ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಬಡಾಯಿ ರಾಜಕಾರಣಿಯ ಲಕ್ಷಣವಲ್ಲ

Lingaraj Badiger
Updated On : 18 Feb 2014, 12:06 pm

ಕನ್ನಡಪ್ರಭ ವಾರ್ತೆ, ಕಡೂರು, ಫೆ.17
ಒಂದು ಜನಾಂಗದ ಅಭಿವೃದ್ಧಿಗೆ ಸರ್ಕಾರದಿಂದ ನೀಡಿದ ಅನುದಾನವನ್ನು ನಾವು ಕೊಟ್ಟಿದ್ದೇವೆ ಎಂದು ಬಡಾಯಿ ಕೊಚ್ಚಿಕೊಳ್ಳುವುದು ರಾಜಕಾರಣಿಯ ಲಕ್ಷಣವಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು.
ಪಟ್ಟಣದ ಹುಳುಕಿನಕಲ್ಲಿನ ಬಳಿಯಲ್ಲಿ ಜಿಲ್ಲಾ ಮಟ್ಟದ ಉಪ್ಪಾರ ಸಮಾಜದ ಬೃಹತ್ ಸಮಾವೇಶ ಹಾಗೂ ಭಗೀರಥ ಜಯಂತ್ಯುತ್ಸವದಲ್ಲಿ ಉಪ್ಪಾರ ಸಮಾಜದ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ನರೇಂದ್ರ ಮೋದಿಯವರು ಏನು ಎಂದು ತಮಗೆ ಗೊತ್ತಿದ್ದು, ಗುಜರಾತ್‌ನಲ್ಲಿ ಬಿಜೆಪಿ ಸರ್ಕಾರ ಮಾಡಿರುವ ಕೆಲಸ ಏನು ಎಂಬುದು ತಮಗೆ ಗೊತ್ತಿದೆ. ಹಿಂದು ಧರ್ಮದ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುವ ಇವರಿಗೆ ಡಾ. ಬಿ.ಆರ್. ಅಂಬೇಡ್ಕರ್ ಏಕೆ ಬೌದ್ಧ ಧರ್ಮ ಸೇರಿದರು ಗೊತ್ತೆ, ಎಲ್ಲ ಧರ್ಮಗಳಲಿ ತಾಳ್ಮೆ ಇರಬೇಕು ಎಂಬ ಸ್ವಾಮಿ ವಿವೇಕಾನಂದರ ಮಾತುಗಳು ಗೊತ್ತೆ, ಬುದ್ಧ, ಬಸವ, ಅಂಬೇಡ್ಕರ್ ಅವರ ಹೆಸರು ಹೇಳುವ ಯೋಗ್ಯತೆ ಇವರಿಗೆ ಇದೆಯೇ ಎಂದು ವಾಗ್ದಾಳಿ ನಡೆಸಿದರು.
ದೇವೇಗೌಡರು ಕಾರಣ: ಶಾಸಕ ವೈಎಸ್‌ವಿ ದತ್ತ ಮಾತನಾಡಿ, ಉಪ್ಪಾರ ಸಮುದಾಯವನ್ನು ಪ್ರವರ್ಗ 1ಕ್ಕೆ ಸೇರಿಸಲು ದೇವೇಗೌಡರು ಕಾರಣರಾಗಿದ್ದು, ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಯಾವ ಪಕ್ಷದವರು ಕೇಳಿದರೂ ನೀಡಲು ಸಿದ್ಧ. 41 ವರ್ಷದ ನಂತರ ಉಪ್ಪಾರ ಸಮಾಜ ಸಮಾವೇಶ ಮಾಡುತ್ತಿದ್ದು, ಕೆಲವರು ತಮ್ಮ ರಾಜಕೀಯ ಲಾಭಕ್ಕಾಗಿ ವೇದಿಕೆ ಬಳಸಿಕೊಳ್ಳುವುದಕ್ಕೆ ಬದಲಾಗಿ ತಮ್ಮ ಇತಿಮಿತಿಯಲ್ಲಿ ಮಾತನಾಡಬೇಕು ಎಂದರು.
ದೇವೇಗೌಡರು ಹಲವು ಹಿಂದುಳಿದ ಜಾತಿಯನ್ನು ಪ್ರವರ್ಗ 1ಕ್ಕೆ ಸೇರಿಸಿ ಉದ್ಯೋಗ ಮತ್ತು ಶಿಕ್ಷಣಕ್ಕೆ ರಿಯಾಯಿತಿ ಮಾಡಿದ್ದನ್ನು ಕಳೆದ ಬಿಜೆಪಿ ಸರ್ಕಾರ ಕಿತ್ತುಹಾಕಿ ಆದಾಯ ಮಿತಿ ಮಾಡಿತು ಎಂದು ಆರೋಪಿಸಿದರು.
