ವೈಭವಯುತ ಶ್ರೀಶಾರದಾಂಬೆ ಮಹಾರಥೋತ್ಸವ
ಶೃಂಗೇರಿ: ದಕ್ಷಿಣಾನಮ್ನಾಯ ಶ್ರೀಶಾರದಾ ಪೀಠದ ಜಗದ್ಗುರು ಮಹಾಸಂಸ್ಥಾನದ ಆರಾಧ್ಯ ದೇವತೆ ಶ್ರೀಶಾರದಾಂಬೆಯ ಮಹಾರಥೋತ್ಸವ ಮಂಗಳವಾರ ವೈಭವಯುತವಾಗಿ ಜರುಗಿತು.
ಜಗದ್ಗುರು ಶ್ರೀಭಾರತೀತೀರ್ಥ ಮಹಾಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ಮಹಾರಥೋತ್ಸವ ನಡೆಯಿತು. ರಥೋತ್ಸವದಲ್ಲಿ ಶ್ರೀಮಠದ ಆನೆಗಳಾದ ಲಕ್ಷ್ಮಿ, ಜಯಲಕ್ಷ್ಮಿ, ತಟ್ಟಿರಾಯ, ಹಸು, ವಾದ್ಯ, ಛತ್ರ ಛಾಮರ,ನೂರಾರು ವಿಪ್ರೋತ್ತಮರ ವೇದಘೋಷಗಳು, ವಾದ್ಯ ಸಂಗೀತ, ವಿಶೇಷ ಮೆರಗು ನೀಡಿದವು. ಪಟ್ಟಣದ ಜನತೆ ರಸ್ತೆಯ 2 ಕಡೆಗಳಲ್ಲಿ ನಿಂತು ಭಕ್ತಿಭಾವದಿಂದ ಶಾರದಾಂಬೆಯನ್ನು ನಮಿಸುತ್ತಿದ್ದರು. ರಥ ಸಾಗುವ ಮುನ್ನ ಸ್ವಚ್ಛಗೊಳಿಸಿದ್ದ ರಸ್ತೆಯಲ್ಲಿ ಮಹಿಳೆಯರು ರಂಗೋಲಿ, ಚಿತ್ತಾರಗಳಿಂದ ಸಿಂಗರಿಸಿದ್ದರು. ಸುಡು ಬಿಸಿಲನ್ನು ಲೆಕ್ಕಿಸದೇ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಮಹಾರಥೋತ್ಸವದಲ್ಲಿ ಪಾಲ್ಗೊಂಡಿದ್ದರು.
ಶುಕ್ರವಾರದಿಂದ ಶಾರದಾಂಬೆ ಹೆಸರಿನಲ್ಲಿ ವಿಶೇಷ ಪೂಜೆ ಸೇರಿದಂತೆ ಹೋಮಗಳು, ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದವು. ಸೋಮವಾರ ಶ್ರೀಗಳು ಶಾರದಾಂಬೆಗೆ ವಿಶೇಷ ಪೂಜೆ ನೆರವೇರಿಸಿದರು. ಸಂಜೆ ಬೀದಿ ಉತ್ಸವ ನಡೆಯಿತು. ಬುಧವಾರ ಶ್ರೀಗಳ ದಿವ್ಯ ಸನ್ನಿಧಿಯಲ್ಲಿ ಶತಚಂಡೀ ಮಹಾಯಾಗದ ಪೂರ್ಣಾಹುತಿ ನಡೆಯಲಿದೆ. ನಂತರ ರಥೋತ್ಸವ ಅಂಗವಾಗಿ ಶಾರದೆಗೆ ಅವಭೃತ, ಸಂಜೆ ತುಂಗಾನದಿಯಲ್ಲಿ ತೆಪ್ಪೋತ್ಸವ ಸಂಜೆ ಬೀದಿ ಉತ್ಸವ ನಡೆಯಲಿದೆ.