ರಸ್ತೆ ದುರಸ್ತಿಗೆ ಆಗ್ರಹಿಸಿ ಮರಳು ಲಾರಿ ತಡೆದ ಗ್ರಾಮಸ್ಥರು
ಕೊಪ್ಪ: ಮರಳು ಸಾಗಣೆಯಿಂದ ಹಾಳುಬಿದ್ದಿರುವ ರಸ್ತೆ ದುರಸ್ತಿಗೊಳಿಸುವರೆಗೆ ಮರಳು ಸಾಗಣೆಗೆ ಅವಕಾಶ ನೀಡುವುದಿಲ್ಲ ಎಂದು ಭುವನಕೋಟೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಜೋಗಿನಹಿತ್ಲು ಗ್ರಾಮಸ್ಥರು ರಸ್ತೆಗೆ ಅಡ್ಡ ಕುಳಿತು ಪ್ರತಿಭಟನೆ ನಡೆಸಿದರು.
ತುಂಗಾನದಿ ಬಯಲಿನ ಮುಳ್ಳೊಳ್ಳಿ ಮರಳು ಕ್ವಾರೆಯಿಂದ ಮರಳು ಎತ್ತುವಳಿಗೆ ಅವಕಾಶ ನೀಡುವುದಾಗಿ ಲೋಕೊಪಯೋಗಿ ಇಲಾಖೆ ನೀಡಿದ್ದ ಸೂಚನೆ ಆಧರಿಸಿ, ನೂರಾರು ಮರಳು ಸಾಗಣೆ ವಾಹನಗಳು ಮರಳು ಕ್ವಾರೆಗೆ ಆಗಮಿಸಿದ್ದವು. ಗ್ರಾಮಸ್ಥರು ಪ್ರತಿಭಟನೆಯಿಂದ ಮರಳು ತುಂಬಿಕೊಳ್ಳಲಾಗದೇ ಖಾಲಿ ವಾಹನಗಳು ಹಿಂತಿಗುಗಿದವು. ಲೋಕೋಪಯೋಗಿ ಎಂಜಿನಿಯರ್ ಜಯರಾಂ ಹಾಗೂ ಸಿಬ್ಬಂದಿ ಭುವನಕೋಟೆ ಗ್ರಾಪಂ ಅಭಿವೃದ್ಧಿ ಅಧಿಕಾರಿ ಚೇತನ್, ತಾಪಂ ಸದಸ್ಯ ಬೆಳಗೊಳ ರಮೇಶ್ ಗ್ರಾಮಸ್ಥರ ಮನವೊಲಿಸುವ ಎಲ್ಲ ಯತ್ನಗಳು ವಿಫಲವಾದ ಹಿನ್ನೆಲೆಯಲ್ಲಿ ಮರಳು ಎತ್ತುವಳಿ ಕೈಬಿಡಲಾಯಿತು.
ವಿಶ್ವನಾಥಪುರದಿಂದ ಮುಳ್ಳೊಳ್ಳಿ ಮರಳು ಕ್ವಾರೆಗೆ ತೆರಳುವ ಜೋಗಿನಹಿತ್ಲು 2 ಕೀ.ಮಿ. ಜಿಲ್ಲಾ ಪಂಚಾಯಿತಿ ರಸ್ತೆ ಕಳೆದ 10 ವರ್ಷಗಳಿಂದ ದುರಸ್ತಿ ಕಂಡಿಲ್ಲ. ಕಳೆದ 3 ವರ್ಷಗಳಿಂದ ಈ ರಸ್ತೆಯಲ್ಲಿ ಮರಳು ಸಾಗಣೆ ವಾಹನಗಳು ಸಂಚಾರಿಗೆ ರಸ್ತೆ ಸಂಪೂರ್ಣ ಹೊಂಡದ ಗುಂಡಿಯಾಗಿ ಜನ-ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ವಿಶ್ವನಾಥಪುರ ಮತ್ತು ಜೋಗಿನಹಿತ್ಲು ನಡುವಿನ 2 ಕಿ.ಮೀ. ರಸ್ತೆ ಡಾಂಬರೀಕರಣ ಮಾಡುವವರೆಗೆ ಮರಳು ಎತ್ತುವಳಿಗೆ ಅವಕಾಶ ನೀಡುವುದಿಲ್ಲ ಎಂದು ಗ್ರಾಮಸ್ಥರು ಪಟ್ಟುಹಿಡಿದರು.
3 ವರ್ಷದ ಹಿಂದೆ ರಾಜಧನದಿಂದ ಪಂಚಾಯಿತಿಗೆ 2.5 ಲಕ್ಷ ಅನುದಾನ ದೊರೆಯುತ್ತಿದ್ದರೂ ರಸ್ತೆ ದುರಸ್ತಿಗೆ ಗಮನಹರಿಸಿಲ್ಲ. ಭರವಸೆಗಳಿಗೆ ಸ್ಥಳೀಯರು, ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದರು.
ಕವಿರಾಜ್, ಚಿದಾನಂದ, ಅಶೋಕ್, ನಾಗರಾಜ್ ಭಟ್, ಅಲಸುಗೋಡು ದಿನೇಶ್ ಭಟ್, ಪುಟ್ಟಯ್ಯ, ಶೇಷಕುಮಾರ್, ಮಂಜಮ್ಮ, ಹೊಸಬಯ್ಯ, ನಾಗೇಶ್, ಪುಟ್ಟಯ್ಯ, ಸುಬ್ಬಣ್ಣಗೌಡ ಪ್ರತಿಭಟನೆಯಲ್ಲಿದ್ದರು.