ಬೆಳೆಗೆ ಉತ್ತಮ ಬೆಲೆ ನಿಗದಿಯಾಗಲಿ
ಚಿಕ್ಕಮಗಳೂರು: ರೈತರು ಸಂಕಷ್ಟದಲ್ಲಿದ್ದಾರೆ, ಅವರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಮಾತ್ರವಲ್ಲ, ಲಾಭದಾಯಕ ಬೆಲೆಯನ್ನು ನಿಗದಿಯಾಗಬೇಕು ಎಂದು ಶಾಸಕ ಸಿ.ಟಿ. ರವಿ ಹೇಳಿದ್ದಾರೆ.
ಇಲ್ಲಿನ ಎಪಿಎಂಸಿ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸೋಮವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಕೃಷಿ ಉತ್ಸವದಲ್ಲಿ ಮಾತನಾಡಿದ ಅವರು, ರೈತ ನಷ್ಟ ಹೊಂದುತ್ತಿರುವುದರಿಂದ ರೈತರ ಮಕ್ಕಳು ಕೃಷಿ ಕಡೆಗೆ ಮುಖ ಹಾಕುತ್ತಿಲ್ಲ, ಕೃಷಿಗೆ ಸಾಮಾಜಿಕ ಗೌರವ, ಆರ್ಥಿಕ ಭದ್ರತೆ ಇಲ್ಲ, ರೈತರ ಪರಿಸ್ಥಿತಿ ಚಿಂತಜನಕವಾಗಿದೆ ಎಂದರು.
ಸರ್ಕಾರದ ಕೆಲವು ಯೋಜನೆಗಳು ರೈತರನ್ನು ಸಾಲಗಾರನ್ನಾಗಿಸಿವೆ. ಕೃಷಿಕರ ಉಳುವಿಗಾಗಿ ಇಂದಿನ ಸಮಾಜ ಮತ್ತು ಸರ್ಕಾರ ಚಿಂತಿಸುವ ಅಗತ್ಯವಿದೆ. ಇಂದು ಕೃಷಿ ಲಾಭದಾಯಕ ವಲ್ಲದ ಕಾರಣ, ದೇಶದ ಶ್ರೀಮಂತಿಕೆ ಕಡಿಮೆಯಾಗಿದೆ. ರೈತ ಬೆಳೆ ಬೆಳೆಯುತ್ತಿದ್ದಾನೆ. ಆದರೆ, ಬೆಳೆಗೆ ಬೆಲೆ ನಿಗದಿಪಡಿಸುವ ಅಧಿಕಾರವನ್ನು ಕಳೆದುಕೊಂಡಿದ್ದಾನೆ. ಹೀಗಾಗಿ ರೈತರ ಬೆಳೆಗೆ ವೈಜ್ಞಾನಿಕ ಮಾತ್ರವಲ್ಲ, ಲಾಭದಾಯಕ ಬೆಲೆ ನಿಗದಿಯಾಗಬೇಕು ಎಂದರು.
ರೈತ ಕಷ್ಟದಲ್ಲಿದ್ದಾನೆ: ಮೂಡಿಗೆರೆ ಶಾಸಕ ಬಿ.ಬಿ. ನಿಂಗಯ್ಯ ಮಾತನಾಡಿ, ಭಾರತದ ಕೃಷಿ ಹವಮಾನದೊಂದಿಗೆ ಜೂಜಾಟ ನಡೆಸುತ್ತಿದೆ ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ. ಕೃಷಿ ಕ್ಷೇತ್ರ ಜಲಾಶಯಗಳ ಮೇಲೆ ಅವಲಂಭಿತಾಗಿದೆ. ದೇಶದ ಶೇ. 50 ರಷ್ಟು ಜಿಡಿಪಿ ಮಳೆ ಆಶ್ರಿತವಾಗಿದೆ. ಆದರೂ ಕೂಡ ರೈತ ಕಷ್ಟದಲ್ಲಿದ್ದಾನೆ ಎಂದರು.
ಕೃಷಿ ನೀತಿ ಜಾರಿಗೆ ಬರಲಿ: ಮಾರುಕಟ್ಟೆಯನ್ನು ರೈತ ನಿಯಂತ್ರಣ ಮಾಡುವ ಕಾಲ ಬಂದಾಗ ಮಾತ್ರ ಕೃಷಿಕರ ಬದುಕು ಬದಲಾಗುತ್ತದೆ.
ರೈತ ಸಂತೆ ನಿರ್ಮಾಣವಾಗಬೇಕು. ಕೃಷಿ ನೀತಿ ಜಾರಿಗೆ ಬರಬೇಕು ಎಂದ ಅವರು, ರೈತರಿಗೆ ಸರ್ಕಾರ ನೀಡುತ್ತಿರುವ ಸವಲತ್ತುಗಳು ಸಮರ್ಪಕವಾಗಿ ತಲುಪಿಸುವ ನಿಟ್ಟಿನಲ್ಲಿ ಕೆಲವು ರಾಜಕಾರಣಿಗಳ ಹಾಗೂ ಅಧಿಕಾರಿಗಳ ಮನಸ್ಥಿತಿ ಬದಲಾಗಬೇಕು ಎಂದು ಕಿವಿ ಮಾತು ಹೇಳಿದರು.
ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಮಾತನಾಡಿ, ಸಮಾಜ ಮತ್ತು ನಾಗರಿಕತೆ ಪ್ರಾರಂಭಗೊಂಡಿದ್ದೆ ಕೃಷಿ ಚಟುವಟಿಕೆಯ ಮೂಲಕ. ಕೃಷಿ ಭಾರತದ ಬೆನ್ನಲೆಬು. ಆದರೆ, ಸರ್ಕಾರ ಇಂದು ರೈತರಿಗೆ ಹೆಚ್ಚು ಸಹಕಾರ ನೀಡುವಲ್ಲಿ ವಿಫಲವಾದ ಕಾರಣ, ಕೃಷಿ ಕ್ಷೇತ್ರ ನಿರೀಕ್ಷಿತ ಮಟ್ಟದಲ್ಲಿ ಬೆಳವಣಿಗೆ ಹೊಂದಿಲ್ಲ ಎಂದರು.
ಸಾವಯವ ಪದ್ಧತಿ ಬಳಸಿ: ಭೂಮಿಯಿಂದ ಹೆಚ್ಚು ಫಸಲು ನಿರೀಕ್ಷಿಸಲು ರಾಸಾಯನಿಕ ಗೊಬ್ಬರ, ಕ್ರಿಮಿನಾಶಕವನ್ನು ಹೆಚ್ಚಾಗಿ ಬಳಸಲಾಗುತ್ತಿದೆ. ಇದರಿಂದಾಗಿ ಭೂಮಿ ಬರಡಾಗುತ್ತಿದೆ. ಕೊಟ್ಟಿಗೆ ಗೊಬ್ಬರ ಮರೆತಿದ್ದೇವೆ ಎಂದ ಅವರು, ಭೂಮಿಯನ್ನು ಫಲವತ್ತತೆ ಮಾಡಬೇಕಾದರೆ ರಾಸಾಯನಿಕ ಗೊಬ್ಬರ ಬಳಕೆ ಸಂಪೂರ್ಣವಾಗಿ ಕೈಬಿಟ್ಟು ಸಾವಯವ ಕೃಷಿಗೆ ಮರಳಬೇಕು ಎಂದು ಹೇಳಿದರು.
ಕೃಷಿ ಉತ್ಸವ ಉದ್ಘಾಟಿಸಿ ಮಾತನಾಡಿದ ಪ್ರಗತಿಪರ ಕೃಷಿಕರಾದ ಕೆ.ಸಿ. ಓಂಕಾರಪ್ಪ ಮಾತನಾಡಿ, ಕೃಷಿಯ ಅವಲಂಬನೆಯಿಂದಲೇ ಇಂದು ಗ್ರಾಮೀಣ ಪ್ರದೇಶಗಳಲ್ಲಿ ಅವಿಭಕ್ತ ಕುಟುಂಬಗಳು ಜೀವಾಂತವಾಗಿವೆ. ಕೃಷಿ ಇಲ್ಲದಿದ್ದರೆ, ಅಂತಹ ಕುಟುಂಬಗಳು ಒಡೆದು ಚೂರಾಗುತ್ತಿದ್ದವು ಎಂದರು.
ಎಪಿಎಂಸಿ ಅಧ್ಯಕ್ಷ ನಿಂಗೇಗೌಡ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ, ಜಿಪಂ ಸದಸ್ಯರಾದ ಎಂ.ಎಸ್. ನಿರಂಜನ್, ಭಾಗ್ಯ ರಂಗನಾಥ್, ತಾಪಂ ಉಪಾಧ್ಯಕ್ಷ ಎಚ್.ಎಸ್. ಪುಟ್ಟೇಗೌಡ, ನಗರಸಭಾ ಸದಸ್ಯ ಎಚ್.ಡಿ. ತಮ್ಮಯ್ಯ, ಕೃಷಿ ಉತ್ಸವ ವ್ಯವಸ್ಥಾಪನಾ ಸಮಿತಿಯ ಉಪಾಧ್ಯಕ್ಷ ತೇಗೂರು ಜಗದೀಶ್, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಗೀತಾ ಉಪಸ್ಥಿತರಿದ್ದರು.