕೆಟ್ ರಸ್ತೆ ಕಾಂಕ್ರೀಟಿಕರಣ, ಕೇಂದ್ರ ಸರ್ಕಾರದ ಕೆಎಂಆರ್‌ಪಿ ಯೋಜನೆ, ಸಿಎಂಎಸ್‌ಎಂಟಿಡಿಪಿ ಯೋಜನೆಯಡಿ ರಸ್ತೆ, ಮಳೆ ನೀರು ಚರಂಡಿ, ಇದರ ಜತೆಗೆ ಒಳ ಚರಂಡಿ ನಿರ್ಮಾಣದ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು.
ಕಳೆದ ಎರಡು ವರ್ಷಗಳಿಂದ ಕಾಮಗಾರಿಗಳು ನಡೆಯುತ್ತಿವೆ. ಆದರೆ, ಕಾಲಮಿತಿಯೊಳಗೆ ಕಾಮಗಾರಿ ಮುಗಿಸುವ ನಿಟ್ಟಿನಲ್ಲಿ ಗುತ್ತಿಗೆದಾರರು ಕ್ರಮ ವಹಿಸಿಲ್ಲ. ಇದೇ ಬರೀ ಅಂತೆ ಕಂತೆಯ ಮಾತಲ್ಲಾ ವಾಸ್ತವಿಕ ಸತ್ಯವೂ ಕೂಡ ಆಗಿದೆ.
ಯುಜಿಡಿಯ ಮಹಿಮೆ: ಕೋಟ್ಯಂತರ ರುಪಾಯಿ ವೆಚ್ಚದ ರಸ್ತೆ ಡಾಂಬರೀಕರಣದ ಕಾಮಗಾರಿ ಮೂಲೆ ಹಿಡಿಯಲು ಒಳಚರಂಡಿ ಕಾಮಗಾರಿಯೇ ಕಾರಣ.
ಗುತ್ತಿಗೆದಾರರನ್ನು ಹಿಡಿತದಲ್ಲಿಡಲು ಅಧಿಕಾರಿಗಳು ವಿಫಲರಾದರೆ ಇಡೀ ವ್ಯವಸ್ಥೆ ಅಸ್ತವ್ಯಸ್ತವಾಗುತ್ತದೆ ಎಂಬುದಕ್ಕೆ ಚಿಕ್ಕಮಗಳೂರು ನಗರದಲ್ಲಿ ನಡೆಯುತ್ತಿರುವ ಒಳ ಚರಂಡಿ ಕಾಮಗಾರಿಯೇ ಒಂದು ನಿದರ್ಶನವಾಗಿದೆ.
ಒಳಚರಂಡಿ ಕಾಮಗಾರಿ ಕೈಗೆತ್ತಿಕೊಂಡ ಪ್ರಥಮದಲ್ಲಿ ಮ್ಯಾನ್‌ಹೋಲ್ ನಿರ್ಮಾಣ ಮಾಡಲಾಯಿತು. ಅವುಗಳನ್ನು ಸರಿಯಾದ ರೀತಿಯಲ್ಲಿ ಮುಚ್ಚಿದ್ದರೆ, ಗುತ್ತಿಗೆ ಷರತ್ತಿನಲ್ಲಿ ತಿಳಿಸಿರುವ ಪ್ರಕಾರ ಯಥಾಸ್ಥಿತಿಯಲ್ಲಿ ರಸ್ತೆ ಬಿಟ್ಟು ಕೊಟ್ಟಿದ್ದರೆ, ಇಂದು ರಸ್ತೆಗಳ ನಿರ್ಮಾಣದ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರಲಿಲ್ಲ. ಒಳಚರಂಡಿ ಮಂಡಳಿಯವರು ಗುತ್ತಿಗೆದಾರರ ತಾಳಕ್ಕೆ ತಕ್ಕಂತೆ ಕುಣಿದ ಪರಿಣಾಮ ನಗರದ ಜನರು ಕಳೆದ ವರ್ಷ ಮಳೆಗಾಲದಲ್ಲಿ ತುಂಬಾ ತೊಂದರೆ ಅನುಭವಿಸಿದ್ದರು.
ಕೆಲವು ಬಡಾವಣೆಗಳಲ್ಲಿ ಇಡೀ ರಸ್ತೆಗಳು ಕೆಸರುಮಯವಾಗಿದ್ದವು, ಮಕ್ಕಳು ಶಾಲೆಗೆ, ಪೋಷಕರು ಹೊರಗೆ ಹೋಗದ ಪರಿಸ್ಥಿತಿ ನಿರ್ಮಾಣಗೊಂಡಿತ್ತು. ರಾಜಕೀಯ ಪಕ್ಷದವರು ಇದರಲ್ಲೂ ಕ್ರೆಡಿಟ್ ನಿರೀಕ್ಷಿಸಿ ಪ್ರತಿಭಟನೆ ನಡೆಸಿದರು. ಆಗ ಆಡಳಿತದಲ್ಲಿದ್ದ ಬಿಜೆಪಿ ಅಭಿವೃದ್ಧಿ ಕೆಲಸ ನಡೆಯುತ್ತಿದೆ, ಸ್ವಲ್ಪ ಸುಧಾರಿಸಬೇಕೆಂದು ಹೇಳಿ ಜನರಿಗೆ ಸಮಾಧಾನಪಡಿಸಲು ಯತ್ನಿಸಿತ್ತು.
ಕಾರ್ಯಾದೇಶ: ರಾಜ್ಯದಲ್ಲಿ ಸರ್ಕಾರ ಬದಲಾಗುತ್ತಿದ್ದಂತೆ ನಗರದಲ್ಲಿ ಕೈಗೊಳ್ಳಬೇಕಾಗಿದ್ದ ಅಭಿವೃದ್ಧಿ ಕಾಮಗಾರಿಗಳ ಮೇಲೆ ರಾಜಕೀಯದ ಕರಿನೆರಳು ಆವರಿಸಿಕೊಂಡಿತು.
ನಗರೋತ್ಥಾನ, ಎಂ.ಜಿ. ರಸ್ತೆ, ಮಾರ್ಕೆಟ್ ರಸ್ತೆ ಅಭಿವೃದ್ಧಿ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಕಾರ್ಯಾದೇಶ ನೀಡಲು ಜಿಲ್ಲಾಡಳಿತ ಮೀನಮೇಷ ಎಣಿಸುತ್ತಿದೆ ಎಂದು ಬಿಜೆಪಿಯವರು ಕಾಂಗ್ರೆಸ್ ಮೇಲೆ ಗೂಬೆ ಕೂರಿಸುತ್ತಲೇ ಬಂದರು. ಇದಕ್ಕೆ ಕಾಂಗ್ರೆಸ್ ಪ್ರತ್ಯುತ್ತರ ನೀಡುತ್ತಾ ಬಂದಿತು. ಇದರಲ್ಲೇ ಕಾಲಹರಣವಾಯಿತು. ನಗರೋತ್ಥಾನ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವರು ಕಳೆದ ಡಿಸೆಂಬರ್ ತಿಂಗಳಲ್ಲಿ ಗುದ್ದಲಿಪೂಜೆ ನೆರವೇರಿಸಿದ್ದರು. ಆದರೆ, ಕಳೆದ ಎರಡು ತಿಂಗಳಲ್ಲಿ ನಗರೋತ್ಥಾನದಡಿಯಲ್ಲಿ ಕೇವಲ 2 ಕಿಮೀ ರಸ್ತೆ ಮಾತ್ರ ಡಾಂಬರೀಕರಣಗೊಂಡಿದೆ. ಸಿಎಂಎಸ್‌ಎಂಟಿಡಿಪಿ ಯೋಜನೆಯಡಿ ಶೇ. 20ರಷ್ಟು ಮಾತ್ರ ಕಾಮಗಾರಿ ನಡೆದಿದೆ. ಇಷ್ಟೆಲ್ಲಾ ಅವ್ಯವಸ್ಥೆಗೆ ಒಳಚರಂಡಿ ಕಾಮಗಾರಿಯೇ ಕಾರಣ. ಜಿಲ್ಲಾಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸದೆ ಹೋದರೆ ಮಳೆಗಾಲದಲ್ಲಿ ನಗರದ ಜನತೆ ಆಡಳಿತ ಯಂತ್ರಕ್ಕೆ ಹಿಡಿಶಾಪ ಹಾಕಲಿದ್ದಾರೆ.
-ಆರ್.ತಾರಾನಾಥ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement