ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಕೃಷಿಯನ್ನೂ ಕೈಗಾರಿಕೆಯಾಗಿ ಪರಿಗಣಿಸಲಿ

Vishwanath S
Updated On : 19 Feb 2014, 11:22 am

ಕ.ಪ್ರ.ವಾರ್ತೆ ಟಿ ಕಡೂರು ಟಿ ಫೆ.18
ಕೈಗಾರಿಕೆ, ತೋಟಗಾರಿಕೆ, ಹೈನುಗಾರಿಕೆಯಂತೆ ಕೃಷಿಯನ್ನೂ ಕೈಗಾರಿಕೆ ಎಂದು ಪರಿಗಣಿಸಿದಲ್ಲಿ ದೇಶಕ್ಕೆ ಅನ್ನ ನೀಡುತ್ತಿರುವ ರೈತರ ಬದುಕು ಹಸನಾಗುವ ಮೂಲಕ ಆತನ ಉತ್ಪಾದನೆಗೆ ತಕ್ಕ ಬೆಲೆ ಸಿಗುತ್ತದೆ ಎಂದು ಶಾಸಕ ವೈ.ಎಸ್.ವಿ. ದತ್ತ ಅಭಿಪ್ರಾಯಿಸಿದರು.
ಇಲ್ಲಿನ ಮಲ್ಲೇಶ್ವರದ ಶ್ರೀಸ್ವರ್ಣಾಂಬ ಸನ್ನಿಧಾನದಲ್ಲಿ ನಡೆದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಶ್ರೀಸ್ವರ್ಣಾಂಬ ಸನ್ನಿಧಿ ಸೇರಿದಂತೆ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಆಯೋಜಿಸಿದ್ದ ತಾಲೂಕು ಕೃಷಿ ಉತ್ಸವ- 2014 ಅನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೃಷಿ ಉಳಿಸಿಕೊಳ್ಳುವ ಅನಿವಾರ್ಯ:  ಇಂದು ಕೃಷಿ ಕ್ಷೇತ್ರಕ್ಕೆ ವಿಪತ್ತು ಬಂದು ರೈತರು ಆತಂಕ ಎದುರಿಸುವಂತಾಗಿದೆ. ಇದಕ್ಕೆ ಸರಿಯಾದ ಪರಿಹಾರ ಕಂಡುಹಿಡಿಯುವ ನಿಟ್ಟಿನಲ್ಲಿ ಎಲ್ಲ ರೀತಿಯ ಪ್ರಯತ್ನ ಮಾಡಿ ಪರಿಹಾರ ಕಂಡುಕೊಳ್ಳದಿದ್ದಲ್ಲಿ ರೈತರ ಬದುಕು ಹಸನಾಗುವಂತೆ ಮಾಡಲು ಸಾಧ್ಯವಿಲ್ಲ. ಮಹಿಳೆಯರೂ ಕೂಡ ತಮ್ಮ ಗಂಡಂದಿರ ಜೊತೆ ಹೈನುಗಾರಿಕೆ, ಪುಷ್ಪೋದ್ಯಮದಂತ ಕೃಷಿ ಮಾಡಿ ಕೃಷಿ ಉಳಿಸಿಕೊಳ್ಳುವ ಅನಿವಾರ್ಯತೆ ಬಂದಿದೆ ಎಂದರು.
ಈ ನಿಟ್ಟಲ್ಲಿ 2004ರಲ್ಲಿ ಮಾಜಿ ಪ್ರಧಾನಿ ದೇವೇಗೌಡರು ನಾವು, ರೈತರು ಹಾಗು ಕೃಷಿ ತಜ್ಞರೊಂದಿಗೆ ಸಮಾಲೋಚಿಸಿ ಒಂದು ವರದಿ ಸಿದ್ದಪಡಿಸಿ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ವಾಜಪೇಯಿ ಅವರಿಗೆ ಮಾಗ್ನಕಾರ್ಟ ಎಂಬ ಹೆಸರಿನ ಮನವಿ ನೀಡಿ ಆ ಸನ್ನದನ್ನು ಕೃಷಿಯನ್ನು ಕೈಗಾರಿಕೆ ಎಂದು ಪರಿಗಣಿಸಿ ಜಾರಿಗೊಳಿಸುವಂತೆ ಒತ್ತಾಯಿಸಲಾಯಿತು.  ಆನಂತರ ಬಂದ ಮನಮೋಹನ ಸಿಂಗ್ ಸರ್ಕಾರಕ್ಕೂ ಒತ್ತಾಯ ಮಾಡಿದರೂ ಕೂಡ ಆಳುತ್ತಿರುವವರು ಈ ದೇಶದ ರೈತರ ಬಗ್ಗೆ ಚಿಂತನೆ ಮಾಡದ ಪರಿಣಾಮ ಕೃಷಿಯು ಬೇಸಾಯ ಮನೆ ಮಂದಿಯೆಲ್ಲಾ ಸಾಯ ಎಂಬ ಸ್ಥಿತಿಗೆ ಬಂದು ನಿಂತಿದೆ ಎಂದರು.
ಈ ನಿಟ್ಟಲ್ಲಿ ರೈತರಲ್ಲಿ ಆಶಾಭಾವನೆ ಮೂಡಿಸುತ್ತಿರುವ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಬರಪೀಡಿತ ಕಡೂರು ತಾಲೂಕಿನಲ್ಲಿ ಕೃಷಿ ಉತ್ಸವ ಹಮ್ಮಿಕೊಂಡು ಬಡ ರೈತರು ತಮ್ಮ ಬದುಕು ಹಸನು ಮಾಡಿಕೊಳ್ಳಲು ಅನುಕೂಲವಾಗುವಂತೆ ಮಾಡುತ್ತಿರುವ ಕಾರ್ಯ ಶ್ಲಾಘನೀಯ. ಆದರೆ, ಇಂತಹ ಕಾರ್ಯಗಳಿಗೆ ಎಲ್ಲ ಜನಪ್ರತಿನಿಧಿಗಳ ಸಹಕಾರದ ಅಗತ್ಯವಿದೆ ಎಂದರು.
ರೈತರನ್ನು ಪ್ರೋತ್ಸಾಹಿಸಿ:  ವಸ್ತು ಪ್ರದರ್ಶನ ಮಳಿಗೆ ಉದ್ಘಾಟಿಸಿದ ಯೋಜನೆಯ ಕಾರ್ಯನಿರ್ವಾಹಕ ಡಾ. ಎಲ್.ಎಚ್. ಮಂಜುನಾಥ್ ಮಾತನಾಡಿ, 1991ರಲ್ಲಿ ಬೆಳ್ತಂಗಡಿಯಲ್ಲಿ ಶ್ರೀಕ್ಷೇತ್ರದಿಂದ ಆರಂಭಗೊಂಡು ಕೃಷಿ ಮೇಳಗಳು ರಾಜ್ಯದ ಎಲ್ಲೆಡೆ ನಡೆಸುವ ಮೂಲಕ ರೈತರಲ್ಲಿ ಜಾಗೃತಿ ಮೂಡಿಸಿ ಸಣ್ಣ ರೈತರನ್ನು ಪ್ರೋತ್ಸಾಹಿಸಿ ಆರ್ಥಿಕ ಸ್ವಾವಲಂಬಿಗಳಾಗಿ ಮಾಡುವ ಸದುದ್ದೇಶದಿಂದ ಕೃಷಿ ಉತ್ಸವ ಮಾಡಲಾಗುತ್ತಿದೆ. ಆದರೆ ಸರ್ಕಾರಗಳು ರೈತರ ಬೆಳೆಗಳಿಗೆ ತಕ್ಕ ಬೆಲೆ ನಿಗದಿಪಡಿಸದೆ ರೈತರ ಉತ್ಪನ್ನಗಳಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಸರ್ಕಾರವು ಮಧ್ಯವರ್ತಿಗಳ ಹಾವಳಿ ತಪ್ಪಿಸಿ ಬೆಳೆಗೆ ತಕ್ಕಬೆಲೆ ನಿಗದಿಪಡಿಸಿದಲ್ಲಿ ರೈತರು ಬೇರೆಡೆ ಕೈ ಚಾಚಬೇಕಿಲ್ಲ. ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ದುಡಿದಲ್ಲಿ ಆರ್ಥಿಕವಾಗಿ ರೈತರು ಮೇಲೆ ಬರಲು ಸಾಧ್ಯ. ಇದರ ಜಾಗೃತಿ ಮೂಡಿಸುವ ಉದ್ದೇಶವೇ ಕೃಷಿ ಮೇಳ ಎಂದು ಹೇಳಿ, ರೈತ ಮಹಿಳೆಯರೂ ಸಹ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಮಾಹಿತಿ:  ಪ್ರಾಸ್ತಾವಿಕವಾಗಿ ತಾಲೂಕು ಯೋಜನಾಧಿಕಾರಿ ಎ.ದಿನೇಶ್ ಮಾತನಾಡಿ, 2007ರಲ್ಲಿ ಕಡೂರು ತಾಲೂಕಿನಲ್ಲಿ ಆರಂಭಗೊಂಡ ಶ್ರೀಕ್ಷೇತ್ರದ ಯೋಜನೆಯು ಗುರಿ ಮೀರಿ ಸಾಧನೆ ಮಾಡಿದೆ. 630 ಪ್ರಗತಿ ಬಂಧು ತಂಡಗಳಿದ್ದು 119 ಒಕ್ಕೂಟ ರಚಿಸಲಾಗಿದೆ. ಸಂಪೂರ್ಣ ಸುರಕ್ಷತಾ ಕಾರ್ಯಕ್ರಮದಲ್ಲಿ 10,472 ಸದಸ್ಯರಿಗೆ ಈವರೆಗೆ 1.39 ಕೋಟಿ ಸಹಾಯಧನ ವಿತರಿಸಿದೆ ಎಂದರು.
ಶ್ರೀಸ್ವರ್ಣಾಂಬ ಸನ್ನಿಧಾನದ ವ್ಯವಸ್ಥಾಪಕರಾದ ಎಂ.ಟಿ.ಶ್ರೀನಿವಾಸ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
 ದೇವಾಲಯದ ಕಾರ್ಯದರ್ಶಿ ಎಂ.ವೈ. ಚಂದ್ರಶೇಖರ್, ಜಿ.ಪಂ. ಸದಸ್ಯೆ ಮಾಲಿನಿಬಾಯಿ ರಾಜನಾಯ್ಕ, ತಾ.ಪಂ. ಅಧ್ಯಕ್ಷ ಕೆ.ಎಂ. ಬಸವರಾಜು, ಮಲ್ಲೇಶ್ವರ ಗ್ರಾ.ಪಂ. ಅಧ್ಯಕ್ಷ ರಾಜಾನಾಯ್ಕ, ದಂಡಾವತಿ ಅಂಡ್ ಕಂಪನಿಯ ಡಿ.ವಿ. ಬಾಹುಬಲಿ ದಂಡಾವತಿ, ಯೋಜನೆಯ ಜಿಲ್ಲಾಧಿಕಾರಿ ಗೀತಾ, ಸೀಗೇಹಡ್ಲು ಹರೀಶ್, ಶೂದ್ರ ಶ್ರೀನಿವಾಸ್, ಸಂತೋಷ್ ಮತ್ತಿತರರು ಉಪಸ್ಥಿತರಿದ್ದರು.
ಮಹಿಳೆಯರೂ ಕೂಡ ತಮ್ಮ ಗಂಡಂದಿರ ಜೊತೆ ಹೈನುಗಾರಿಕೆ, ಪುಷ್ಪೋದ್ಯಮದಂತ ಕೃಷಿ ಮಾಡಿ ಕೃಷಿ ಉಳಿಸಿಕೊಳ್ಳುವ ಅನಿವಾರ್ಯತೆ ಬಂದಿದೆ.
ಟಿ ವೈಎಸ್‌ವಿ ದತ್ತ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement