ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಇಂದಿನಿಂದ ಗ್ರಾಮೀಣ ಅಂಚೆ ನೌಕರರ ಮುಷ್ಕರ

Lingaraj Badiger
Updated On : 18 Feb 2014, 12:06 pm

ಚಿಕ್ಕಮಗಳೂರು: ಮಂಗಳವಾರದಿಂದ ಆರಂಭವಾಗಲಿರುವ ಅನಿರ್ದಿಷ್ಟಾವಧಿ ಮುಷ್ಕರವನ್ನು ಜಿಲ್ಲಾದ್ಯಂತ ಪೂರ್ಣ ಪ್ರಮಾಣದಲ್ಲಿ ಯಶಸ್ವಿಗೊಳಿಸಲು ಗ್ರಾಮೀಣ ಅಂಚೆ ನೌಕರರ ಸಂಘ ಮನವಿ ಮಾಡಿದೆ.
ಗಾಂಧಿ ನಗರದ ಸಂಘದ ಕಚೇರಿಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಕೆ.ಟಿ. ಶೇಷಣ್ಣಗೌಡರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಗ್ರಾಮೀಣ ಅಂಚೆ ನೌಕರರ ಸಭೆ, ತಮ್ಮ ನ್ಯಾಯಯುತ ಬೇಡಿಕೆಯನ್ನು ಸರ್ಕಾರ ಕಡೆಗಣಿಸಿರುವುದರಿಂದ ಮುಷ್ಕರ ಅನಿವಾರ್ಯ ಎಂದು ಸಾರಿದೆ.  
ಮಾದರಿ ಮಾಲೀಕನಾಗಬೇಕಾದ ಕೇಂದ್ರ ಸರ್ಕಾರವೇ ಗ್ರಾಮೀಣ ಅಂಚೆ ನೌಕರರನ್ನು ಜೀತದಾಳಿನಂತೆ ನಡೆಸಿಕೊಳ್ಳುತ್ತಿದೆ ಎಂದು ದೂರಿದ ಎಐಪಿಇಡಿಯು ವಿಭಾಗೀಯ ಕಾರ್ಯದರ್ಶಿ ಜೋಸೆಫ್ ಬಾರೆಟ್ಟೋ, ಕೆಲಸ ಮಾಡಿಸಿಕೊಳ್ಳುವಾಗ ಇಲಾಖೆ ನೌಕರರಂತೆ ವರ್ತಿಸಿ, ಸೌಲಭ್ಯ ಕೊಡುವಾಗ ಹೊರಗುತ್ತಿಗೆಯವರಂತೆ ಗ್ರಾಮೀಣ ಅಂಚೆ ನೌಕರರನ್ನು ನಡೆಸಿಕೊಳ್ಳಲಾಗುತ್ತಿದೆ. ಅಂಚೆ ಇಲಾಖೆಯ ಹೆಚ್ಚಿನ ಸೇವೆ ನೀಡಿ ಆದಾಯವನ್ನೂ ತಂದುಕೊಡುವ ಗ್ರಾಮೀಣ ನೌಕರರನ್ನು ಕಡೆಗಣಿಸುವುದು ಸರಿಯಲ್ಲ ಎಂದರು.
ಜಿಲ್ಲೆಯಲ್ಲಿ 262 ಗ್ರಾಮೀಣ ಅಂಚೆ ಕಚೇರಿಗಳಿದ್ದು, ಅಲ್ಲಿ ಕಾರ್ಯನಿರ್ವಹಿಸುತ್ತಿರುವ 562 ನೌಕರರು ಫೆ. 18ರಿಂದ ಅಖಿಲ ಭಾರತ ಕರೆಯ ಅನ್ವಯ ಅನಿರ್ದಿಷ್ಟಾವಧಿ ಮುಷ್ಕರದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದರಿಂದ ಜಿಲ್ಲೆಯ ಬಹುತೇಕ ಗ್ರಾಮೀಣ ಅಂಚೆ ಸೌಲಭ್ಯಗಳೆಲ್ಲವೂ ಸ್ಥಗಿತವಾಗಲಿವೆ ಎಂದ ಬಾರೆಟ್ಟೋ,  ಕೇಂದ್ರ ಸರ್ಕಾರ ತಕ್ಷಣ ಗಮನಹರಿಸಿ ಬೇಡಿಕೆ ಈಡೇರಿಸಲು ಕ್ರಮ ಕೈಗೊಳ್ಳಬೇಕೆಂದು ಅಗ್ರಹಿಸಿದರು.
ಪೌರ ನೌಕರರೆಂದು ಪರಿಗಣಿಸಿ: ಅಧ್ಯಕ್ಷತೆ ವಹಿಸಿದ್ದ ಶೇಷಣ್ಣಗೌಡ ಮಾತನಾಡಿ, ಜಿಡಿಎಸ್ ನೌಕರರನ್ನು ಪೌರ ನೌಕರ ಎಂದು ಪರಿಗಣಿಸಿ ಅಂಚೆ ಇಲಾಖೆಯ ನೌಕರರಿಗೆ ಕೊಡುವ ಎಲ್ಲಾ ಸೌಲಭ್ಯ ಕೊಡಬೇಕು. ಕೆಂದ್ರದ 7ನೇ ವೇತನ ಆಯೋಗದ ವ್ಯಾಪ್ತಿಗೆ ಸೇರಿಸಿಕೊಳ್ಳುವುದು, ಅನುಕಂಪ ಆಧಾರದ ನೌಕರಿ ಸೌಲಭ್ಯವನ್ನು ಶೇ. 100 ರಷ್ಟು ಕೊಡುವುದು. ಪೋಸ್ಟ್‌ಮನ್ ಮತ್ತು ಎಂಟಿಎಸ್‌ಗಳ ಶೇ. 25ರಷ್ಟು ಹುದ್ದೆಗಳನ್ನು ಸೇವಾ ಹಿರಿತನದ ಆಧಾರದ ಮೇಲೆ ಬಡ್ತಿ ಕೊಡುವುದು. ಹೊರಗುತ್ತಿಗೆ ಆಧಾರದ ಮೇಲೆ ಶೇ. 25ರಷ್ಟು ತೆಗೆದುಕೊಳ್ಳುವುದನ್ನು ನಿಲ್ಲಿಸಿ ಜಿಡಿಎಸ್ ನೌಕರರನ್ನೆ ಭರ್ತಿ ಮಾಡುವುದು 2006 ರಿಂದ ಇಲಾಖೆಯಲ್ಲಿ ಕೆಲಸ ನಿರ್ವಹಿಸತ್ತಿರುವ ದಿನಗೂಲಿ, ಕಾಂಟಿಜೆಂಡಿ, ಪಾರ್ಟ್ ಟೈಂ ನೌಕರರಿಗೆ ದಿನಭತ್ಯೆ ಕೊಡುವುದು ಪ್ರಮುಖ ಬೇಡಿಕೆಗಳು ಎಂದರು.
ಸಂಘದ ಖಜಾಂಚಿ ವಿರೂಪಾಕ್ಷ, ಉಪಾಧ್ಯಕ್ಷ ಕಡೂರಿನ ಗಂಗಾಧರ, ಮುಖಂಡರಾದ ಕಳಸದ ನಿರಂಜನಪ್ರಭು, ಸಿಂದಿಗೆರೆಯ ಸದಾಶಿವ, ತರೀಕೆರೆಯ ಶಿವಶಂಕರ, ಗಡಿಹಳ್ಳಿಯ ಮಂಜಪ್ಪ, ಬಾಳೂರಿನ ಸುರೇಶ್, ಹುಯಿಗೆರೆಯ ಶೇಖರ, ಸೊಲ್ಲಾಪುರದ ಶಿವಶಂಕರಮೂರ್ತಿ, ಆಲ್ದೂರಿನ ಅಸ್ಲಾಂ ಮತ್ತು ಬೀರೂರು ಶಿವು ಮಾತನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement