'ಕಲೆ, ಸಂಸ್ಕೃತಿ ಉಳಿಸಲು ಯುವಕರು ಮುಂದಾಗಲಿ'
ಶೃಂಗೇರಿ: ಪಾಶ್ಚಿಮಾತ್ಯ ಸಂಸ್ಕೃತಿಯ ಹಾವಳಿಯ ನಡುವೆ ನಶಿಸುತ್ತಿರುವ ದೇಸೀಯ ಕಲೆ, ಸಂಸ್ಕೃತಿ ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಯುವಜನತೆ ಆಸಕ್ತಿ ವಹಿಸಬೇಕು ಎಂದು ಪ್ರಭಾಕರ ಭಟ್ ದೇವಾಧರ್ ಮಣಸೆ ತಿಳಿಸಿದರು.
ಮೆಣಸೆ ಸರ್ಕಾರಿ ಶಾಸಕರ ಹಿರಿಯ ಪ್ರಾಥಮಿಕ ಶಾಲಾವರಣದಲ್ಲಿ ಭಾರತೀ ರೈತ ಯುವಕ ಸಂಘದ ಆಶ್ರಯದಲ್ಲಿ ನಡೆದ ಬೃಹತ್ ರಕ್ತದಾನ ಶಿಬಿರ, ಸಂಘದ ವಾರ್ಷಿಕೋತ್ಸವ ಸಮಾರಂಭ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಾರತೀಯ ಸಂಸ್ಕೃತಿ, ಪರಂಪರೆ ತನ್ನದೇ ಆದ ಇತಿಹಾಸ, ಪರಂಪರೆ ಹೊಂದಿದೆ. ಇದು ಜಗತ್ತಿನಲ್ಲಿಯೇ ವಿಶಷ್ಟತೆ ಹೊಂದಿದೆ. ನಮ್ಮ ಸಂಸ್ಕೃತಿ,ಪರಂಪರೆ ಉಳಿಸಿ ಮುಂದಿನ ಪೀಳಿಗೆಗೆ ಮುಂದುವರಿಸಿಕೊಂಡು ಹೋಗಬೇಕಿದೆ. ಇಂತಹ ಸಮಾಜಮುಖಿ ಕಾರ್ಯಗಳು ಇನ್ನಷ್ಟು ನಡೆಯಲಿ ಎಂದರು. ಕಲಾವಿದರಾದ ಜಮಾಲ್ ಸಾಹೇಬ್ ಹಾಗೂ ಆಟೋ ಉಮೇಶ್ ಅವರಿಗೆ ರಂಗಕಲೆಗಾಗಿ ಕಲಾಶ್ರೀ ಪ್ರಶಸ್ತಿ ನೀಡಿ ಗೌರವಸಲಾಯಿತು. ಭಾರತಿ ಯುವಕ ರೈತ ಸಂಘದ ಅಧ್ಯಕ್ಷ ಸುಬ್ರಮಣ್ಯ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿ. ಅನಂತಯ್ಯ, ರಾಜುಶೆಟ್ಟಿ ಮತ್ತಿತರರು ಇದ್ದರು. ಮೆ.ನಾ. ರಮೇಶ್ ಸ್ವಾಗತಿಸಿದರು. ತ್ರಿಮೂರ್ತಿ ಹೊಸ್ತೋಟ ನಿರೂಪಿಸಿ, ರಮೇಶ್ ವಂದಿಸಿದರು.