ಅಭಿವೃದ್ಧಿ: ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಉಪ್ಪಾರ ಸಮುದಾಯದ ಗ್ರಾಮಗಳಿಗೆ ದೇವೇಗೌಡರ, ನನ್ನ ಹಾಗೂ ರಾಜೀವ್ ಚಂದ್ರಶೇಖರ್, ರಾಮಸ್ವಾಮಿ ಮತ್ತಿತರ ರಾಜ್ಯಸಭಾ ಸದಸ್ಯರಿಂದ ಅನುದಾನ ತಂದು ಅಭಿವೃದ್ಧಿ ಮಾಡಲಾಗಿದೆ. ಉಪ್ಪಾರ ಸಮುದಾಯ ಭವನ ನಿರ್ಮಾಣಕ್ಕೆ ದೇವೇಗೌಡರು 10 ಲಕ್ಷ ಅನುದಾನ ನೀಡಿದ್ದಾರೆ. ಭವನ ನಿರ್ಮಾಣಕ್ಕೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಹೇಳಿದರು.
ಅಭಿವೃದ್ಧಿಗೆ 3.50 ಕೋಟಿ: ಶಾಸಕ ಸಿ.ಟಿ. ರವಿ ಮಾತನಾಡಿ, ನಮ್ಮ ಬಿಜೆಪಿ ಸರ್ಕಾರದಲ್ಲಿ ಉಪ್ಪಾರ ಸಮಾಜದ ಅಭಿವೃದ್ಧಿಗೆ 3.50 ಕೋಟಿ ಕೊಟ್ಟಿದ್ದೇವೆ ಎಂದ ಅವರು, ಭವಿಷ್ಯದ ನಾಯಕ ನರೇಂದ್ರ ಮೋದಿಯವರ ಕಾರ್ಯಕ್ರಮದ ಉಸ್ತುವಾರಿ ತಮಗೆ ವಹಿಸಿದ್ದು, ಹಿಂದು ಸಮಾಜ ಉಳಿಸಲು ಎಲ್ಲ ಸಮುದಾಯಗಳೂ ಕೈಜೋಡಿಸಬೇಕು. ಉಪ್ಪಾರ ಸಮಾಜದಂತೆ ಎಲ್ಲರೂ ಹಿಂದುತ್ವದ ರಕ್ಷಣೆಗೆ ಮುಂದಾಬೇಕು. ತಮಗೂ ಉಪ್ಪಾರ ಸಮಾಜಕ್ಕೂ ಅವಿನಾಭಾವ ಸಂಬಂಧವಿದೆ ಎಂದರು.
ತರೀಕರೆ ಶಾಸಕ ಜೆ.ಎಚ್.ಶ್ರೀನಿವಾಸ್ ತರೀಕೆರೆಯಲ್ಲಿ ಸಮಾಜಕ್ಕೆ ನಿವೇಶನ ದೊರಕಿಸಿ ಬೃಹತ್ ಸಮಾವೇಶ ನಡೆಸುವುದಾಗಿ ಹೇಳಿದರು. ರಾಜ್ಯ ಉಪ್ಪಾರ ಸಂಘದ ಅಧ್ಯಕ್ಷರು ಹಾಗೂ ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿ ಅವರು ಭಗೀರಥರ ಭಾವಚಿತ್ರ ಅನಾವರಣಗೊಳಿಸಿದರು.
ಜಿಲ್ಲಾ ಉಪ್ಪಾರ ನೌಕರರ ಸಂಘದ ಅಧ್ಯಕ್ಷ ಟಿ. ಆರ್. ಲಕ್ಕಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾಜದ ಜಿಲ್ಲಾಧ್ಯಕ್ಷ ಮಚ್ಚೇರಿ ಕರಿಯಪ್ಪ ಅಧ್ಯಕ್ಷತೆ ವಹಿಸಿದ್ದರು.
ಮಾಜಿ ಶಾಸಕ ಎಸ್. ಎಲ್. ಧರ್ಮೇಗೌಡ, ಜಿಪಂ ಅಧ್ಯಕ್ಷೆ ಪದ್ಮಾ ಚಂದ್ರಪ್ಪ, ಸದಸ್ಯ ಕಲ್ಮರುಡಪ್ಪ, ಜಿಪಂ ಮಾಜಿ ಅಧ್ಯಕ್ಷ ಕೆ.ಎಂ. ಕೆಂಪರಾಜು ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement